ಗ್ರೀನ್‌ವಿಚ್‌ ಟೈಮ್‌ ಉಜ್ಜಯಿನಿಗೆ ಸ್ಥಳಾಂತರಿಸಲು ಕ್ರಮ

KannadaprabhaNewsNetwork |  
Published : Dec 24, 2023, 01:45 AM ISTUpdated : Dec 26, 2023, 01:57 PM IST
ಸಮಯ ಪರಿವೀಕ್ಷಣಾ ಯಂತ್ರ | Kannada Prabha

ಸಾರಾಂಶ

ಉಜ್ಜಯಿನಿಯಲ್ಲಿ ಜಗತ್ತಿನ ಪ್ರಧಾನ ಮಧ್ಯ ರೇಖೆಯಿದ್ದು, ಗ್ರೀನ್‌ವಿಚ್‌ ಬದಲು ಉಜ್ಜಯಿನಿಯೇ ಸಮಯ ನಿರ್ಧಾರಕವಾಗಲು ಪ್ರಯತ್ನ ಮಾಡಲಾಗುವುದು. ಸಮಯ ನಿರ್ಧರಿಸುವ ಪುರಾತನ ಯಂತ್ರ ಉಜ್ಜಿಯಿನಿಯಲ್ಲಿದ್ದು, ಅದರ ಪುನರುತ್ಥಾನಕ್ಕೆ ಯತ್ನಿಸಲಾಗುವುದು ಎಂದು ಸಿಎಂ ಮೋಹನ್‌ ಯಾದವ್‌ ತಿಳಿಸಿದ್ದಾರೆ.

ನವದೆಹಲಿ: ‘300 ವರ್ಷಗಳ ಹಿಂದಿನವರೆಗೆ ಜಗತ್ತಿನ ಸಮಯವನ್ನು ಭಾರತವೇ ನಿರ್ಧರಿಸುತ್ತಿತ್ತು. ಜಗತ್ತಿನ ಸಮಯ ನಿರ್ಧರಿಸುವ ಪುರಾತನ ಯಂತ್ರ ಈಗಲೂ ಉಜ್ಜಯಿನಿಯಲ್ಲಿದೆ. ಅದರ ಪುನರುತ್ಥಾನಕ್ಕೆ ಎಲ್ಲ ಪ್ರಯತ್ನ ಮಾಡಲಾಗುವುದು’ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ ಹೇಳಿದ್ದಾರೆ.‘ಈಗ ಜಗತ್ತಿನ ಸಮಯ ನಿರ್ಧರಿಸುವ ಸ್ಥಳವನ್ನಾಗಿ ಇಂಗ್ಲೆಂಡ್‌ನ ಗ್ರೀನ್‌ವಿಚ್‌ ಅನ್ನು ಪರಿಗಣಿಸಲಾಗುತ್ತದೆ. ಆದರೆ ಜಗತ್ತಿನ ಸಮಯ ನಿರ್ಧರಿಸುವ ನಿಜವಾದ ಸ್ಥಳ ಉಜ್ಜಯಿನಿಯಾಗಿದೆ. ಹೀಗಾಗಿ ಪ್ರಧಾನ ಮಧ್ಯರೇಖೆಯನ್ನು ಗ್ರೀನ್‌ವಿಚ್‌ ಬದಲು ಉಜ್ಜಯಿನಿಗೆ ನಿಗದಿಪಡಿಸಲು ಯತ್ನಿಸಲಾಗುವುದು. ತನ್ಮೂಲಕ ಮಧ್ಯರಾತ್ರಿ 12 ಗಂಟೆಗೆ ದಿನ ಆರಂಭವಾಗುತ್ತದೆ ಎಂದು ಪರಿಗಣಿಸುವ ಬದಲು ಬೆಳಿಗ್ಗೆ ಸೂರ್ಯೋದಯದೊಂದಿಗೆ ದಿನ ಆರಂಭವಾಗುವಂತೆ ಕಾಲವನ್ನು ನಿಗದಿಪಡಿಸಲಾಗುವುದು’ ಎಂದು ತಿಳಿಸಿದ್ದಾರೆ.ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಮೋಹನ್‌ ಯಾದವ್‌, ‘ಈಗ ಎಲ್ಲವೂ ಪಾಶ್ಚಾತ್ಯೀಕರಣಗೊಂಡಿದೆ. 300 ವರ್ಷಗಳ ಹಿಂದಿನವರೆಗೆ ಭಾರತದ ಸ್ಟಾಂಡರ್ಡ್‌ ಟೈಮ್‌ ಅನ್ನೇ ಜಗತ್ತು ಪ್ರಧಾನ ಸಮಯವಾಗಿ ಪರಿಗಣಿಸುತ್ತಿತ್ತು. ನಂತರ ಪ್ಯಾರಿಸ್‌ ಸಮಯ ನಿಗದಿಪಡಿಸತೊಡಗಿತು. ಬಳಿಕ ಬ್ರಿಟಿಷರು ಅದನ್ನು ಸುಪರ್ದಿಗೆ ಪಡೆದು ತಮ್ಮ ದೇಶದಲ್ಲಿರುವ ಗ್ರೀನ್‌ವಿಚ್‌ ಅನ್ನು ಪ್ರಧಾನ ಮಧ್ಯರೇಖೆಯ ಕೇಂದ್ರವಾಗಿ ಪರಿಗಣಿಸಿ, ಅಲ್ಲಿಂದಲೇ ಸಮಯ ನಿಗದಿಪಡಿಸತೊಡಗಿದರು. ಅವರ ಪ್ರಕಾರ ಮಧ್ಯರಾತ್ರಿ 12ಕ್ಕೆ ದಿನದ ಆರಂಭವಾಗುತ್ತದೆ. ಆದರೆ ಯಾರು ತಾನೇ ಮಧ್ಯರಾತ್ರಿಯಿಂದ ದಿನವನ್ನು ಆರಂಭಿಸುತ್ತಾರೆ? ಜನರು ಸೂರ್ಯೋದಯದ ವೇಳೆಗೆ ಏಳುತ್ತಾರೆ’ ಎಂದು ಹೇಳಿದರು.ನಮ್ಮ ಸರ್ಕಾರ ಉಜ್ಜಯಿನಿಯೇ ಜಗತ್ತಿನ ಸಮಯ ನಿಗದಿಪಡಿಸುವ ಸ್ಥಳವೆಂದು ಜಗತ್ತು ಪರಿಗಣಿಸುವಂತೆ ಮಾಡಲು ಯತ್ನಿಸುತ್ತದೆ. ತನ್ಮೂಲಕ ಜಗತ್ತಿನ ಸಮಯವನ್ನು ಸರಿಪಡಿಸುತ್ತದೆ ಎಂದು ಯಾದವ್‌ ತಿಳಿಸಿದರು.

--

ಹಿಂದೂ ಪಂಚಾಂಗ ಹೇಳುವುದೇನು?ಪ್ರಾಚೀನ ಹಿಂದು ನಂಬಿಕೆಗಳ ಪ್ರಕಾರ ಭಾರತದ ಉಜ್ಜಯಿನಿಯೇ ದೇಶದ ಟೈಮ್‌ ಜೋನ್‌ಗಳನ್ನು ಹಾಗೂ ವ್ಯತ್ಯಾಸವನ್ನು ನಿರ್ಧರಿಸುತ್ತದೆ. ಹಿಂದು ಪಂಚಾಂಗಕ್ಕೂ ಇದೇ ಆಧಾರವಾಗಿದೆ.

PREV

Recommended Stories

ರಾಹುಲ್‌ ಗಾಂಧಿಗೆ ಸುಪ್ರೀಂ ಕೋರ್ಟ್‌ ತೀವ್ರ ತಪರಾಕಿ!
ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ವಿರುದ್ಧ ಕೇಂದ್ರಕ್ಕೆ ಮಹಾ ದೂರು