12 ವರ್ಷಗಳ ಪಿಎಂ ಮೋದಿ ವೈಫಲ್ಯಕ್ಕೆ ಸಾಕ್ಷ್ಯ : ಪ್ರತಿಪಕ್ಷ

Published : May 12, 2026, 06:29 AM IST
rahul gandhi

ಸಾರಾಂಶ

ಮಧ್ಯಪ್ರಾಚ್ಯ ಸಂಘರ್ಷ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ನಿಭಾಯಿಸಲು ಸಾರ್ವಜನಿಕರ ಸಹಕಾರಕ್ಕೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಪಕ್ಷಗಳು ತೀವ್ರವಾಗಿ ಹರಿಹಾಯ್ದಿವೆ.

 ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ನಿಭಾಯಿಸಲು ಸಾರ್ವಜನಿಕರ ಸಹಕಾರಕ್ಕೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಪಕ್ಷಗಳು ತೀವ್ರವಾಗಿ ಹರಿಹಾಯ್ದಿವೆ. ‘ದೇಶದ ಭದ್ರತೆ ಜೊತೆಗೆ ರಾಜಿ ಮಾಡಿಕೊಂಡಿರುವ ಪ್ರಧಾನಿ, ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿವೆ.

ಚುನಾವಣೆ ಮುಗಿದ ಕೂಡಲೇ ಜನ ಏನು ಖರೀದಿ ಮಾಡಬೇಕು, ಏನು ಖರೀದಿ ಮಾಡಬಾರದು ಎಂದು ಮೋದಿ ಉಪನ್ಯಾಸ ನೀಡುತ್ತಿದ್ದಾರೆ. ನಿಮ್ಮ 12 ವರ್ಷಗಳ ಆಡಳಿತದ ವೈಫಲ್ಯವನ್ನು ಜನರ ಮೇಲೆ ಹೊರಿಸಬೇಡಿ ಎಂದು ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದರೆ, ಕೇಂದ್ರ ಸರ್ಕಾರ ಅರ್ಥವ್ಯವಸ್ಥೆ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಸಿಂಗ್‌ ಯಾದವ್‌ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ರಾಹುಲ್‌ ಗಾಂಧಿ, ಚಿನ್ನ ಖರೀದಿಸಬೇಡಿ, ವಿದೇಶಿ ಪ್ರವಾಸ ಮಾಡಬೇಡಿ, ಕಡಿಮೆ ಪೆಟ್ರೋಲ್‌ ಬಳಸಿ, ಗೊಬ್ಬರ ಬಳಕೆ, ಅಡುಗೆ ತೈಲ ಬಳಕೆ ಕಡಿಮೆ ಮಾಡಿ, ಮೆಟ್ರೋದಲ್ಲಿ ಸಂಚರಿಸಿ, ಮನೆಯಿಂದಲೇ ಕೆಲಸ ಮಾಡಿ ಎಂದು ಮೋದಿ ಕರೆ ನೀಡಿದ್ದಾರೆ. ಇದು ಅವರ ಸಲಹೆಗಳಲ್ಲ, ಬದಲಾಗಿ ವೈಫಲ್ಯದ ಸಾಕ್ಷಿಗಳು. 12 ವರ್ಷಗಳಲ್ಲಿ ದೇಶ ಯಾವ ಸ್ಥಿತಿಗೆ ಬಂದಿದೆ ಅಂದರೆ ಸಾರ್ವಜನಿಕರಿಗೆ ಏನು ಖರೀದಿಸಬೇಕು, ಏನು ಖರೀದಿಸಬಾರದು? ಎಲ್ಲಿ ಹೋಗಬೇಕು, ಎಲ್ಲಿ ಹೋಗಬಾರದು ಎಂದು ಹೇಳಬೇಕಾಗಿದೆ. ಬಿಜೆಪಿ ಸರ್ಕಾರ ತನ್ನ ಉತ್ತರದಾಯಿತ್ವದಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರ ಮೇಲೆ ಹೊಣೆವಹಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಖರ್ಗೆ ಆಕ್ರೋಶ:

ಆರ್ಥಿಕತೆ ಮೇಲೆ ಅಡ್ಡಪರಿಣಾಮ, ರುಪಾಯಿ ಮೌಲ್ಯ ಕುಸಿತ, ಹೆಚ್ಚುತ್ತಿರುವ ಬೆಲೆ ಮತ್ತು ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌, ಗೊಬ್ಬರ ಕೊರತೆ, ಆಹಾರ ಭದ್ರತೆಗೆ ಎದುರಾಗಿರುವ ಅಪಾಯ, ಔಷಧಗಳ ಬೆಲೆ ಹೆಚ್ಚಳ, ಎಂಎಸ್‌ಎಂಇ ಬಿಕ್ಕಟ್ಟು ಮತ್ತಿತರೆ ಪರಿಣಾಮಗಳ ಕುರಿತು ಮಧ್ಯಪ್ರಾಚ್ಯ ಸಂಘರ್ಷ ಆರಂಭವಾದಾಗಲೇ ಕಾಂಗ್ರೆಸ್‌ ಎಚ್ಚರಿಸಿತ್ತು. ಆದರೂ ಪ್ರಧಾನಿ ಚುನಾವಣಾ ಪ್ರಚಾರ, ರೋಡ್‌ ಶೋಗಳಲ್ಲಿ ಬ್ಯುಸಿಯಾಗಿದ್ದರು. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಿದ್ದರು. ಚುನಾವಣೆ ಮುಗಿಯುತ್ತಿದ್ದಂತೆ ಈಗ ಈ ರೀತಿ ಮಾಡಬೇಡಿ, ಅದನ್ನು ಖರೀದಿಸಬೇಡಿ, ಇದನ್ನು ಉಳಿಸಿ, ಮನೆಯಿಂದ ಕೆಲಸ ಮಾಡಿ ಎಂದು ಉಪನ್ಯಾಸ ನೀಡುತ್ತಿದ್ದಾರೆಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಅಖಿಲೇಶ್‌ ಕಿಡಿ:

ಈ ನಡುವೆ ಚುನಾವಣೆ ಮುಗಿದ ಬೆನ್ನಲ್ಲೇ ಸರ್ಕಾರಕ್ಕೆ ಬಿಕ್ಕಟ್ಟಿನ ನೆನಪಾಗಿದೆ. ಆದರೆ, ಸದ್ಯ ದೇಶಕ್ಕಿರುವುದು ಒಂದೇ ಬಿಕ್ಕಟ್ಟು. ಅದು ಬಿಜೆಪಿ ಮಾತ್ರ! ಡಾಲರ್‌ ಎದುರು ರುಪಾಯಿ ಮೌಲ್ಯ ಪಾತಾಳಕ್ಕೆ ಇಳಿಯುತ್ತಿದೆ. ಮೋದಿ ಅವರು ಸಾರ್ವಜನಿಕರ ಬದಲು ಭ್ರಷ್ಟ ಬಿಜೆಪಿ ನಾಯಕರಿಗೆ ಚಿನ್ನ ಖರೀದಿಸದಂತೆ ಕರೆ ನೀಡಬೇಕು. ಯಾಕೆಂದರೆ ಸದ್ಯದ ಸ್ಥಿತಿಯಲ್ಲಿ ಜನಸಾಮಾನ್ಯರು ಸಣ್ಣ ಪ್ರಮಾಣದ ಚಿನ್ನ ಖರೀದಿಸಲೂ ಸಾಧ್ಯವಿಲ್ಲ ಎಂದು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ವ್ಯಂಗ್ಯವಾಡಿದ್ದಾರೆ.

ಇವು ಸಲಹೆ ಅಲ್ಲ, ವೈಫಲ್ಯ

ಇವು ಮೋದಿ ಅವರ ಸಲಹೆಗಳಲ್ಲ, ಬದಲಾಗಿ ವೈಫಲ್ಯದ ಸಾಕ್ಷಿಗಳು. 12 ವರ್ಷಗಳಲ್ಲಿ ದೇಶ ಯಾವ ಸ್ಥಿತಿಗೆ ಬಂದಿದೆ ಅಂದರೆ ಸಾರ್ವಜನಿಕರಿಗೆ ಏನು ಖರೀದಿಸಬೇಕು, ಏನು ಖರೀದಿಸಬಾರದು? ಎಲ್ಲಿ ಹೋಗಬೇಕು, ಎಲ್ಲಿ ಹೋಗಬಾರದು ಎಂದು ಹೇಳಬೇಕಾಗಿದೆ.

- ರಾಹುಲ್‌ ಗಾಂಧಿ ಪ್ರತಿಪಕ್ಷ ನಾಯಕ

ಕಾಂಗ್ರೆಸ್‌ ಮೊದಲೇ ಎಚ್ಚರಿಸಿತ್ತು

ಮಧ್ಯಪ್ರಾಚ್ಯ ಸಂಘರ್ಷ ಆರಂಭವಾದಾಗಲೇ ಕಾಂಗ್ರೆಸ್‌ ಎಚ್ಚರಿಸಿತ್ತು. ಆದರೂ ಪ್ರಧಾನಿ ಚುನಾವಣಾ ಪ್ರಚಾರ, ರೋಡ್‌ ಶೋಗಳಲ್ಲಿ ಬ್ಯುಸಿಯಾಗಿದ್ದರು. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಿದ್ದರು. ಪಂಚರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ಉಪನ್ಯಾಸ ನೀಡುತ್ತಿದ್ದಾರೆ.

- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಧ್ಯಕ್ಷ

ದೇಶಕ್ಕೆ ಬಿಜೆಪಿಯೇ ಬಿಕ್ಕಟ್ಟು

ಸಾರ್ವಜನಿಕರ ಬದಲು ಭ್ರಷ್ಟ ಬಿಜೆಪಿ ನಾಯಕರಿಗೆ ಚಿನ್ನ ಖರೀದಿಸದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಬೇಕು. ಯಾಕೆಂದರೆ ಸದ್ಯದ ಸ್ಥಿತಿಯಲ್ಲಿ ಜನಸಾಮಾನ್ಯರು ಸಣ್ಣ ಪ್ರಮಾಣದ ಚಿನ್ನ ಖರೀದಿಸಲೂ ಸಾಧ್ಯವಿಲ್ಲ. ಸದ್ಯ ದೇಶಕ್ಕಿರುವುದು ಒಂದೇ ಬಿಕ್ಕಟ್ಟು. ಅದು ಬಿಜೆಪಿ ಮಾತ್ರ!

- ಅಖಿಲೇಶ್‌ ಯಾದವ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ

ಇದು ಯಾವ ಅಭಿವೃದ್ಧಿ?

2024-25ರಲ್ಲಿಯೇ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶ ಮಾಡುವೆ ಎಂದು ಕೊಚ್ಚಿಕೊಂಡಿದ್ದರು. ಭಾರತದ ಅಭಿವೃದ್ದಿ ರಥ ನಾಗಾಲೋಟದಿಂದ ಮುಂದೋಡುತ್ತಿದೆ ಎಂದು ಬೀಗಿದ್ದರು. ಈಗ ಬಳಕೆ ತಗ್ಗಿಸಿ ಎಂದು ಬೇಡಿಕೊಳ್ಳುತ್ತಿರುವುದು ಯಾವ ಅಭಿವೃದ್ದಿಯ ಲಕ್ಷಣ?

- ಸಿದ್ದರಾಮಯ್ಯ, ಮುಖ್ಯಮಂತ್ರಿ

ಮೊದಲು ಬಿಜೆಪಿಗರಿಗೆ ಹೇಳಿ

ಶುಭ ಕಾರ್ಯಗಳಿಗೆ ಚಿನ್ನ ತೆಗೆದುಕೊಳ್ಳಬೇಡಿ ಎಂದು ಜನರಿಗೆ ಹೇಳಲು ಸಾಧ್ಯವೇ? ಜನರಿಗೆ ಸಲಹೆ ನೀಡುವ ಬದಲು ಕೇಂದ್ರ ಸಚಿವರು, ಅಧಿಕಾರಿಗಳು ಮೊದಲು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವಂತೆ ಮಾಡಲಿ. ಆನಂತರ ಜನರಿಗೆ ಸಂದೇಶ ನೀಡಲಿ. ತ್ಯಾಗ ಬಿಜೆಪಿಯಿಂದ ಆರಂಭವಾಗಲಿ.

- ಡಿ.ಕೆ.ಶಿವಕುಮಾರ್‌ ಡಿಸಿಎಂ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಚಿನ್ನ ಖರೀದಿ ಬಿಟ್ಟರೆ 1 ಕೋಟಿ ಉದ್ಯೋಗಕ್ಕೆ ಕುತ್ತು: ಆಭರಣ ಮಂಡಳಿ
ಸಾಕಷ್ಟು ಇಂಧನ ಸಂಗ್ರಹ ಇದೆ, ಆದ್ರೆ ಸಂರಕ್ಷಣೆ ಅಗತ್ಯ : ಸರ್ಕಾರ