ದಕ್ಷಿಣ ಭಾರತಕ್ಕೆ ಶುಭ ಸುದ್ದಿ, 2ನೇ ಅವಧೀಲಿ ಉತ್ತಮ ಮುಂಗಾರು?

Published : Aug 03, 2026, 06:10 AM IST
rain

ಸಾರಾಂಶ

ಎಲ್‌ನಿನೋ ಪರಿಣಾಮದಿಂದಾಗಿ ದೇಶಾದ್ಯಂತ ಮುಂಗಾರು ಮಳೆ ಕೊರತೆಯ ಅಪಾಯ ದಟ್ಟೈಸಿರುವ ಹೊತ್ತಿನಲ್ಲೇ, ಹವಾಮಾನದಲ್ಲಿನ ಸಂಭವನೀಯ ಹೊಸ ಬದಲಾವಣೆಯೊಂದು ಉತ್ತಮ ಮಳೆಗೆ ಕಾರಣವಾದರೂ ಆಗಬಹುದು ಎಂದು ಜಾಗತಿಕ ಹವಾಮಾನ ಸಂಸ್ಥೆ ಶುಭಸುದ್ದಿ ನೀಡಿದೆ.

ನವದೆಹಲಿ: ಎಲ್‌ನಿನೋ ಪರಿಣಾಮದಿಂದಾಗಿ ದೇಶಾದ್ಯಂತ ಮುಂಗಾರು ಮಳೆ ಕೊರತೆಯ ಅಪಾಯ ದಟ್ಟೈಸಿರುವ ಹೊತ್ತಿನಲ್ಲೇ, ಹವಾಮಾನದಲ್ಲಿನ ಸಂಭವನೀಯ ಹೊಸ ಬದಲಾವಣೆಯೊಂದು ಉತ್ತಮ ಮಳೆಗೆ ಕಾರಣವಾದರೂ ಆಗಬಹುದು ಎಂದು ಜಾಗತಿಕ ಹವಾಮಾನ ಸಂಸ್ಥೆ ಶುಭಸುದ್ದಿ ನೀಡಿದೆ. ಎಲ್‌ನಿನೋ ಪರಿಣಾಮ ದೇಶದಲ್ಲಿ ಶೇ.20ಕ್ಕೂ ಹೆಚ್ಚು, ಕರ್ನಾಟಕ ಸೇರಿ ಕೆಲವು ರಾಜ್ಯಗಳಲ್ಲಿ ಶೇ.40ಕ್ಕಿಂತ ಹೆಚ್ಚಿನ ಮಳೆ ಕೊರತೆ ದಾಖಲಾಗಿರುವ ಹೊತ್ತಿನಲ್ಲೇ ಈ ಸುದ್ದಿ ಹೊರಬಿದ್ದಿದೆ.

ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಬಿಡುಗಡೆ ಮಾಡಿದ ಮಾಸಿಕ ವರದಿ ಅನ್ವಯ, ಈಗಾಗಲೇ ತನ್ನ ಪರಿಣಾಮಗಳನ್ನು ಬೀರುತ್ತಿರುವ ಎಲ್‌ನಿನೋ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದೆ. ಇದರಿಂದ ಜಾಗತಿಕ ಉಷ್ಣಾಂಶದಲ್ಲಿ ಏರಿಕೆ, ಮಳೆ ಕೊರತೆ, ಬೆಳೆ ನಾಶದ ಅಪಾಯ ಹೆಚ್ಚಾಗಲಿದೆ.

ಐಒಡಿ ಸಾಧ್ಯತೆ:

ಆದರೆ ಎಲ್‌ನಿನೋ ದಟ್ಟವಾಗುವ ಆತಂಕದ ನಡುವೆಯೂ ‘ಪಾಸಿಟಿವ್ ಇಂಡಿಯನ್ ಓಷನ್ ಡೈಪೋಲ್’ (ಐಒಡಿ) ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವಿಶ್ವ ಹವಾಮಾನ ಸಂಸ್ಥೆ ಹೇಳಿದೆ. ‘ನೆಗೆಟಿವ್‌ ಇಂಡಿಯನ್‌ ಓಷನ್ ಡೈಪೋಲ್‌’ ಮುಂಗಾರು ಮಳೆಯ ಸಾಧ್ಯತೆ ಕಡಿಮೆ ಮಾಡಿದರೆ, ‘ಪಾಸಿಟಿವ್‌ ಇಂಡಿಯನ್‌ ಓಷನ್‌ ಡೈಪೋಲ್‌’ ಮಳೆ ಸಾಧ್ಯತೆ ಹೆಚ್ಚಿಸುವ ಶಕ್ತಿ ಹೊಂದಿರುತ್ತದೆ. ಹೀಗಾಗಿ ಐಒಡಿ ಕಾಣಿಸಿಕೊಂಡು ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚುವ ಸಾಧ್ಯತೆ ಬಗ್ಗೆ ವರದಿಯಲ್ಲಿ ಸಂಸ್ಥೆ ಉಲ್ಲೇಖಿಸಿದೆ.

ಇತಿಹಾಸ:

ಈ ಹಿಂದೆ 1997ರಲ್ಲೂ ಎಲ್‌ನಿನೋದ ಪರಿಣಾಮ ಭಾರತದಲ್ಲಿ ಭಾರೀ ಮಳೆ ಕೊರತೆ ಉಂಟಾಗಿತ್ತು. ಆದರೆ ದಿಢೀರನೆ ಕಾಣಿಸಿಕೊಂಡ ಐಒಡಿ ಪರಿಣಾಮ ದೇಶದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿತ್ತು. ಅಂತಿಮವಾಗಿ ಸೆಪ್ಟೆಂಬರ್‌ನಲ್ಲಿ ಸಾಮಾನ್ಯಕ್ಕಿಂತ ಶೇ.2ರಷ್ಟು ಹೆಚ್ಚು ಮಳೆ ದಾಖಲಾಗಿತ್ತು. ಹೀಗಾಗಿ ಈ ಬಾರಿಯೂ ಐಒಡಿ ಕಾಣಿಸಿಕೊಂಡರೆ ಹೆಚ್ಚಿನ ಮಳೆಯ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಎಲ್‌ನಿನೋ:

ಎಲ್ ನಿನೊ ಎಂದರೆ ಪೆಸಿಫಿಕ್ ಸಾಗರದ ಮಧ್ಯ ಮತ್ತು ಪೂರ್ವ ಭಾಗದಲ್ಲಿನ ನೀರಿನ ಮೇಲ್ಮೈನ ಉಷ್ಣಾಂಶ ಹೆಚ್ಚಾಗುವ ವಿದ್ಯಮಾನ. ಇದು ಪೂರ್ವದ ಕಡೆಗೆ ಹಬ್ಬುವ ಗಾಳಿಯನ್ನು ದುರ್ಬಲಗೊಳಿಸುತ್ತದೆ. ಪರಿಣಾಮ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಮುಂಗಾರು ಮಳೆಯ ಕೊರತೆ ಕಾಣಿಸಿಕೊಳ್ಳುತ್ತದೆ.

ಒಐಡಿ:

ಇಂಡಿಯನ್‌ ಓಷನ್‌ ಡೈಪೋಲ್‌ ವಿದ್ಯಮಾನ ಘಟಿಸಿದರೆ ಹಿಂದೂ ಮಹಾಸಾಗರದ ಪೂರ್ವ ಮತ್ತು ಪಶ್ಚಿಮ ನೀರಿನ ಮೇಲ್ಮೈ ಉಷ್ಣಾಂಶದಲ್ಲಿ ಬದಲಾವಣೆ ಸಂಭವಿಸಿ ಭಾರತದಲ್ಲಿ ಮುಂಗಾರು ಚುರುಕಾಗಿ ಹೆಚ್ಚಿನ ಮಳೆ ಸುರಿಸುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿಜೆಪಿ ಮುಂದಿನ ಹಾದಿ ಚರ್ಚೆಗೆ ಆ.5ಕ್ಕೆ ಕೋರ್‌ ಕಮಿಟಿಯ ಸಭೆ
ನಾನಿನ್ನೂ ವಿದ್ಯಾರ್ಥಿ, ನಿತ್ಯವೂ ಕಲಿಯುತ್ತಲೇ ಇದ್ದೇನೆ : ರಾಗಾ