ನವದೆಹಲಿ: ಟೆಕ್ ದೈತ್ಯ ಗೂಗಲ್ ತನ್ನ ಬಳಕೆದಾರಿಗೆ ಅನುಕೂಲವಾಗುವಂತಹ ಬದಲಾವಣೆಯೊಂದನ್ನು ಪರಿಚಯಿಸಿದೆ. ಇದರನ್ವಯ, ಇನ್ನು @gmail.com ಎಂದಿರುವ ಇಮೇಲ್ ವಿಳಾಸವನ್ನು, ಸುಲಭವಾಗಿ ಬದಲಿಸಬಹುದಾಗಿದೆ. ಈ ಬದಲಾವಣೆಯಿಂದ, ಹಳೆ ಅಡ್ರೆಸ್‌ನಲ್ಲಿ ಸೇವ್ ಆಗಿರುವ ಯಾವುದೇ ಡೇಟಾ ನಷ್ಟವಾಗುವುದಿಲ್ಲ.
ಈ ಬಗ್ಗೆ ಗೂಗಲ್ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ. ಅದರ ಪ್ರಕಾರ, gmail.comನಿಂದ ಕೊನೆಗೊಳ್ಳುವ ಮೇಲ್ ವಿಳಾಸವನ್ನು, gmail.comನಿಂದ ಅಂತ್ಯವಾಗುವ ಇನ್ನೊಂದು ವಿಳಾಸಕ್ಕೆ ಬದಲಿಸಬಹುದು. ಅವುಗಳನ್ನು ಪರ್ಯಾಯವಾಗಿ ಬಳಸಬಹುದು. ಈ ಬದಲಾವಣೆ ವೇಳೆ, ಹಳೆ ವಿಳಾಸದಲ್ಲಿದ್ದ ಫೋಟೋ, ಸಂದೇಶ, ಇ-ಮೇಲ್ ಇತ್ಯಾದಿಗಳಿಗೆ ಯಾವುದೇ ಸಮಸ್ಯೆಯಾಗದು. ಅವು ಇದ್ದಹಾಗೆಯೇ ಇರಲಿವೆ. ಒಮ್ಮೆ ಜಿಮೇಲ್ ವಿಳಾಸ ಬದಲಿಸಿದರೆ, ನಂತರ 12 ತಿಂಗಳು(1 ವರ್ಷ) ಅದನ್ನು ಬದಲಿಸಲಾಗದು.
ಗೂಗಲ್‌ನ ಅಧಿಕೃತ ಸಪೋರ್ಟ್ ಪೇಜ್‌ನ ಭಾಷೆ ಬದಲಿಸುವಿಕೆ ಆಯ್ಕೆಯಲ್ಲಿ ಮೇಲ್ ವಿಳಾಸ ಬದಲಾವಣೆಯನ್ನು ಮಾಡಲು ಅವಕಾಶವಿದೆ. ಇದು ಹಲವು ಹಂತಗಳಲ್ಲಿ ಜಾರಿಗೆ ಬರುತ್ತಿರುವುದರಿಂದ, ಎಲ್ಲರಿಗೂ ಈಗಲೇ ಲಭ್ಯವಾಗಿರಲಿಕ್ಕಿಲ್ಲ. ಈ ಸೌಲಭ್ಯ ನಿಮಗೆ ಲಭ್ಯವಿದೆಯೇ ಎಂದು ನೋಡಲು ಗೂಗಲ್ ಅಕೌಂಟ್ ಸೆಟ್ಟಿಂಗ್ಸ್‌ನ ವೈಯಕ್ತಿಕ ಮಾಹಿತಿ(ಪರ್ಸನಲ್ ಇನ್ಫಾರ್ಮೇಷನ್) ವಿಭಾಗದಲ್ಲಿ ಪರಿಶೀಲಿಸಬಹುದು. ಒಂದೊಮ್ಮೆ ಲಭ್ಯವಿದ್ದಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಅಗತ್ಯ ಡೇಟಾದ ಬ್ಯಾಕ್-ಅಪ್ ಇಟ್ಟುಕೊಳ್ಳುವುದು ಸೂಕ್ತ.