ಕಾಠ್ಮಂಡು: ಜೆನ್ ಝೀಗಳ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ನೇಪಾಳದಲ್ಲಿ, ಹಾಲಿ ಸಂಸತ್ ಅನ್ನು ವಿಸರ್ಜಿಸಲಾಗಿದ್ದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುಶೀಲಾ ಕರ್ಕಿ (73) ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚಿಸಲಾಗಿದೆ. ಶುಕ್ರವಾರ ನಡೆದ ನಾಟಕೀಯ ಬೆಳವಣಿಗೆಗಳ ಬಳಿಕ ನ್ಯಾ. ಸುಶೀಲಾ ಅವರನ್ನು ಮಧ್ಯಂತರ ಸರ್ಕಾರದ ಮಧ್ಯಂತರ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದ್ದು ಅವರು ಪ್ರಮಾಣ ಚನ ಸ್ವೀಕರಿಸಿದ್ದಾರೆ.
ಇದರೊಂದಿಗೆ ಕಳೆದೊಂದು ವಾರದಿಂದ ಭಾರೀ ಹಿಂಸಾಚಾರಕ್ಕೆ ತುತ್ತಾಗಿದ್ದ ದೇಶದಲ್ಲಿ ಮತ್ತೆ ಶಾಂತಿ ನೆಲೆಸುವ ಆಶಾಭಾವನೆ ವ್ಯಕ್ತವಾಗಿದೆ. ನ್ಯಾ.ಸುಶೀಲಾ ದೇಶದ ಮೊದಲ ಮಹಿಳಾ ಪ್ರಧಾನಿ ಎಂಬ ಹಿರಿಮೆಗೂ ಪಾತ್ರರಾಗಿದ್ದು, ಅವರ ಮುಂದೆ ನೇಪಾಳದ ಮರುನಿರ್ಮಾಣ, ಚುನಾವಣೆ ನಡೆಸುವ ಬಹುದೊಡ್ಡ ಸವಾಲಿದೆ.
ಸಂಸತ್ ವಿಸರ್ಜನೆ:
ಇದರ ಬೆನ್ನಲ್ಲೇ ತಮ್ಮ ಮೊದಲ ಸಚಿವ ಸಂಪುಟ ಸಭೆಯಲ್ಲಿ ಸಂಸತ್ತನ್ನು ವಿಸರ್ಜಿಸುವಂತೆ ಮತ್ತು ದೇಶದಲ್ಲಿ ತುರ್ತುಸ್ಥಿತಿ ಘೋಷಿಸುವಂತೆ ಪ್ರಧಾನಿ ಕುರ್ಕಿ ಅಧ್ಯಕ್ಷರಿಗೆ ಶಿಫಾರಸು ಮಾಡಿದ್ದಾರೆ.
ನಾಟಕೀಯ ಬೆಳವಣಿಗೆ:
ಪ್ರಧಾನಿ ಕೆ.ಪಿ. ಶರ್ಮಾ ಒಲಿ ರಾಜೀನಾಮೆಯ ಬಳಿಕ ಅವರ ಸ್ಥಾನಕ್ಕೆ ಈ ಮೊದಲು ವಯಸ್ಸು ಹಾಗೂ ಕಾನೂನು ತೊಡಕಿನ ಕಾರಣ ಕರ್ಕಿ ಅವರ ಬದಲು ಇಂಜಿನಿಯರ್ ಕುಲಮನ್ ಘೀಸಿಂಗ್ ಅವರ ಹೆಸರನ್ನು ಘೋಷಿಸಲಾಗಿತ್ತು. ಬಳಿಕ ರಾಷ್ಟ್ರಪತಿ ರಾಮಚಂದ್ರ ಪೌಡೆಲ್, ನೇಪಾಳದ ಉನ್ನತ ಮಿಲಿಟರಿ ಅಧಿಕಾರಿಗಳು ಮತ್ತು ಯುವ ಪ್ರತಿಭಟನಾಕಾರರ ಪ್ರತಿನಿಧಿಗಳ ನಡುವೆ ನಡೆದ ಸಭೆಯಲ್ಲಿ ಕರ್ಕಿ ಅವರನ್ನು ಆಯ್ಕೆ ಮಾಡಲಾಯಿತು.
ಹಿಂಸಾಚಾರಕ್ಕೆ 51 ಬಲಿ:
ಹಳೆ ಭ್ರಷ್ಟ ಸರ್ಕಾರಿ ವ್ಯವಸ್ಥೆಯನ್ನು ಕಿತ್ತೊಗೆಯುವ ಸಲುವಾಗಿ ಜೆನ್-ಝಿಗಳು ನಡೆಸಿದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಈವರೆಗೆ ಒಟ್ಟು 51 ಜನ ಸಾವನ್ನಪ್ಪಿದ್ದಾರೆ.
ಪ್ರತಿಭಟನೆ: ಕುಟುಂಬ ರಾಜಕಾರಣ, ರಾಜಕಾರಣಿಗಳ ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆ ವಿಷಯದ ಬಗ್ಗೆ ಸರ್ಕಾರಗಳ ಬಗ್ಗೆ ಆಕ್ರೋಶ ಹೊಂದಿದ್ದ ಜೆನ್ ಝೀಗಳು, ಇತ್ತೀಚೆಗೆ ಸರ್ಕಾರ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ ಬಳಿಕ ದೇಶವ್ಯಾಪಿ ದಿಢೀರ್ ಬೀದಿಗಿಳಿದು ಹೋರಾಟ ಆರಂಭಿಸಿದ್ದರು.
ನೇಪಾಳದ ಹೋಟೆಲ್‌ಗಳು ಜೆನ್‌ಝೀ
ಸಿಟ್ಟಿಗೆ ಭಸ್ಮ: ₹2500 ಕೋಟಿ ನಷ್ಟ!
ಕಾಠ್ಮಂಡು: ಸೋಷಿಯಲ್ ಮೀಡಿಯಾಗಳಿಗೆ ನಿಷೇಧ ಹೇರಿದ ಕ್ರಮ, ರಾಜಕಾರಣಿಗಳ ಭ್ರಷ್ಟಾಚಾರ, ಕುಟುಂಬ ರಾಜಕಾರಣದ ಬಗ್ಗೆ ಆಕ್ರೋಶಗೊಂಡು ನೇಪಾಳದಲ್ಲಿ ‘ಜೆನ್ ಝೀ’ಗಳು ನಡೆಸಿದ ಹಿಂಸಾತ್ಮಕ ಹೋರಾಟವು ಹೋಟೆಲ್ ಉದ್ಯಮಕ್ಕೆ 2500 ಕೋಟಿ ರು.ನಷ್ಟು ಭಾರೀ ನಷ್ಟ ಉಂಟು ಮಾಡಿದೆ.ಪ್ರವಾಸೋದ್ಯಮವೇ ಆದಾಯದ ಪ್ರಮುಖ ಮೂಲವಾಗಿರುವ ನೇಪಾಳದಲ್ಲಿ ಜೆನ್ ಝೀಗಳು ನಡೆಸಿದ ಪ್ರತಿಭಟನೆ ವೇಳೆ ಅಂತಾರಾಷ್ಟ್ರೀಯ ಬ್ರ್ಯಾಂಡ್ ಹೋಟೆಲ್‌ಗಳಾದ ಹಿಲ್ಟನ್, ಹಯಾತ್, ಕಾಠ್ಮಂಡು ವ್ಯಾಲಿ, ಪೊಖಾರ ಸೇರಿದಂತೆ 10ಕ್ಕೂ ಹೆಚ್ಚು ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಪೀಠೋಪಕರಣಗಳನ್ನು ಹಾಳು ಮಾಡಿದ್ದರು. ಬೆಂಕಿ ಹಚ್ಚಿದ್ದರು.
ಈ ಪೈಕಿ ಭಾರೀ ದಾಳಿಗೆ ತುತ್ತಾದ ಹಿಲ್ಟನ್ ಹೋಟೆಲ್ ಒಂದಕ್ಕೇ 800 ಕೋಟಿ ರು.ಗೂ ಹೆಚ್ಚಿನ ನಷ್ಟವಾಗಿದೆ. ಇನ್ನೂ ಎಲ್ಲಾ ಹೋಟೆಲ್‌ಗಳಿಗೆ ಆದ ನಷ್ಟ ಲೆಕ್ಕ ಹಾಕಿದರೆ ಅದು 2500 ಕೋಟಿ ರು. ದಾಟಲಿದೆ ಎಂದು ನೇಪಾಳ ಹೋಟೆಲ್‌ಗಳ ಒಕ್ಕೂಟ ಹೇಳಿದೆ. ಜೊತೆಗೆ ಭಾರೀ ಹಾನಿಗೆ ತುತ್ತಾದ ಬಹುತೇಕ ಹೋಟೆಲ್‌ಗಳು ದುರಸ್ತಿ ಆಗದೆ ಪುನಾರಂಭ ಮಾಡುವ ಸ್ಥಿತಿಯಲ್ಲಿ ಇಲ್ಲ. ಇದು ಹೋಟೆಲ್ ಉದ್ಯೋಗ ನಂಬಿರುವ 2000ಕ್ಕೂ ಹೆಚ್ಚು ಸಿಬ್ಬಂದಿ, ಕಾರ್ಮಿಕರ ಮೇಲೂ ದುಷ್ಪರಿಣಾಮ ಬೀರಲಿದೆ ಎಂದು ಹೋಟೆಲ್‌ಗಳ ಒಕ್ಕೂಟ ತಿಳಿಸಿದೆ.
==
ದಾಳಿಯಿಂದ ತಪ್ಪಿಸಿಕೊಳ್ಳುವ ಯತ್ನದ ವೇಳೆ ಭಾರತೀಯ ಮೂಲದ ಮಹಿಳೆಯ ಸಾವು
ಕಾಠ್ಮಂಡು: ನೇಪಾಳದಲ್ಲಿ ನಡೆದ ಹಿಂಸಾಚಾರ ಭಾರತೀಯ ಮೂಲದ ಮಹಿಳೆಯ ಜೀವ ಬಲಿ ಪಡೆದಿದೆ. ಹಿಂಸಾಚಾರದ ವೇಳೆ ಗಾಜಿಯಾಬಾದ್ ಮೂಲದ ರಾಜೇಶ್ ದೇವಿ ಸಿಂಗ್ ತಮ್ಮ ಪತಿಯೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದರು. ಈ ವೇಳೆ ಗುಂಪೊಂದು ಹೋಟೆಲ್ ಮೇಲೆ ದಾಳಿ ಬೆಂಕಿ ಹಚ್ಚಿದೆ. ಹೀಗಾಗಿ ಪ್ರಾಣ ಉಳಿಸಿಕೊಳ್ಳಲು ಬೇರೆ ದಾರಿ ಕಾಣದ ದಂಪತಿ ಹಯಾತ್‌ನ ಹೋಟೆಲ್‌ನ 4 ಮಹಡಿಯ ಕಿಟಕಿಯ ಗಾಜು ಒಡೆದಿದ್ದಾರೆ. ಬಳಿಕ ಹಾಸಿಗೆ ಮತ್ತು ದಿಂಬನ್ನು ಕೆಳಗೆ ಎಸೆದಿದ್ದಾರೆ. ಅದಾದ ನಂತರ ಬೆಡ್‌ಶೀಟ್ ಮತ್ತು ಕರ್ಟನ್‌ಗಳನ್ನು ಒಂದಕ್ಕೊಂದು ಜೋಡಿಸಿ ಹಗ್ಗದಂತೆ ಮಾಡಿಕೊಂಡು ಕಿಟಕಿಯ ಮೂಲಕ ಮೊದಲಿಗೆ ರಾಜೇಶ್ ದೇವಿ ಸಿಂಗ್ ಕೆಳಗೆ ಇಳಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಕಾಲು ಜಾರಿ ಬಿದ್ದು ಅವರು ಸಾವನ್ನಪ್ಪಿದರೆ, ಅವರ ಪತಿ ಗಾಯಗೊಂಡಿದ್ದಾರೆ.