;Resize=(412,232))
ನವದೆಹಲಿ: ಗ್ರಾಮೀಣ ಜನರಿಗೆ 125 ದಿನಗಳ ಕಾಲ ಉದ್ಯೋಗದ ಖಾತರಿ ನೀಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ವಿಬಿ-ಜಿ ರಾಮ್ ಜಿ (ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಅಜೀವಿಕಾ ಮಿಷನ್-ಗ್ರಾಮೀಣ) ಕಾಯ್ದೆ ಜು.1ರಿಂದ ಎಲ್ಲ ಕೇಂದ್ರಾಡಳಿತ ಮತ್ತು ರಾಜ್ಯಗಳಲ್ಲಿ ಅಧಿಕೃತವಾಗಿ ಅನುಷ್ಠಾನಕ್ಕೆ ಬರಲಿದೆ.
ಈ ಮೂಲಕ ಎರಡು ದಶಕಗಳಿಂದ ದೇಶಾದ್ಯಂತ ಕೋಟ್ಯಂತರ ಕುಟುಂಬಗಳಿಗೆ ಕೆಲಸದ ಹಕ್ಕು ನೀಡಿದ, ಯುಪಿಎ ಸರ್ಕಾರಾವಧಿಯಲ್ಲಿ ಜಾರಿಗೆ ಬಂದ ಮನರೇಗಾ (ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ) ಯೋಜನೆ ಅಧಿಕೃತವಾಗಿ ಇತಿಹಾಸ ಪುಟ ಸೇರಲಿದೆ. ಈ ಕುರಿತು ಕೇಂದ್ರ ಸರ್ಕಾರ ಸೋಮವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಸರ್ಕಾರವು ರಾಜ್ಯಗಳನ್ನು ಸೂಕ್ತ ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಕಾಯ್ದೆ ರೂಪಿಸಿದೆ ಎಂದು ಕರ್ನಾಟಕ ಸೇರಿದಂತೆ ವಿಪಕ್ಷಗಳ ಆಡಳಿತದ ರಾಜ್ಯಗಳು ಈಗಾಗಲೇ ಕಾಯ್ದೆಗೆ ಸಡ್ಡು ಹೊಡೆದಿವೆ. ಇದರ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಲೂ ನಿರ್ಧರಿಸಿವೆ.
ಈ ಹೊಸ ಕಾಯ್ದೆಯು ಗ್ರಾಮೀಣ ಕುಟುಂಬದ ಪ್ರತಿ ಸದಸ್ಯರಿಗೆ ಮನರೇಗಾ ಯೋಜನೆಯಡಿ ನೀಡಲಾಗಿದ್ದ ವಾರ್ಷಿಕ 100 ದಿನಗಳ ಬದಲು 125 ದಿನಗಳ ಉದ್ಯೋಗದ ಖಾತರಿ ನೀಡಲಿದೆ. ಜೀವನಾಧಾರ ಭದ್ರತೆ, ಗ್ರಾಮೀಣ ಆದಾಯ ಮತ್ತು ಗ್ರಾಮೀಣ ಹಂತದ ಮೂಲಸೌಲಭ್ಯ ಬಲಪಡಿಸುವ ಜತೆಜತೆಗೆ ಭವಿಷ್ಯಕ್ಕೆ ಸಿದ್ಧವಾದ ಮತ್ತು ಉತ್ಪಾದನೆ ಆಧಾರಿತ ಗ್ರಾಮೀಣ ಪರಿವರ್ತನೆಗೆ ಅವಕಾಶ ಮಾಡಿಕೊಡಲಿದೆ ಎಂದು ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಹೊಸ ಕಾಯ್ದೆ ಜಾರಿಯಿಂದಾಗಿ ಮನರೇಗಾ ಯೋಜನೆಯಡಿ ಜೂ.30ರವರೆಗೂ ಕಾರ್ಯರೂಪದಲ್ಲಿದ್ದ ಕಾರ್ಯಕ್ರಮಗಳು ಯಥಾರೀತಿ ಮುಂದುವರಿಯಲಿವೆ. ಹೊಸ ಕಾಯ್ದೆ ಜಾರಿಯಿಂದಾಗಿ ಕಾರ್ಮಿಕರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಇನ್ನು ಮನರೇಗಾ ಕಾರ್ಯಕ್ರಮದಡಿ ನೀಡಲಾದ ಜಾಬ್ ಕಾರ್ಡ್‌ಗಳು ಹೊಸ ಗ್ರಾಮೀಣ ರೋಜ್‌ಗಾರ್ ಗ್ಯಾರಂಟಿ ಕಾರ್ಡ್ ವಿತರಿಸುವವರೆಗೆ ಮುಂದುವರಿಯಲಿವೆ. ಯಾವುದೇ ಜಾಬ್ ಕಾರ್ಡ್ ಇಲ್ಲದ ಕಾರ್ಮಿಕರು ಗ್ರಾಪಂ ಮಟ್ಟದಲ್ಲಿ ಇದಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಇ-ಕೆವೈಸಿ ಬಾಕಿ ಇದೆ ಎಂಬ ಕಾರಣಕ್ಕೆ ಯಾವುದೇ ಕಾರ್ಮಿಕರಿಗೆ ಕೆಲಸ ನಿರಾಕರಿಸುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಕೂಲಿ ಪಾವತಿ, ಸಮಸ್ಯೆಗಳ ಇತ್ಯರ್ಥ, ಕೆಲಸದ ಹಂಚಿಕೆ ನಿಯಮಾವಳಿಗಳು, ಆಡಳಿತಾತ್ಮಕ ವೆಚ್ಚ ಮತ್ತು ಪರಿವರ್ತನಾ ನಿಯಮಗಳು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜತೆಗಿನ ಮಾತುಕತೆ ಬಳಿಕ ಸಿದ್ಧಗೊಳ್ಳಲಿವೆ ಹಾಗೂ ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕಾಗಿ ಅವುಗಳನ್ನು ಬಹಿರಂಗವಾಗಿ ಪ್ರಕಟಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಈ ಕಾಯ್ದೆಯಡಿ ಸಮಯಕ್ಕೆ ಸರಿಯಾಗಿ ಮತ್ತು ಪಾರದರ್ಶಕ ಮಾದರಿಯಲ್ಲಿ ಕೂಲಿ ಪಾವತಿ ಆಗಲಿದೆ. ಇನ್ನು ಮುಂದೆ ವೇತನ ನೇರವಾಗಿ ಉದ್ಯೋಗಿಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಪಾವತಿಯಾಗಲಿದೆ. ಉದ್ಯೋಗಿಗಳಿಗೆ ವಾರಕ್ಕೊಮ್ಮೆ ಅಥವಾ ಹಾಜರಿಪಟ್ಟಿ(ಮಸ್ಟರ್ ರೋಲ್) ಸ್ಥಗಿತಗೊಳಿಸಿದ 15 ದಿನದೊಳಗೆ ವೇತನ ಪಾವತಿ ಕಡ್ಡಾಯ. ಒಂದು ವೇಳೆ ಈ ಅವಧಿಯೊಳಗೆ ವೇತನ ಪಾವತಿಯಾಗದಿದ್ದರೆ ಈ ವಿಳಂಬಕ್ಕಾಗಿ ಪರಿಹಾರಕ್ಕೂ ಅವರು ಅರ್ಹರಾಗಲಿದ್ದಾರೆ.
ಟಾಪ್- ಮುಹೂರ್ತ
- 100ರ ಬದಲು ಇನ್ನು 125 ದಿನಗಳ ಉದ್ಯೋಗ ಖಾತ್ರಿ: ಕೇಂದ್ರ
- ಜಿ ರಾಮ್ ಜಿ ಕಾಯ್ದೆಯನ್ನು ಕಳೆದ ಡಿಸೆಂಬರ್‌ನಲ್ಲಿ ಸಂಸತ್ತಿನ ಉಭಯ ಸದನಗಳಲ್ಲೂ ಅಂಗೀಕಾರ ಮಾಡಿದ್ದ ಕೇಂದ್ರ ಸರ್ಕಾರ
- ಬಿಜೆಪಿಯೇತರ ಆಳ್ವಿಕೆಯ ರಾಜ್ಯಗಳಿಂದ ತೀವ್ರ ವಿರೋಧ. ಕಾನೂನು ಹೋರಾಟ ನಡೆಸುವುದಾಗಿ ಕರ್ನಾಟಕದ ಎಚ್ಚರಿಕೆ
- ಈ ನಡುವೆ ಹೊಸ ಕಾಯ್ದೆ ಜಾರಿಗೆ ಕೇಂದ್ರ ಅಧಿಸೂಚನೆ. ಜೂ.30ರವರೆಗಿನ ನರೇಗಾ ಕಾರ್ಯಕ್ರಮ ಮುಂದುವರಿಸುವ ಪ್ರಕಟಣೆ
- ಜಿ ರಾಮ್ ಜಿ ಅನುಷ್ಠಾನದಿಂದ ಕಾರ್ಮಿಕರಿಗೆ ಯಾವುದೇ ಸಮಸ್ಯೆ ಇಲ್ಲ. ಹೊಸ ಕಾರ್ಡ್ ನೀಡವವರೆಗೆ ಹಳೆ ಕಾರ್ಡ್ ಅಬಾಧಿತ
- ಜಾಬ್ ಕಾರ್ಡ್ ಇಲ್ಲದೆಯೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರ್ಜಿ ಸಲ್ಲಿಸಬಹುದು. ಕೆವೈಸಿ ಬಾಕಿ ಎಂದು ಕೆಲಸ ನಿರಾಕರಣೆ ಇಲ್ಲ