ಛತ್ತೀಸ್‌ಗಢದ ರಾಜನಂದಗಾಂವ್ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಬಿಹಾರದ ಜೊತೆ ಗಡಿ ಹಂಚಿಕೊಂಡಿರುವ ವಿಶೇಷ ಲೋಕಸಭಾ ಕ್ಷೇತ್ರ. ಕಳೆದ 30 ವರ್ಷಗಳಲ್ಲಿ ಒಮ್ಮೆ ಬಿಟ್ಟರೆ ಇದು ಬಿಜೆಪಿ ಪಾಲಿಗೆ ಭದ್ರಕೋಟೆ.
ಮಾಜಿ ಸಿಎಂ ರಮಣ್‌ಸಿಂಗ್, ಕಾಂಗ್ರೆಸ್ ನಾಯಕ ಮೋತಿಲಾಲ್ ವೋಹ್ರಾ ಪ್ರತಿನಿಧಿಸಿದ ಕ್ಷೇತ್ರವಿದು. ಆದರೆ ಈ ಬಾರಿ ಮಾಜಿ ಸಿಎಂ ಬೂಪೇಶ್ ಬಘೇಲ್ ಕಣಕ್ಕೆ ಇಳಿದಿರುವುದರಿಂದ ಸಾಕಷ್ಟು ಗಮನ ಸೆಳೆದಿದೆ.ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುಂಡಿದೆ. ಸಾಕಷ್ಟು ಜನಪ್ರಿಯ ಕಾರ್ಯಕ್ರಮ ಜಾರಿ ಹೊರತಾಗಿಯೂ ಪಕ್ಷವನ್ನು ಮರಳಿ ಅಧಿಕಾರಕ್ಕೆ ಏರಿಸುವಲ್ಲಿ ಬಘೇಲ್ ವಿಫಲರಾಗಿದ್ದಾರೆ.
ಅಂಥದ್ದರಲ್ಲೇ ಲೋಕಸಭಾ ಕ್ಷೇತ್ರ ಗೆದ್ದು ಬನ್ನಿ ಎಂದು ಪಕ್ಷ ಅವರಿಗೆ ಟಿಕೆಟ್ ನೀಡಿದೆ. ತಾವು ಮುಖ್ಯಮಂತ್ರಿಯಾಗಿದ್ದ ಕೈಗೊಂಡ ಸಾಧನೆಗಳೇ ಬಘೇಲ್ ಪಾಲಿಗೆ ಶ್ರೀರಕ್ಷೆ. ಆದರೆ ಮಹದೇವ್ ಆ್ಯಪ್ ಬೆಟ್ಟಿಂಗ್ ಹಗರಣದಲ್ಲಿ ಸ್ವತಃ ಮಾಜಿ ಸಿಎಂ ವಿರುದ್ಧವೇ ಆರೋಪ ಕೇಳಿಬಂದಿರುವುದು ಅವರ ಪಾಲಿಗೆ ಹಿನ್ನಡೆ.
ಮತ್ತೊಂದೆಡೆ ಬಿಜೆಪಿ ಹಾಲಿ ಸಂಸದ ಸಂತೋಷ್ ಪಾಂಡೆ ಅವರಿಗೆ ಟಿಕೆಟ್ ನೀಡಿದೆ. ಈ ಕ್ಷೇತ್ರದಲ್ಲಿ ಅವರು ಕಳೆದ ಬಾರಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಅವರು ನಿರಾಯಾಸವಾಗಿ ಗೆಲ್ಲಬಹುದು ಎಂದು ಬಿಜೆಪಿ ಅಂದಾಜಿಸಿದೆ. ಜೊತೆಗೆ ಈ ಕ್ಷೇತ್ರವು ಬಿಜೆಪಿಯಿಂದ ದೀರ್ಘಕಾಲ ಮುಖ್ಯಮಂತ್ರಿಯಾಗಿದ್ದ ರಮಣ್ ಸಿಂಗ್ ಅವರ ತವರು ಕ್ಷೇತ್ರವೂ ಆಗಿರುವ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ಅಲೆಯಿಂದ ಸುಲಭ ಗೆಲುವಿಗೆ ಕಾರಣವಾಗಬಹುದು ಎಂಬುದು ಪಕ್ಷದ ಲೆಕ್ಕಾಚಾರ.
ಕ್ಷೇತ್ರದಲ್ಲಿ ವರ್ಷ ವರ್ಷ ಬಿಜೆಪಿ ಬಲ ಹೆಚ್ಚಾಗುತ್ತಲೇ ಇರುವುದು, ಮೋದಿ ಅಲೆ ಬಿಜೆಪಿ ಪಾಲಿನ ಬೋನಸ್.ಕ್ಷೇತ್ರದಲ್ಲಿ ಒಬಿಸಿ ಸಮುದಾಯವೇ ಅಧಿಕ ಇದೆಯಾದರೂ ಅದು ಎಂದೂ ಚುನಾವಣೆ ಮೇಲೆ ಪರಿಣಾಮ ಬೀರಿಲ್ಲ. ರಜಪೂತರು, ಬ್ರಾಹ್ಮಣರು, ಯಾದವರೇ ಹಲವು ಬಾರಿ ಆಯ್ಕೆಯಾಗಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಕಾಂಗ್ರೆಸ್, 3ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ.
ಸ್ಟಾರ್ ಕ್ಷೇತ್ರ ರಾಜಾನಂದಗಾಂವ್
ರಾಜ್ಯ ಛತ್ತೀಸ್‌ಗಢಮತದಾನ ನಡೆಯುವ ದಿನ: ಏ.26
ವಿಧಾನಸಭಾ ಕ್ಷೇತ್ರಗಳು: 82019
ಚುನಾವಣೆ ಫಲಿತಾಂಶ - ಗೆಲುವು ಬಿಜೆಪಿ ಸಂತೋಷ್ ಪಾಂಡೆ
ಸೋಲು ಕಾಂಗ್ರೆಸ್ ಭೋಲಾರಾಂ ಸಾಹು
ಪ್ರಮುಖ ಅಭ್ಯರ್ಥಿಗಳು : ಬಿಜೆಪಿ ಸಂತೋಷ್ ಪಾಂಡೆಕಾಂಗ್ರೆಸ್ ಭೂಪೇಶ್ ಬಘೇಲ್
ಚುನಾವಣಾ ವಿಷಯ:- ನಕ್ಸಲೀಯರ ಪಿಡುಗಿಗೆ ಶಾಶ್ವತ ಪರಿಹಾರ ವಿಷಯ-ಆನೆ ಕಾರಿಡಾರ್ ನಿರ್ಮಾಣ ಕಾಮಗಾರಿ ಅಪೂರ್ಣ
- ಮಹದೇವ ಆ್ಯಪ್ ಬೆಟ್ಟಿಂಗ್ ಹಗರಣ
- ಮೋದಿ ಅಲೆ, ಕೇಂದ್ರದ ಯೋಜನೆಗಳು