ಚೆನ್ನೈ ಐಫೋನ್‌ ಕಾರ್ಖಾನೆಯಲ್ಲಿ ವಿವಾಹಿತ ಸ್ತ್ರೀಯರಿಗೆ ಕೆಲಸವಿಲ್ಲ!

KannadaprabhaNewsNetwork |  
Published : Jun 26, 2024, 01:34 AM IST
ಫಾಕ್ಸ್‌ಕಾನ್‌ | Kannada Prabha

ಸಾರಾಂಶ

ಮನೆಯ ಸಮಸ್ಯೆಗಳಿಗೇ ಹೆಚ್ಚು ಗಮನ ನೀಡ್ತಾರೆ. ಅವರು ಹೆಚ್ಚು ರಜೆ ಹಾಕುತ್ತಾರೆ, ಹೀಗಾಗಿ ನೌಕರಿ ನೀಡಲ್ಲ ಎಂದು ಚೆನ್ನೈನ ಫಾಕ್ಸ್‌ಕಾನ್‌ ಕಾರ್ಖಾನೆ ವಿವಾಹಿತ ಮಹಿಳೆಯರಿಗೆ ತಿಳಿಸುತ್ತಿರುವುದು ವರದಿಯಾಗಿದೆ.

ಚೆನ್ನೈ: ಉದ್ಯೋಗದಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಪ್ರತಿಪಾದಿಸುತ್ತಿರುವ ನಡುವೆಯೇ ಆ್ಯಪಲ್‌ ಐಫೋನ್‌ಗಳನ್ನು ಅಸೆಂಬಲ್‌ ಮಾಡಿಕೊಡುವ ತೈವಾನ್‌ ಮೂಲದ ಫಾಕ್ಸ್‌ಕಾನ್‌ ಕಂಪನಿಯ ಚೆನ್ನೈ ಶಾಖೆಯಲ್ಲಿ ವಿವಾಹಿತ ಮಹಿಳೆಯರಿಗೆ ಉದ್ಯೋಗ ನೀಡದಿರುವ ‘ಅಲಿಖಿತ ನಿಯಮ’ವನ್ನು ಜಾರಿಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ವಿವಾಹಿತ ಮಹಿಳೆಯರು ಹೆಚ್ಚಿನ ಕೌಟುಂಬಿಕ ತಾಪತ್ರಯಗಳನ್ನು ಹೊಂದಿರುತ್ತಾರೆ. ಅವರಿಗೆ ಮಗುವಿನ ಜೊತೆಗೆ ಕುಟುಂಬವನ್ನು ನಿಭಾಯಿಸುವ ಹೆಚ್ಚಿನ ಹೊಣೆಗಾರಿಕೆ ಇರುತ್ತದೆ. ಇದು ಅವರನ್ನು ಹೆಚ್ಚೆಚ್ಚು ರಜೆ ಪಡೆಯಲು ಪ್ರೇರೇಪಿಸುತ್ತದೆ. ಹಾಗಾಗಿ ಅವರಿಗಿಂತ ಅವಿವಾಹಿತ ಮಹಿಳೆಯರೇ ಉತ್ತಮ ಎಂಬುದು ಫಾಕ್ಸ್‌ಕಾನ್‌ನ ಅನಿಸಿಕೆಯಂತೆ. ಹೀಗಾಗಿ ಕಂಪನಿಯಲ್ಲಿ ವಿವಾಹಿತೆಯರಿಗೆ ಉದ್ಯೋಗ ನೀಡಲು ಫಾಕ್ಸ್‌ಕಾನ್‌ ಕಂಪನಿ ನಿರಾಕರಿಸುತ್ತಿದೆ ಎಂದು ಮಹಿಳೆಯರನ್ನು ಉಲ್ಲೇಖಿಸಿ ರಾಯಿಟರ್ಸ್‌ ಸಂಸ್ಥೆ ವರದಿ ಪ್ರಕಟಿಸಿದೆ.

ಚೆನ್ನೈನ ಶ್ರೀಪೆರಂಬದೂರಿನಲ್ಲಿರುವ ಫಾಕ್ಸ್‌ಕಾನ್‌ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದ ವಿವಾಹಿತ ಮಹಿಳಾ ಉದ್ಯೋಗಿಗಳನ್ನು ಸಂದರ್ಶಿಸಿದಾಗ ಈ ಮಾಹಿತಿ ಬಯಲಾಗಿದೆ. ‘2022ರಿಂದಲೇ ಫಾಕ್ಸ್‌ಕಾನ್‌ ಈ ಅಲಿಖಿತ ನಿಯಮವನ್ನು ಅನುಸರಿಸುತ್ತಿದೆ. ಅಲ್ಲಿನ ಕಾವಲುಗಾರ ಕೇವಲ ನಮ್ಮ ಕಾಲುಂಗುರ ಮತ್ತು ತಾಳಿಯನ್ನು ನೋಡಿಯೇ ಇಲ್ಲಿ ವಿವಾಹಿತ ಮಹಿಳೆಯರಿಗೆ ಅವಕಾಶ ನೀಡುವುದಿಲ್ಲ ಎಂದು ಸಂದರ್ಶನಕ್ಕೂ ಮುನ್ನವೇ ನಮ್ಮ ಉತ್ಸಾಹಕ್ಕೆ ತಣ್ಣೀರೆರಚಿದ’ ಎಂದು ಅವರು ಹೇಳಿದ್ದಾರೆ.

ಆದರೆ, ಈ ಕುರಿತು ಫಾಕ್ಸ್‌ಕಾನ್‌ ಸ್ಪಷ್ಟನೆ ನೀಡಿದ್ದು, ತಾವು ವೈವಾಹಿಕ ಜೀವನಾಧಾರಿತವಾಗಿ ಯಾವುದೇ ತಾರತಮ್ಯ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

ಪದ್ಮ ಪುರಸ್ಕೃತ:

ಫಾಕ್ಸ್‌ಕಾನ್‌ ಕಂಪನಿಯ ಮುಖ್ಯಸ್ಥ ಯಂಗ್‌ ಲಿಯು ಅವರಿಗೆ ಈ ಬಾರಿ ಭಾರತದಲ್ಲಿ ತಮ್ಮ ಕಾರ್ಖಾನೆಗಳನ್ನು ಸ್ಥಾಪಿಸಿ ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದಕ್ಕಾಗಿ ಪದ್ಮ ಪ್ರಶಸ್ತಿಯನ್ನೂ ನೀಡಿ ಭಾರತ ಸರ್ಕಾರ ಗೌರವಿಸಿದೆ. ಆದರೆ ಅವರದ್ದೇ ಕಂಪನಿಯಲ್ಲಿ ಈ ರೀತಿ ವೈವಾಹಿಕ ಜೀವನದ ಆಧಾರದಲ್ಲಿ ಲಿಂಗ ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪ ಭಾರೀ ಚರ್ಚೆಗೆ ಗ್ರಾಸವಾಗಿದೆ.

ರಾಯಿಟರ್ಸ್‌ ವರದಿಯಲ್ಲಿ ಏನಿದೆ?

- ಚೆನ್ನೈ ಫಾಕ್ಸ್‌ಕಾನ್‌ ಘಟಕದಲ್ಲಿ ಈ ಅಲಿಖಿತ ನಿಯಮ ಜಾರಿಯಲ್ಲಿದೆ

- ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದ ವಿವಾಹಿತ ಮಹಿಳೆಯರಿಂದ ಆರೋಪ- ಕಾವಲುಗಾರರು ನಮ್ಮ ಕಾಲುಂಗುರ, ತಾಳಿ ನೋಡಿಯೇ ವಾಪಸ್‌ ಕಳಿಸ್ತಾರೆ ಎಂದಿರುವ ಮಹಿಳೆ- ಆರೋಪ ನಿರಾಕರಿಸಿದ ಫಾಕ್ಸ್‌ಕಾನ್‌

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರೈಲ್ವೆ ಟಿಕೆಟ್‌ ದರ ಅಲ್ಪ ಹೆಚ್ಚಳ
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: ಎನ್‌ಡಿಎಗೆ ಜಯ