;Resize=(412,232))
ನವದೆಹಲಿ : ‘ಪ್ರತಿಯೊಬ್ಬರಿಗೂ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಖಚಿತಪಡಿಸಲಾಗಿದೆ. ಪ್ರತಿಭಟನೆಯನ್ನು ಕಾರಣವಾಗಿಟ್ಟುಕೊಂಡು ಪೊಲೀಸ್ ಬಲಪ್ರಯೋಗ ಅಥವಾ ಲಾಠಿ ಚಾರ್ಜ್ ಅನ್ನು ಸಮರ್ಥಿಸಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.
ನೀಟ್ ಸೋರಿಕೆ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ ಎಂದು ಆರೋಪಿಸಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅಲ್ಲದೆ, ಬಿಹಾರದಲ್ಲಿ ವಿದ್ಯಾರ್ಥಿಗಳ ಮೇಲೆ ಎಕೆ 47 ಬಳಸಲಾಗಿದೆ ಎಂಬುದನ್ನೂ ವಕೀಲರೊಬ್ಬರು ಮೌಖಿಕವಾಗಿ ಗಮನಕ್ಕೆ ತಂದರು. ಇವುಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ. ಜಯಮಾಲ್ಯ ಬಾಗ್ಚಿ ಮತ್ತು ನ್ಯಾ. ವಿ. ಮೋಹನ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಜತೆಗೆ, ಈ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಮಂಗಳವಾರ ನಡೆಸುವುದಾಗಿ ತಿಳಿಸಿದೆ.
ವಿಚಾರಣೆ ವೇಳೆ, ‘ಶಾಂತಿಪೂರ್ಣ ಪ್ರತಿಭಟನೆಯ ಹಕ್ಕು ಸಂಪೂರ್ಣವಾಗಿ ಖಚಿತವಾಗಿದೆ. ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ಕೇವಲ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಕಾರಣಕ್ಕೆ ಪೊಲೀಸ್ ಬಲಪ್ರಯೋಗಕ್ಕೆ ಅವಕಾಶವಿಲ್ಲ’ ಎಂದು ಸಿಜೆಐ ಸೂರ್ಯಕಾಂತ್ ಸ್ಪಷ್ಟಪಡಿಸಿದರು.
ಆಗ, ಪೊಲೀಸರ ಮೇಲೂ ಹಲ್ಲೆಗಳು ನಡೆದಿವೆ ಎಂದು ವಕೀಲರೊಬ್ಬರು ಪೀಠದ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಯಾರೇ ಆಗಿರಲಿ, ಪ್ರತಿಯೊಬ್ಬ ವ್ಯಕ್ತಿಯ ಜೀವನವೂ ಮುಖ್ಯ. ಪ್ರತಿಭಟನಾ ಸ್ಥಳದಲ್ಲಿ ಶಿಷ್ಟಾಚಾರವಿರಬೇಕು. ಮುಕ್ತವಾದ ಜಾಗ ಮತ್ತು ಅಡೆತಡೆಯಿಲ್ಲದೆ ಪ್ರತಿಭಟಿಸಲು ಅವಕಾಶ ನೀಡಬೇಕು. ಆದರೆ, ಅಲ್ಲಿ ಸಮಾಜವಿರೋಧಿ ಶಕ್ತಿಗಳಿದ್ದರೆ, ಅವುಗಳನ್ನು ನಿಭಾಯಿಸಬೇಕು. ಇದು ಕೇವಲ ದೆಹಲಿಗೆ ಸಂಬಂಧಿಸಿದ ವಿಷಯವಲ್ಲ, ಏಕರೂಪ ಕಾರ್ಯವಿಧಾನದ ಅಗತ್ಯವಿದೆ’ ಎಂದು ತಿಳಿಸಿತು.
‘ಕೇವಲ ಪ್ರತಿಭಟನೆ ನಡೆಯುತ್ತಿದೆ ಎಂಬ ಕಾರಣಕ್ಕೆ ಲಾಠಿ ಚಾರ್ಜ್ ಮಾಡುವುದು ಸರಿಯಲ್ಲ. ಸ್ವಯಂ ಶಿಸ್ತಿನ ಅಗತ್ಯವಿದೆ. ಇದು ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಅತ್ಯಗತ್ಯ. ಎಲ್ಲಾ ಪಕ್ಷಗಳೂ ನ್ಯಾಯಾಲಯಕ್ಕೆ ಸಹಕರಿಸಬೇಕು’ ಎಂದು ಸಿಜೆಐ ಕರೆ ನೀಡಿದರು.