ಫೆ.28ರಂದು ಅಮೆರಿಕ-ಇಸ್ರೇಲ್ ಜಂಟಿ ದಾಳಿಗೆ ಮೃತಪಟ್ಟ ಇರಾನ್‌ನ ಸರ್ವೋಚ್ಚ ನಾಯಕ ಆಯತೋಲ್ಲ ಅಲಿ ಖಮೇನಿ ಅಂತ್ಯಕ್ರಿಯೆ ಶನಿವಾರದಿಂದ ಜು.9ರವರೆಗೆ ಪವಿತ್ರ ನಗರ ಮಶಾದ್‌ನಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳ ಮೂಲಕ ನಡೆಯಲಿದೆ. ದಕ್ಷಿಣ ಟೆಹ್ರಾನ್‌ನ ಮತ್ತೊಂದು ಪವಿತ್ರ ನಗರವಾದ ಕೋಂನಲ್ಲೂ ಕೆಲವು ಆಚರಣೆಗಳು ಜರುಗಲಿವೆ.
-ಫೆ.28ರಂದು ಅಮೆರಿಕ-ಇಸ್ರೇಲ್ ಜಂಟಿ ದಾಳಿಗೆ ಮೃತ
-ಸುಮಾರು 4 ತಿಂಗಳ ಬಳಿಕ ಖಮೇನಿ ಅಂತ್ಯಸಂಸ್ಕಾರ-ಟೆಹ್ರಾನ್, ಕೋಂ, ಇರಾಕ್‌ನ ನಗರಗಳಲ್ಲಿ ಮೆರವಣಿಗೆ
-ಕಾರ್ಯಕ್ರಮದಲ್ಲಿ 2 ಕೋಟಿ ಜನ ಭಾಗವಹಿಸುವ ನಿರೀಕ್ಷೆ-ಭಾರತ, ರಷ್ಯಾ ಸೇರಿ 90 ದೇಶಗಳ ನಿಯೋಗ ಉಪಸ್ಥಿತಿ
-ಪುತ್ರ ಮೊಜ್ತಬಾ ಅನುಪಸ್ಥಿತಿಯಲ್ಲಿ ತಂದೆಯ ಅಂತ್ಯಕ್ರಿಯೆಟೆಹ್ರಾನ್: ಫೆ.28ರಂದು ಅಮೆರಿಕ-ಇಸ್ರೇಲ್ ಜಂಟಿ ದಾಳಿಗೆ ಮೃತಪಟ್ಟ ಇರಾನ್‌ನ ಸರ್ವೋಚ್ಚ ನಾಯಕ ಆಯತೋಲ್ಲ ಅಲಿ ಖಮೇನಿ ಅಂತ್ಯಕ್ರಿಯೆ ಶನಿವಾರದಿಂದ ಜು.9ರವರೆಗೆ ಪವಿತ್ರ ನಗರ ಮಶಾದ್‌ನಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳ ಮೂಲಕ ನಡೆಯಲಿದೆ. ದಕ್ಷಿಣ ಟೆಹ್ರಾನ್‌ನ ಮತ್ತೊಂದು ಪವಿತ್ರ ನಗರವಾದ ಕೋಂನಲ್ಲೂ ಕೆಲವು ಆಚರಣೆಗಳು ಜರುಗಲಿವೆ.ಇರಾನ್‌ನಲ್ಲಿ ಪರಮೋಚ್ಚ ಧಾರ್ಮಿಕ ನಾಯಕನಾಗಿ ಸುದೀರ್ಘಾವಧಿ ಸೇವೆ ಸಲ್ಲಿಸಿದ ಖಮೇನಿ ಫೆ.28ರಂದು ಮೃತಪಟ್ಟಿದ್ದರು. ಅದಾಗಿ ಸುಮಾರು 4 ತಿಂಗಳ ಬಳಿಕ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗುತ್ತಿದೆ.6 ದಿನಗಳ ಕಾರ್ಯಕ್ರಮ: ಶನಿವಾರದಿಂದ ಆರಂಭವಾಗಿ 6 ದಿನಗಳ ಕಾಲ ಅಂತಿಮ ವಿಧಿವಿಧಾನ ನಡೆಯಲಿವೆ. ಅಲ್ ಜಜೀರಾ ವರದಿಯ ಪ್ರಕಾರ, ಖಮೇನಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಗ್ರ್ಯಾಂಡ್ ಮೊಸಲ್ಲಾ ಪ್ರಾರ್ಥನಾ ಸಂಕೀರ್ಣದಲ್ಲಿ ಇರಿಸಲಾಗುತ್ತದೆ. ಜು.6ರಂದು ಟೆಹ್ರಾನ್‌ನ ಬೀದಿಗಳಲ್ಲಿ ಪಾರ್ಥಿವ ಶರೀರದ ಬೃಹತ್ ಮೆರವಣಿಗೆ ನಡೆಯಲಿದೆ. ಜು.7ರಂದು ಮೆರವಣಿಗೆಯು ಪ್ರಮುಖ ಧಾರ್ಮಿಕ ನಗರವಾದ ಕೋಂಗೆ ಸಾಗಲಿದ್ದು, ಜು.8ರಂದು ನೆರೆಯ ಇರಾಕ್‌ನಲ್ಲಿರುವ ಐತಿಹಾಸಿಕ ಪವಿತ್ರ ನಗರಗಳಾದ ನಜಾಫ್ ಮತ್ತು ಕರ್ಬಲಾಗಳಿಗೆ ತೆರಳಲಿದೆ. ಅಂತಿಮವಾಗಿ ಜು.9ರಂದು ಖಮೇನಿಯವರನ್ನು ಅವರ ತವರು ನಗರವಾದ ಮಶಾದ್‌ನಲ್ಲಿರುವ ಇಮಾಮ್ ರೆಜಾ ಮಸೀದಿಯಲ್ಲಿ ಸಮಾಧಿ ಮಾಡಲಾಗುತ್ತದೆ. 2 ಕೋಟಿ ಜನ ಭಾಗಿ: ಇರಾನ್ ಅಧಿಕಾರಿಗಳ ಪ್ರಕಾರ, 6 ದಿನಗಳ ಕಾರ್ಯಕ್ರಮದಲ್ಲಿ ಸುಮಾರು 1.5-2 ಕೋಟಿ ಜನ ಭಾಗವಹಿಸುವ ನಿರೀಕ್ಷೆಯಿದೆ. ‘ಪ್ರತೀಕಾರಕ್ಕಾಗಿ ದೇಶದ ಕರೆಯು ಇಡೀ ಜಗತ್ತಿನ ಕಿವಿಗೆ ಮುಟ್ಟಬೇಕು. ಹಾಗಾಗಿ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳಿ’ ಎಂದು ಸ್ಪೀಕರ್ ಮೊಹಮ್ಮದ್ ಬಘೇರ್ ಘಲಿಬಾಫ್ ಕರೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಟೆಹ್ರಾನ್ ಮತ್ತು ಇಡೀ ದೇಶಾದ್ಯಂತ ಬಿಗಿ ಭದ್ರತೆ ಹೆಚ್ಚಿಸಲಾಗಿದೆ. ಪುತ್ರ ಖಮೇನಿ ಭಾಗಿಯಾಗಲ್ಲ: ಖಮೇನಿಯ ಉತ್ತರಾಧಿಕಾರಿ ಹಾಗೂ ಅವರ ಪುತ್ರ ಮೊಜ್ತಾಬಾ ಖಮೇನಿ ಭದ್ರತಾ ಕಾರಣಗಳಿಂದಾಗಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದು ಭಾರತದಲ್ಲಿನ ಅವರ ಪ್ರತಿನಿಧಿ ಅಯತೊಲ್ಲಾ ಹಕೀಮ್ ಇಲಾಹಿ ತಿಳಿಸಿದ್ದಾರೆ. ಅಮೆರಿಕ ದಾಳಿಗೆ ತುತ್ತಾಗಿರುವ ಮೊಜ್ತಬಾ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರು ಓಡಾಡುವ ಸ್ಥಿತಿಯಲ್ಲೂ ಇಲ್ಲ ಎಂದು ವರದಿಯಾಗಿತ್ತು. ಅಲ್ಲದೆ, ಅವರು ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡೂ ಇಲ್ಲ. ಹೀಗಾಗಿ ಅವರ ದೇಹಸ್ಥಿತಿ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಭಾರತ ಸೇರಿ 90 ದೇಶಗಳ ಉಪಸ್ಥಿತಿ: ಟೆಹ್ರಾನ್‌ನಲ್ಲಿ ನಡೆಯಲಿರುವ ಖಮೇನಿ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಭಾರತ, ರಷ್ಯಾ ಸೇರಿ ಸುಮಾರು 90 ದೇಶಗಳ ನಿಯೋಗಗಳು ಭಾಗವಹಿಸುವುದಾಗಿ ಖಚಿತಪಡಿಸಿವೆ. ಭಾರತದಿಂದ ಬಿಹಾರದ ರಾಜ್ಯಪಾಲ ಸೈಯದ್ ಅತಾ ಹಸ್ನೈನ್, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪವಿತ್ರ ಮಾರ್ಗರಿಟಾ, ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್, ಸಂಸದ ಪವನ್ ಖೇರಾ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ಹಾಗೂ ಜಮ್ಮು-ಕಾಶ್ಮೀರದ ಮುಸ್ಲಿಂ ನಾಯಕ ಆಘಾ ಸೈಯದ್ ಹಸನ್ ಮೊಸವಿ ಅಲ್ ಸಫವಿ ಭಾಗವಹಿಸಲಿದ್ದಾರೆ.
ಪಾಕಿಸ್ತಾನದಿಂದ ಪ್ರಧಾನಿ ಶೆಹಬಾಜ್ ಷರೀಫ್ ಈಗಾಗಲೇ ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ.ಇಷ್ಟು ದಿನ ಮೃತದೇಹ ಎಲ್ಲಿತ್ತು?: ಖಮೇನಿ ಮೃತದೇಹವನ್ನು ತಾತ್ಕಾಲಿಕವಾಗಿ ಹೂಳಲಾಗಿದೆ ಎಂಬ ವದಂತಿಯಿತ್ತು. ಆದರೆ ಅದನ್ನು ಕೋಲ್ಡ್ ಸ್ಟೋರೇಜ್‌ನಲ್ಲಿಟ್ಟು ಸಂರಕ್ಷಿಸಲಾಗಿದೆ. ಇಸ್ಲಾಂನಲ್ಲಿ ರಾಸಾಯನಿಕ ಪ್ರಕ್ರಿಯೆ ನಿಷಿದ್ಧವಾದುದರಿಂದ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.ಸದ್ಯಕ್ಕೆ ಸಂಧಾನ ಮಾತುಕತೆ ಸ್ಟಾಪ್: ಅಂತ್ಯಕ್ರಿಯೆ ನಡೆಯಲಿರುವ 6 ದಿನಗಳ ಕಾಲ ಅಮೆರಿಕ ಜತೆ ಸಂಧಾನ ಮಾತುಕತೆಗಳನ್ನು ಇರಾನ್ ಸ್ಥಗಿತಗೊಳಿಸಿದೆ. ಜು.9ರ ನಂತರ ಎರಡೂ ಕಡೆಯ ನಡುವಿನ ಮಾತುಕತೆ ಪುನಾರಂಭವಾಗಲಿದೆ ಎಂದು ಕತಾರ್‌ನ ಮಧ್ಯವರ್ತಿಗಳು ತಿಳಿಸಿದ್ದಾರೆ.