ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿರುದ್ಧ ಅಯೋಧ್ಯೆಯ ಅರ್ಚಕ ಮಹಾಂತ ವಿನೋದ್ ಮಿಶ್ರಾ, ಗಂಭೀರ ಆರೋಪಗಳನ್ನು ಮಾಡಿದ್ದು, ದೇಗುಲದಲ್ಲಿ ದೇಣಿಗೆಯಲ್ಲಿ ಅಕ್ರಮ ನಡೆದಿದೆ ಎಂದಿದ್ದಾರಲ್ಲದೆ, ಹಾಲಿ ಇರುವ ಟ್ರಸ್ಟ್ ವಿಸರ್ಜಿಸಿ ಹೊಸ ಟ್ರಸ್ಟ್ ರಚನೆಗೆ ಆಗ್ರಹಿಸಿದ್ದಾರೆ.
ಅಯೋಧ್ಯೆ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿರುದ್ಧ ಅಯೋಧ್ಯೆಯ ಅರ್ಚಕ ಮಹಾಂತ ವಿನೋದ್ ಮಿಶ್ರಾ, ಗಂಭೀರ ಆರೋಪಗಳನ್ನು ಮಾಡಿದ್ದು, ದೇಗುಲದಲ್ಲಿ ದೇಣಿಗೆಯಲ್ಲಿ ಅಕ್ರಮ ನಡೆದಿದೆ ಎಂದಿದ್ದಾರಲ್ಲದೆ, ಹಾಲಿ ಇರುವ ಟ್ರಸ್ಟ್ ವಿಸರ್ಜಿಸಿ ಹೊಸ ಟ್ರಸ್ಟ್ ರಚನೆಗೆ ಆಗ್ರಹಿಸಿದ್ದಾರೆ.
ರಾಮಮಂದಿರ ದೇಣಿಗೆ ಅಕ್ರಮದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ವಿನೋದ್ ಮಿಶ್ರಾ ಅವರ ಹೇಳಿಕೆಯನ್ನು ಶುಕ್ರವಾರ ದಾಖಲಿಸಿಕೊಂಡಿದೆ. ಆಗ ಅವರು ಟ್ರಸ್ಟ್ ಹಾಗೂ ದೇಗುಲ ಸಿಬ್ಬಂದಿ ಬಗ್ಗೆ ಕಿಡಿಕಾರಿದ್ದಾರೆ.
ಮಿಶ್ರಾ ಆರೋಪಗಳೇನು?:‘
2025ರ ಅಕ್ಟೋಬರ್‌ನಲ್ಲಿ ಮುಂಬೈನ ಉದ್ಯಮಿಗಳು ರಾಮನಿಗೆ ಬೆಳ್ಳಿಯ ಪಾದುಕೆ ಮತ್ತು ಇತರ ಆಭರಣಗಳನ್ನು ಕೊಡಲು ಇಚ್ಛೆ ವ್ಯಕ್ತಪಡಿಸಿದರು. ಅವರ ಮನವಿ ಮೇರೆಗೆ, ನಾನು ರಾಮಮಂದಿರ ದೇಣಿಗೆ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ ಟಿನ್ನು ಯಾದವ್‌ರ ಸಂಪರ್ಕ ಮಾಡಿಕೊಟ್ಟೆ. ಟಿನ್ನು ಆ ಉದ್ಯಮಿಗಳನ್ನು ದೇಗುಲಕ್ಕೆ ಆಹ್ವಾನಿಸಿ, ದೇವರ ಮುಂದೆ ದಾನದ ವಸ್ತುಗಳನ್ನು ಇಡುವಂತೆ ಮಾಡಿದರು. ಆದರೆ ಅವುಗಳನ್ನು ನಿರ್ದಿಷ್ಟ ವಿಧಾನದ ಮೂಲಕ ಅಧಿಕೃತವಾಗಿ ಸ್ವೀಕರಿಸಲಿಲ್ಲ. ದಾನಿಗಳು ರಸೀದಿ ಕೇಳಿದರೆ, ನಂತರ ಕೊಡುವುದಾಗಿ ತಿಳಿಸಿದರು.
ಅವರಿಗೆ ರಸೀದಿ ನೀಡಿಲ್ಲ
ತಿಂಗಳುಗಳೇ ಕಳೆದರೂ ಇದುವರೆಗೆ ಅವರಿಗೆ ರಸೀದಿ ನೀಡಿಲ್ಲ. ದಾನದ ಆಭರಣಗಳನ್ನು ಪರಿಶೀಲಿಸಲು ನಾನೇ ಖುದ್ದು ಕರಸೇವಕಪುರಕ್ಕೆ ಹೋದೆ. ಅಲ್ಲಿ ಆ ವಸ್ತುಗಳು ಇರಲಿಲ್ಲ’ ಎಂದು ಮಿಶ್ರಾ ಆರೋಪಿಸಿದ್ದಾರೆ. ‘ಟಿನ್ನು ಯಾದವ್ ಸಂಗ್ರಹಿಸಿದ ಆಭರಣಗಳು ಎಲ್ಲಿವೆ ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಬೇಕು ಮತ್ತು ಅವುಗಳ ನಿರ್ವಹಣೆಗೆ ಕಾರಣರಾದವರನ್ನು ಗುರುತಿಸಬೇಕು. ತನಿಖೆಯ ಸಮಯದಲ್ಲಿ ಲೋಪಗಳು ಕಂಡುಬಂದರೆ, ಟ್ರಸ್ಟ್‌ನ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸದ್ಯ ಇರುವ ಈ ಟ್ರಸ್ಟ್ ಅನ್ನು ವಿಸರ್ಜಿಸಿ, ಹೊಸ ಟ್ರಸ್ಟ್ ರಚಿಸಬೇಕು’ ಒತ್ತಾಯಿಸಿದ್ದಾರೆ.