ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾಜಿ ಮುಖ್ಯಸ್ಥ ದೇಶಭ್ರಷ್ಟ ಲಲಿತ್‌ ಮೋದಿಗೆ ವನವಾಟು ದೇಶದ ಪೌರತ್ವ

KannadaprabhaNewsNetwork |  
Published : Mar 09, 2025, 01:48 AM ISTUpdated : Mar 09, 2025, 04:29 AM IST
ಲಲಿತ್ ಮೋದಿ | Kannada Prabha

ಸಾರಾಂಶ

ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಮಾಜಿ ಮುಖ್ಯಸ್ಥ, ಭಾರತೀಯ ತನಿಖಾ ಸಂಸ್ಥೆಗಳು ಆರ್ಥಿಕ ಅಪರಾಧಿ ಎಂದು ಘೋಷಿಸಿರುವ ಲಲಿತ್ ಮೋದಿ, ಇದೀಗ ‘ತೆರಿಗೆ ವಂಚಕರ ಸ್ವರ್ಗ’ ಎಂದೇ ಖ್ಯಾತವಾಗಿರುವ ದಕ್ಷಿಣ ಪೆಸಿಫಿಕ್‌ ದ್ವೀಪ ದೇಶವಾಗಿರುವ ವನುವಾಟು ದ್ವೀಪರಾಷ್ಟ್ರದ ಪೌರತ್ವ ಪಡೆದಿದ್ದಾರೆ.

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಮಾಜಿ ಮುಖ್ಯಸ್ಥ, ಭಾರತೀಯ ತನಿಖಾ ಸಂಸ್ಥೆಗಳು ಆರ್ಥಿಕ ಅಪರಾಧಿ ಎಂದು ಘೋಷಿಸಿರುವ ಲಲಿತ್ ಮೋದಿ, ಇದೀಗ ‘ತೆರಿಗೆ ವಂಚಕರ ಸ್ವರ್ಗ’ ಎಂದೇ ಖ್ಯಾತವಾಗಿರುವ ದಕ್ಷಿಣ ಪೆಸಿಫಿಕ್‌ ದ್ವೀಪ ದೇಶವಾಗಿರುವ ವನುವಾಟು ದ್ವೀಪರಾಷ್ಟ್ರದ ಪೌರತ್ವ ಪಡೆದಿದ್ದಾರೆ.

ಐಪಿಎಲ್‌ನ ಅಧ್ಯಕ್ಷರಾಗಿದ್ದಾಗ ಕೋಟ್ಯಂತರ ರು. ದುರುಪಯೋಗದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಹೊತ್ತಿರುವ ಅವರು 2010ರಲ್ಲಿ ಭಾರತದಿಂದ ಓಡಿ ಹೋಗಿ ಲಂಡನ್‌ನಲ್ಲಿ ನೆಲೆಸಿದ್ದರು. ಇದೀಗ ಲಂಡನ್‌ನ ಭಾರತದ ಹೈಕಮಿಷನ್‌ ಕಚೇರಿಯಲ್ಲಿ ತಮ್ಮ ಪಾಸ್‌ಪೋರ್ಟ್ ಒಪ್ಪಿಸಲು ಅವರು ಅರ್ಜಿ ಸಲ್ಲಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ‘ಮೋದಿ ಕೋರಿಕೆ ಪರಿಶೀಲಿಸಲಾಗುವುದು. ಅವರು ದಕ್ಷಿಣ ಪೆಸಿಫಿಕ್ ದ್ವೀಪ ರಾಷ್ಟ್ರವಾದ ವನವಾಟುವಿನ ಪೌರತ್ವವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕಾನೂನಿನಡಿಯಲ್ಲಿ ಅವರ ವಿರುದ್ಧ ಪ್ರಕರಣವನ್ನು ಮುಂದುವರಿಸುತ್ತೇವೆ’ ಎಂದಿದ್ದಾರೆ.

ವನವಾಟು ಆಯ್ಕೆ ಏಕೆ?:

ವನವಾಟು ದೇಶವು ಗೋಲ್ಡನ್ ಪಾಸ್‌ಪೋರ್ಟ್ ಎಂಬ ಯೋಜನೆಯನ್ನು ಹೊಂದಿದ್ದು, ಇದರಲ್ಲಿ ಶ್ರೀಮಂತರು ಹಣ ಕೊಟ್ಟು ಪೌರತ್ವವನ್ನು ಪಡೆಯಬಹುದು. ಇಲ್ಲಿ ಯಾವುದೇ ವೈಯಕ್ತಿಕ ತೆರಿಗೆ ಇಲ್ಲ. ಅಂದರೆ ಎಲ್ಲಿಯೇ ಸಂಪಾದಿಸಿದರೂ ವನವಾಟು ಸರ್ಕಾರಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ. ಇದೇ ಕಾರಣಕ್ಕೆ ಲಲಿತ್ ಮೋದಿ ವನವಾಟು ದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇದಲ್ಲದೆ, ಇಲ್ಲಿ ಕೇವಲ 1.3 ಕೋಟಿ ರು. ನೀಡಿ ಪಾಸ್‌ಪೋರ್ಟ್ ಪಡೆಯಬಹುದು. ಇದಕ್ಕೆ ಕೆಲವೇ ದಾಖಲೆಗಳ ಅಗತ್ಯವಿದ್ದು, ಬೇರೆ ದೇಶದಲ್ಲಿದ್ದುಕೊಂಡೇ ಆನ್ಲೈನ್ ಮೂಲಕವೂ ಪೌರತ್ವ ಮತ್ತು ಪಾಸ್‌ಪೋರ್ಟ್ ಪಡೆಯಬಹುದು. ಈ ರೀತಿ ವಿದೇಶಿಗರಿಗೆ ಪೌರತ್ವ ನೀಡಿಯೇ ವನುವಾಟು ಭಾರಿ ಹಣ ಮಾಡಿಕೊಂಡಿದೆ.

ವನವಾಟು ಪಾಸ್‌ಪೋರ್ಟ್‌ ಹೊಂದಿದ್ದರೆ ಬ್ರಿಟನ್, ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ 120ಕ್ಕೂ ಹೆಚ್ಚು ದೇಶಗಳಿಗೆ ವೀಸಾ ಇಲ್ಲದೆ ಪ್ರವೇಶ ಮಾಡಬಹುದು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ