ಇಂದು ಭಾರತ- ಇಯು ನಡುವೆ ‘ಮದರ್ ಆಫ್ ಆಲ್‌ ಡೀಲ್ಸ್’?

KannadaprabhaNewsNetwork |  
Published : Jan 27, 2026, 03:00 AM ISTUpdated : Jan 27, 2026, 04:16 AM IST
EU Chief Ursula von der Leyen

ಸಾರಾಂಶ

ಮದರ್‌ ಆಫ್‌ ಆಲ್‌ ಡೀಲ್ಸ್‌  ಎಂದೇ ಕರೆಯಲ್ಪಡುವ ಭಾರತ ಮತ್ತು ಯುರೋಪ್‌ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಮಂಗಳವಾರ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ.  ಮುಕ್ತ ವ್ಯಾಪಾರ ಒಪ್ಪಂದಕ್ಕೆ  ಟ್ರಂಪ್‌ ನಾನಾ ಕ್ಯಾತೆ ತೆಗೆಯುತ್ತಿರುವ ಹೊತ್ತಿನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

ನವದೆಹಲಿ: ಮದರ್‌ ಆಫ್‌ ಆಲ್‌ ಡೀಲ್ಸ್‌ (ಎಲ್ಲಾ ಒಪ್ಪಂದಗಳ ತಾಯಿ) ಎಂದೇ ಕರೆಯಲ್ಪಡುವ ಭಾರತ ಮತ್ತು ಯುರೋಪ್‌ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಮಂಗಳವಾರ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. ರಷ್ಯಾದಿಂದ ತೈಲ ಖರೀದಿಗೆ ಅಡ್ಡಿ, ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಾನಾ ಕ್ಯಾತೆ ತೆಗೆಯುತ್ತಿರುವ ಹೊತ್ತಿನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

ಈ ಪ್ರಸ್ತಾವಿತ ಒಪ್ಪಂದ ಜಾರಿಯಾದರೆ ಅದು ಭಾರತ ಮತ್ತು ಯುರೋಪ್‌ನ 200 ಕೋಟಿ ಜನರ ಜನಜೀವನ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ. ಜೊತೆಗೆ ಒಪ್ಪಂದ ಮೌಲ್ಯ ಜಗತ್ತಿನ ಒಟ್ಟು ಜಿಡಿಪಿಯ ಶೇ.25ರಷ್ಟು ಇರುವ ನಿರೀಕ್ಷೆ ಇದೆ. ಹೀಗಾಗಿಯೇ ಒಪ್ಪಂದದ ಭಾರೀ ಗಮನ ಸೆಳೆದಿದೆ.

ಒಂದು ವೇಳೆ ಈ ಒಪ್ಪಂದವೇನಾದರೂ ಊರ್ಜಿತಗೊಂಡರೆ ಯುರೋಪಿನಿಂದ ಆಮದಾಗುವ ಕಾರುಗಳ ಮೇಲಿನ ತೆರಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಶೇ.40ಕ್ಕೆ ಇ‍ಳಿಕೆಯಾಗುವ ನಿರೀಕ್ಷೆ ಇದೆ. ಇದಲ್ಲದೆ, ಯುರೋಪ್‌ನ ಇನ್ನೂ ಹಲವು ವಸ್ತುಗಳು ಅಗ್ಗವಾಗಲಿವೆ.

ದೆಹಲಿಯಲ್ಲಿ ಮಂಗಳವಾರ ಆಯೋಜಿಸಿರುವ ಇಂಡಿಯಾ-ಯುರೋಪಿಯನ್‌ ಯೂನಿಯನ್‌ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುರೋಪಿಯನ್‌ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್‌ ಡರ್‌ ಲೆಯೆನ್‌ ಮತ್ತು ಯುರೋಪಿಯನ್‌ ಕೌನ್ಸಿಲ್‌ ಅಧ್ಯಕ್ಷ ಅಂಟಾನಿಯೋ ಕೋಸ್ಟಾ ಅವರ ಜತೆಗೆ ಮಾತುಕತೆ ನಡೆಸಲಿದ್ದಾರೆ.

ಈ ಶೃಂಗದಲ್ಲಿ ವ್ಯಾಪಾರ ಮತ್ತು ಭದ್ರತೆ ಹಾಗೂ ಅಮೆರಿಕದ ನೀತಿಗಳಿಂದಾಗಿ ಎದುರಾಗಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳ ಕುರಿತು ಚರ್ಚೆ ನಡೆಯಲಿದೆ. ಇದೇ ವೇಳೆ ಸಭೆಯಲ್ಲಿ ಇಯು-ಭಾರತ ವ್ಯಾಪಾರ ಒಪ್ಪಂದ ಯಾವಾಗ ಜಾರಿಗೆ ಬರಲಿದೆ ಎಂಬ ಕುರಿತು ಅಂತಿಮ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ.

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆದ 77ನೇ ಗಣರಾಜ್ಯೋತ್ಸವದಲ್ಲಿ ಕೋಸ್ಟ ಮತ್ತು ವಾನ್‌ ಡೆರ್‌ ಲೆಯೆನ್‌ ಅವರು ಸೋಮವಾರ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

2024-2025ನೇ ಸಾಲಿನಲ್ಲಿ ಯುರೋಪಿಯನ್‌ ಯೂನಿಯನ್‌ ಜತೆಗೆ ಭಾರತ 12 ಲಕ್ಷ ಕೋಟಿ ರುಪಾಯಿಯಷ್ಟು ವ್ಯಾಪಾರ ವಹಿವಾಟು ನಡೆಸಿದೆ.

ವಿದೇಶಿ ಕಾರು ಅಗ್ಗ ಸಂಭವ:

ಭಾರತ ಮತ್ತು ಯುರೋಪಿಯನ್‌ ಒಕ್ಕೂಟದ ಜತೆಗೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಟ್ಟರೆ ಯುರೋಪಿನಿಂದ ಆಮದಾಗುವ ಪೋಕ್ಸ್‌ವ್ಯಾಗನ್‌, ರೆನಾಲ್ಟ್‌, ಮರ್ಸಿಡಿಸ್‌ ಬೆನ್ಜ್‌, ಬಿಎಂಡಬ್ಲ್ಯು ಮತ್ತು ಸ್ಟೆಲ್ಲಾಂಟಿಸ್‌ ಕಾರುಗಳ ಮೇಲಿನ ತೆರಿಗೆ ಶೇ.40ಕ್ಕೆ ಇಳಿಯಲಿದೆ. ಸದ್ಯ ಇವುಗಳ ಮೇಲಿನ ತೆರಿಗೆ ಶೇ.70ರಿಂದ 110ರಷ್ಟಿದೆ. 16.28 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಕಾರುಗಳ ಮೇಲಿನ ತೆರಿಗೆಯನ್ನು ತಕ್ಷಣದಿಂದಲೇ ಶೇ.40ಕ್ಕೆ ಇಳಿಸಲಾಗುವುದು. ಮುಂದೆ ಈ ತೆರಿಗೆಯು ಹಂತ ಹಂತವಾಗಿ ಶೇ.10ರ ವರೆಗೆ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.

ಈ ರೀತಿ ತೆರಿಗೆ ಕಡಿತದಡಿ ವರ್ಷಕ್ಕೆ 2 ಲಕ್ಷ ಕಾರುಗಳ ಆಮದಿಗೆ ಅವಕಾಶ ನೀಡುವ ಉದ್ದೇಶವಿದೆ. ಕೊನೆಯ ಕ್ಷಣದಲ್ಲಿ ಈ ಸಂಖ್ಯೆ ಬದಲಾದರೂ ಆಗಬಹುದು. ಆದರೆ, ಈ ಒಪ್ಪಂದದಿಂದ ಎಲೆಕ್ಟ್ರಿಕ್ ವಾಹನಗಳನ್ನು 5 ವರ್ಷಗಳ ಕಾಲ ಹೊರಗಿಡಲಾಗಿದೆ ಎಂದು ಹೇಳಲಾಗಿದೆ.

ಐರೋಪ್ಯ ಒಕ್ಕೂಟ ನಾಯಕರ ಜತೆ ಇಂದು ಮೋದಿ ಚರ್ಚೆ, ಬಳಿಕ ಘೋಷಣೆ?

ಈ ಒಪ್ಪಂದಿಂದ ಭಾರತ- ಯುರೋಪ್‌ ನಡುವೆ ವ್ಯಾಪಾರ, ವಹಿವಾಟು ಸುಗಮ

ಡೀಲ್‌ ಮೊತ್ತ ವಿಶ್ವದ ಜಿಡಿಪಿಯ ಶೇ.25, 200 ಕೋಟಿ ಜನರ ಮೇಲೆ ಪರಿಣಾಮ

ಅಮೆರಿಕದ ಮೇಲೆ ಭಾರತದ ಅವಲಂಬನೆ ಇಳಿಕೆ. ಭಾರತಕ್ಕೆ ಹೊಸ ಮಾರುಕಟ್ಟೆ

ತೆರಿಗೆ ಮೂಲಕ ಭಾರತ ಕಟ್ಟಿಹಾಕುವ ಟ್ರಂಪ್‌ ಪ್ರಯತ್ನಕ್ಕೆ ಭಾರತ- ಇಯು ಏಟು---

ಸಂಬಂಧ ಗಟ್ಟಿ

ಗಣರಾಜ್ಯ ದಿನಕ್ಕೆ ಇಯು ನಾಯಕರ ಆಗಮನ ಭಾರತ - ಐರೋಪ್ಯ ಒಕ್ಕೂಟದ ಪಾಲುದಾರಿಕೆಯ ಬೆಳೆಯುತ್ತಿರುವ ಶಕ್ತಿ ಮತ್ತು ಮೌಲ್ಯಗಳಿಗೆ ನಮ್ಮ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಈಗ ಅವರಿಗೆ ಆತಿಥ್ಯ ನೀಡುವ ಸೌಭಾಗ್ಯ ಭಾರತಕ್ಕೆ ಸಿಕ್ಕಿದೆ. ಈ ಭೇಟಿಯು ಉಭಯ ಪ್ರದೇಶಗಳ ನಡುವಿನ ಸಂಬಂಧ ಮತ್ತು ಸಹಕಾರ ವೃದ್ಧಿಗೆ ಸಾಕ್ಷಿಯಾಗಲಿದೆ.

- ನರೇಂದ್ರ ಮೋದಿ ಪ್ರಧಾನ ಮಂತ್ರಿ

ಯಶಸ್ವಿ ಭಾರತದಿಂದ ಜಗತ್ತು ಸ್ಥಿರ

‘ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸುವುದು ಜೀವಮಾನದ ಗೌರವ. ಯಶಸ್ವಿ ಭಾರತವು ಜಗತ್ತನ್ನು ಹೆಚ್ಚು ಸ್ಥಿರ, ಸಮೃದ್ಧ ಮತ್ತು ಸುರಕ್ಷಿತಗೊಳಿಸುತ್ತದೆ. ಮತ್ತು ನಾವೆಲ್ಲರೂ ಪ್ರಯೋಜನ ಪಡೆಯುತ್ತೇವೆ.

- ಉರ್ಸುಲಾ ವಾನ್ ಡರ್ ಲೆಯೆನ್, ಯುರೋಪಿಯನ್‌ ಆಯೋಗದ ಅಧ್ಯಕ್ಷೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ವಂದೇ ಮಾತರಂಗೂ ರಾಷ್ಟ್ರಗೀತೆ ರೀತಿ ಸ್ಥಾನಕ್ಕೆ ಚಿಂತನೆ
ಕಾಂಬೋ, ಥಾಯ್‌ ಯುದ್ಧ ವೇಳೆ ಕೆಡವಲಾಗಿದ್ದ ವಿಷ್ಣು ಪ್ರತಿಮೆ ಸ್ಥಳಕ್ಕೆ ಬುದ್ಧ ಪ್ರತಿಮೆ