ನವದೆಹಲಿ: 18ನೇ ಲೋಕಸಭಾ ಚುನಾವಣೆಯಲ್ಲಿ ವಿಜೇತರಾದ ನೂತನ ಸದಸ್ಯರು ಸೋಮವಾರ ಸಂಸತ್‌ನ ಮೊದಲ ಅಧಿವೇಶನದಲ್ಲಿ ಕನ್ನಡ, ಬೆಂಗಾಲಿ, ಸಂಸ್ಕೃತ, ಒಡಿಯಾ, ಹಿಂದಿ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸದರು. ಕೆಲವರು ಇಂಗ್ಲೀಷ್‌ನಲ್ಲೂ ಪ್ರಮಾಣ ವಚನ ಸ್ವೀಕರಿಸಿದರು. ಎಲ್ಲಾ ಸಂಸದರಿಗೂ ಹಂಗಾಮಿ ಸ್ವೀಕರ್ ಭರ್ತೃಹರಿ ಮೆಹ್ತಾಬ್ ಅವರು ಪ್ರಮಾಣ ವಚನ ಬೋಧಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಆಡಳಿತ ಪಕ್ಷದ ಸದಸ್ಯರ ಕಡೆಯಿಂದ ಜೈ ಶ್ರೀರಾಮ್ ಎಂಬ ಘೋಷಣೆ ಕೇಳಿಬಂತು. ಇನ್ನು ಕರ್ನಾಟಕದಿಂದ ಆಯ್ಕೆಯಾದ ಸಚಿವ ಎಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಅವರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದರು. ಉಳಿದಂತೆ ಹೊಸ ಸಂಸದರು ಬೆಂಗಾಲಿ, ಸಂಸ್ಕೃತ, ಡೋಗ್ರಿ, ಒಡಿಯಾ, ಅಸ್ಸಾಮಿ, ತೆಲುಗು, ಮಲಯಾಳಂ, ಮರಾಠಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿ ಭಾಷಾ ವೈವಿದ್ಯತೆಯನ್ನು ಪ್ರದರ್ಶಿಸಿದರು.
==
3ನೇ ಬಾರಿ ಲೋಕಸಭಾ ಸದಸ್ಯರಾಗಿ ಮೋದಿ ಪ್ರಮಾಣ
ನವದೆಹಲಿ: ಐತಿಹಾಸಿಕವಾಗಿ ಸತತ ಮೂರನೇ ಬಾರಿಗೆ ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದ ನರೇಂದ್ರ ಮೋದಿ ಸೋಮವಾರ ಸತತ ಮೂರನೇ ಬಾರಿಗೆ ಲೋಕಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರೊಂದಿಗೆ ಸಂಸತ್‌ಗೆ ಪ್ರವೇಶಿಸಿದ ಪ್ರಧಾನಿ ಮೋದಿ, ರಾಷ್ಟ್ರಗೀತೆಯ ಬಳಿಕ ಮೊದಲಿಗರಾಗಿ ಮಂದಹಾಸ ಬೀರುತ್ತಾ ಶ್ರೀರಾಮನ ಹೆಸರಿನಲ್ಲಿ ಸಂಸದ ಸ್ಥಾನದ ಪ್ರಮಾಣ ಸ್ವೀಕರಿಸಿದರು. ಈ ವೇಳೆ ರಾಹುಲ್ ಗಾಂಧಿಯೂ ಸೇರಿದಂತೆ ವಿಪಕ್ಷಗಳ ಬಹುತೇಕ ಸದಸ್ಯರು ನರೇಂದ್ರ ಮೋದಿಯತ್ತ ಸಂವಿಧಾನದ ಪುಸ್ತಕವನ್ನು ಪ್ರದರ್ಶಿಸಿದರೆ, ಆಡಳಿತ ಪಕ್ಷಗಳ ಸದಸ್ಯರು ಜೈಶ್ರೀರಾಂ ಘೋಷಣೆಯನ್ನು ಕೂಗಿ ಗಮನ ಸೆಳೆದರು.ನರೇಂದ್ರ ಮೋದಿ 18ನೇ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ವಿರುದ್ಧ 1.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.
ನರೇಂದ್ರ ಮೋದಿ ಮೊದಲ ಬಾರಿಗೆ 2014ರಲ್ಲಿ ಸಂಸದರಾಗಿ ಪ್ರಮಾಣ ಸ್ವೀಕರಿಸಿದ್ದರೆ, 2ನೇ ಬಾರಿಗೆ 2019ರಲ್ಲಿ ಪ್ರಮಾಣ ಸ್ವೀಕರಿಸಿದ್ದರು.
==
ನಡ್ಡಾಗೆ ರಾಜ್ಯಸಭಾ ನಾಯಕನ ಪಟ್ಟನವದೆಹಲಿ: ಕೇಂದ್ರ ಆರೋಗ್ಯ ಖಾತೆ ಸಚಿವರಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಇದೀಗ ರಾಜ್ಯಸಭೆಯಲ್ಲಿನ ಆಡಳಿತ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ಇದುವರೆಗೂ ಈ ಹುದ್ದೆಯಲ್ಲಿದ್ದ ಪಿಯೂಷ್ ಗೋಯಲ್, ಈ ಬಾರಿ ಮುಂಬೈನಿಂದ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರ ಸ್ಥಾನವನ್ನು ನಡ್ಡಾ ತುಂಬಲಿದ್ದಾರೆ.ಹಾಲಿ ಬಿಜೆಪಿ ಅಧ್ಯಕ್ಷರೂ ಆಗಿರುವ ನಡ್ಡಾ ಅವರ ಅವಧಿ ಮಾ.30ಕ್ಕೇ ಮುಗಿದರೂ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೂ.30ರವರೆಗೆ ವಿಸ್ತರಿಸಲಾಗಿತ್ತು. ಸದ್ಯವೇ ಬಿಜೆಪಿ ತನ್ನ ಸಂಘಟನೆಯನ್ನು ಪುನರ್ ರಚನೆ ಮಾಡುವ ಕೆಲಸ ಮಾಡಲಿದ್ದು, ಅದರ ಅರ್ಧದಷ್ಟು ಕೆಲಸ ಆದ ಬಳಿಕ ನಡ್ಡಾ ಅಧ್ಯಕ್ಷ ಹುದ್ದೆಯಿಂದ ಕೆಳಗೆ ಇಳಿಯಲಿದ್ದಾರೆ ಎನ್ನಲಾಗಿದೆ.