ಸಿಬಿಐನಿಂದಲೂ ಕೇಜ್ರಿವಾಲ್ ಬಂಧನ

KannadaprabhaNewsNetwork |  
Published : Jun 27, 2024, 01:03 AM ISTUpdated : Jun 27, 2024, 04:53 AM IST
ಕೇಜ್ರಿವಾಲ್‌ | Kannada Prabha

ಸಾರಾಂಶ

ದಿಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಬಿಐ ಬುಧವಾರ ಔಪಚಾರಿಕವಾಗಿ ಬಂಧಿಸಿದೆ.

ನವದೆಹಲಿ :ದಿಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಬಿಐ ಬುಧವಾರ ಔಪಚಾರಿಕವಾಗಿ ಬಂಧಿಸಿದೆ. ಇದರೊಂದಿಗೆ ಈವರೆಗೆ ಜಾರಿ ನಿರ್ದೇಶನಾಲಯದ (ಇ.ಡಿ.) ಕುಣಿಕೆಯಲ್ಲಿ ಸಿಕ್ಕಿದ್ದ ಕೇಜ್ರಿವಾಲ್‌ಗೆ ಈಗ ಸಿಬಿಐ ಬಲೆಯೂ ಸಮಸ್ಯೆ ಆಗಿ ಕಾಡಲಿದೆ.

ಹೀಗಾಗಿ ಇ.ಡಿ. ಕೇಸಲ್ಲಿ ಜಾಮೀನಿನ ಮೇಲೆ ಬಿಡುಗಡೆಗೆ ಆದೇಶವಾದರೂ ಸಿಬಿಐ ಬಂಧಿಸಿರುವ ಕಾರಣ ಅವರಿಗೆ ತಕ್ಷಣಕ್ಕೆ ಬಿಡುಗಡೆ ಭಾಗ್ಯ ಸಿಗದು. ಇನ್ನಷ್ಟು ದಿನ ಅವರು ಜೈಲಲ್ಲಿ ಅಥವಾ ಸಿಬಿಐ ಅಧಿಕಾರಿಗಳ ವಶದಲ್ಲೇ ಇರುವುದು ಅನಿವಾರ್ಯವಾಗಲಿದೆ. 

ಈಗಾಗಲೇ ಇ.ಡಿ.ಯಿಂದ ಬಂಧಿತರಾಗಿ ತಿಹಾರ್‌ ಜೈಲಿನಲ್ಲಿ ಇರುವ ಕೇಜ್ರಿವಾಲ್‌ರನ್ನು ಸೋಮವಾರವೇ ಸಿಬಿಐ ವಿಚಾರಣೆ ನಡೆಸಿತ್ತು ಹಾಗೂ ಬುಧವಾರ ವಿಶೇಷ ಸಿಬಿಐ ಕೋರ್ಟ್‌ ಮುಂದೆ ಅವರನ್ನು ಹಾಜರುಪಡಿಸುವ ಅನುಮತಿ ಪಡೆದಿತ್ತು. ಆ ಪ್ರಕಾರ ಬುಧವಾರ ಬೆಳಗ್ಗೆ 10.30ಕ್ಕೆ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿ ಜಡ್ಜ್‌ ಅನುಮತಿ ಪಡೆದು ಬಂಧಿಸಿತು. ಬಳಿಕ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ 3 ದಿನಗಳ ಕಾಲ ವಶಕ್ಕೆ ಪಡೆಯಿತು.ಹಗರಣದಲ್ಲಿ ಈಗಾಗಲೇ ಕೇಜ್ರಿವಾಲ್‌ರ ಆಪ್ತ, ಮಾಜಿ ದಿಲ್ಲಿ ಡಿಸಿಎಂ ಮನೀಶ್‌ ಸಿಸೋಡಿಯಾ ಸೇರಿ ಹಲವರು ಬಂಧಿತರಾಗಿದ್ದಾರೆ. ಅವರ ಸಾಲಿಗೆ ಕೇಜ್ರಿವಾಲ್‌ ಕೂಡ ಸೇರಿದ್ದಾರೆ.

ಸಿಸೋಡಿಯಾ ಆರೋಪಿ ಎಂದಿಲ್ಲ: ಕೇಜ್ರಿ 

ಬುಧವಾರ ವಿಚಾರಣೆ ವೇಳೆ ವಾದ ಮಂಡಿಸಿದ ಕೇಜ್ರಿವಾಲ್, ಈ ಪ್ರಕರಣದಲ್ಲಿ ತಾವು ನಿರಪರಾಧಿ ಎಂದು ಪ್ರತಿಪಾದಿಸಿದರು. ‘ನಾನು ಸಿಸೋಡಿಯಾ ಅವರ ಮೇಲೆ ಆರೋಪ ಹೊರಿಸಿದ್ದೇನೆ ಎಂದು ಸಿಬಿಐ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳಲ್ಲಿ ತೋರಿಸಲಾಗುತ್ತಿದೆ. ಆದರೆ ನಾನು ಯಾವತ್ತೂ ಅಂಥ ಹೇಳಿಕೆ ನೀಡಿಲ್ಲ. ಸಿಸೋಡಿಯಾ ನಿರಪರಾಧಿ, ಆಪ್‌ ನಿರಪರಾಧಿ, ನಾನೂ ನಿರಪರಾಧಿ’ ಎಂದರು. ಅಲ್ಲದೆ, ‘ಮಾಧ್ಯಮಗಳ ಮುಂದೆ ನಮ್ಮ ಮಾನಹಾನಿ ಮಾಡುವುದೇ ಅವರ (ಸಿಬಿಐ) ಯೋಜನೆಯಾಗಿದೆ, ದಯವಿಟ್ಟು ಸಿಬಿಐ ಮೂಲಗಳ ಈ ಮಾಧ್ಯಮ ವರದಿಗಳನ್ನು ನೀವು ದಾಖಲಿಸಿಕೊಳ್ಳಿ’ ಎಂದು ಜಡ್ಜ್‌ಗೆ ಕೋರಿದರು.

ಕೇಜ್ರಿವಾಲ್‌ ಪಿತೂರಿ- ಸಿಬಿಐ 

ಸಿಬಿಐ ವಕೀಲರು ವಾದ ಮಂಡಿಸಿ, ‘ನಾವು ಸತ್ಯಗಳ ಮೇಲೆ ವಾದಿಸಿದ್ದೇವೆ ಮತ್ತು ಸಿಬಿಐ ಮೂಲಗಳ ಮೂಲಕ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ಕೊಟ್ಟಿಲ್ಲ. ಈ ಪ್ರಕರಣದ ಹಿಂದಿನ ವಿಚಾರಣೆಯಲ್ಲಿ, ಹಗರಣಕ್ಕೆ ಸಿಸೋಡಿಯಾ ಹೊಣೆ ಎಂದು ಕೇಜ್ರಿವಾಲ್‌ ಹೇಳಿದ್ದರು. ಇದೇ ವೇಳೆ, ಆರೋಪಿ ವಿಜಯ ನಾಯರ್‌ ನನಗೆ ಗೊತ್ತಿಲ್ಲ. ಆತ ಸಚಿವೆ ಆತಿಶಿ ಹಾಗೂ ಸೌರಭ್‌ ಭಾರದ್ವಾಜ್‌ ಅಡಿ ಕೆಲಸ ಮಾಡುತ್ತಿದ್ದ ಎಂದಿದ್ದರು. ಹೀಗಾಗಿ ಈ ಬಗ್ಗೆ ಹೆಚ್ಚಿನ ವಿಚಾರಣೆ ಅಗತ್ಯವಿದೆ. ಪ್ರಕರಣದಲ್ಲಿನ ಪಿತೂರಿ ಬಹಿರಂಗಪಡಿಸಲು ಹೆಚ್ಚಿನ ವಿಚಾರಣೆ ನಡೆಸಬೇಕಿದೆ. ಹೀಗಾಗಿ 5 ದಿನ ಕಾಲ ಕೇಜ್ರಿವಾಲ್‌ರನ್ನು ಸಿಬಿಐ ವಶಕ್ಕೆ ಒಪ್ಪಿಸಿ’ ಎಂದು ಕೋರಿದರು. ನ್ಯಾಯಾಲಯ 3 ದಿನ ನೀಡಿ ಆದೇಶಿಸಿತು.

PREV

Recommended Stories

2026ರ ಫೆ.7 ರಿಂದ ಟಿ20 ವಿಶ್ವಕಪ್‌ ಆರಂಭ ?
ನೇಪಾಳದಲ್ಲಿ ಪೊಲೀಸರಿಂದಲೇ ಹಿಂಸೆ, ರೇ*: ಆರೋಪ