ಕನ್ನಡಪ್ರಭ ವಾರ್ತೆ ಬೆಳಗಾವಿ
ಹಿಡಕಲ್ ಡ್ಯಾಂ ಹಿನ್ನೀರಿನಿಂದ ಮುಳುಗಡೆಯಾದ ಭೂಮಿಗೆ ಸರ್ಕಾರ ಶೀಘ್ರವೇ ಪರಿಹಾರ ನೀಡುವಂತೆ ಒತ್ತಾಯಿಸಿ ಮಾಸ್ತಿಹೊಳಿ ಗ್ರಾಮದ ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿರಂತರ ಧರಣಿ ನಡೆಸಿದರು.ಇದಕ್ಕೂ ಮೊದಲು ಇಲ್ಲಿನ ರಾಣಿ ಚನ್ನಮ್ಮ ವೃತ್ತದಿಂದ ಕರ್ನಾಟಕ ನೀರಾವರಿ ನಿಗಮದ ಕಚೇರಿವರೆಗೂ ಪ್ರತಿಭಟನೆ ನಡೆಸಿದರು. ಬಡವರ ನೆರವಿಗೆ ಬಾರದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ, ನೀರಾವರಿ ನಿಗಮದ ಮುಖ್ಯ ಅಭಿಯಂತರ ಅಧಿಕಾರಿಗೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪರಿಹಾರ ಕೊಡಿ ಇಲ್ಲವಾದರೇ ಒಂದು ತೊಟ್ಟು ವಿಷ ಕೊಡಿ ಎಂದು ರೈತರು ಆಕ್ರೋಶ ಹೊರಹಾಕಿದರು. ನೀರಾವರಿ ಕಚೇರಿ ಮುತ್ತಿಗೆ ಹಾಕಿ, ಪರಿಹಾರ ವಿಳಂಬ ಮಾಡುತ್ತಿರುವ ನೀರಾವರಿ ಅಧಿಕಾರಿಗಳ ವಿರುದ್ಧ ಧರಣಿ ಸತ್ಯಾಗ್ರಹ ನಡೆಸಿದರು.ರೈತರ ಫಲವತ್ತಾದ 394 ಎಕರೆ ಜಮೀನುಗಳು ಹಿಡಕಲ್ ಡ್ಯಾಂ ಹಿನ್ನೀರಿನಿಂದ ಮುಳುಗಡೆಯಾಗಿದೆ. ಸರ್ಕಾರ ಪರಿಹಾರ ನೀಡಬೇಕು ಎಂದು ಈ ಭಾಗದ ರೈತರು ಕಳೆದ 40 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದಾರೆ. ಅನ್ನದಾತರಿಗೆ ಮೋಸ ಮಾಡುತ್ತಿರುವ 3 ಅಧಿಕಾರಿಗಳನ್ನು ಶೀಘ್ರವೇ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.
ಬಾಳೇಶ ಮಾವನೂರಿ ಮಾತನಾಡಿ, ಸಂಭಂದಪಟ್ಟ ನೀರಾವರಿ ಇಲಾಖೆ ಭೂ ಸ್ವಾಧೀನ ಪ್ರಸ್ತಾವನೆ ಸಲ್ಲಿಸಲು ಕ್ರಮಕೈಗೊಳ್ಳವಂತೆ ಹೈಕೋರ್ಟ ಆದೇಶ ನೀಡಿದೆ. ಮೂರು ತಿಂಗಳಾದರೂ ನೀರಾವರಿ ಇಲಾಖೆಯಿಂದ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. ಫಲವತ್ತಾದ 394 ಎಕರೆ ಜಮೀನು ನೀರಲ್ಲಿ ಮುಳಗಿ ಹೋಗಿದೆ. ಎಲ್ಲ ಸರ್ಕಾರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಕ್ರಮಕೈಗೊಂಡಿಲ್ಲ ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿಕೆಶಿವಕುಮಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಸೂಚನೆ ನೀಡಿದ್ದಾರೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ನ್ಯಾಯಾಲಯ ಆದೇಶ ಗಾಳಿಗೆ ತೂರಿದ್ದಾರೆ, ವಿನಾಕಾರಣ ಕಾಲಹರಣ ಮಾಡಿ ರೈತರನ್ನು ಕಚೇರಿಗೂ ಅಲೆಸುತ್ತಿದ್ದಾರೆ. ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಶೀಘ್ರವೇ ಅನಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.ಜೀವನ ಉಪಯೋಗಕ್ಕೆ ಮೂಲಾಧಾರ ಜಮೀನು ಮುಳುಗಡೆಯಾಗಿದೆ. ಡ್ಯಾಂ ಹಿನ್ನೀರಿನಲ್ಲಿ ಸಣ್ಣ ಭೂ ಮಾಲಿಕರು ಇದ್ದೇವೆ. ಸರ್ಕಾರ ರೈತರ ಕಷ್ಟಗಳನ್ನು ಅರಿತು ತ್ವರೀತವಾಗಿ ಭೂ ಪರಿಹಾರ ನೀಡಬೇಕು, ಇಲ್ಲವಾದರೇ ಜಿಲ್ಲಾಧಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತರಿಗೆ ಕಿರುಕುಳ ನೀಡಿದ ಮೂವರು ಅಧಿಕಾರಿಗಳನ್ನು ಪ್ರತಿಭಟನಾ ಸ್ಥಳಕ್ಕೆ ಕರೆತರುವಂತೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ನಿಂಗಪ್ಪ ಗೋಣಿ, ದುಂಡಪ್ಪ ಬಡಿಗೇರ, ಬಸಪ್ಪ ಬಸಾಪೂರಿ, ನಿಂಗಪ್ಪ ಮಾವನೂರಿ, ರಾಯಗೌಡ ಪಾಟೀಲ್, ಬಸವರಾಜ ಮೋಕಾಶಿ, ಪರಸಪ್ಪಾ ಪಾಟೀಲ್, ಕಮಲವ್ವ ಇರಗಾರ, ಶೋಬಾ ಮೇಕಲಿ, ಸಂತೋಷ ಪಾಟೀಲ, ಸವಿತಾ ಕುಂಬಾರ, ಗೌರವಾ ಮೂಕಾಶಿ, ಶಾಂತವ್ವ ಗಸ್ತಿ, ಸುಶೀಲಾ ಮಾವನೂರಿ, ಭರಮಾ ಕಮತೆ, ಉದಯ ಹೀರೆಮಠ ಹಾಗೂ ಇತರರು ಇದ್ದರು.