ಹೈಕೋರ್ಟ್‌ ಚಾಟಿ ಬಳಿಕ ಕೇಂದ್ರ ಸಚಿವ ಕುಮಾರಸ್ವಾಮಿ ಮನೆ ಕಾಂಪೌಂಡ್‌, ಶೆಡ್‌ಗೆ ನೆಲಸಮದ ಆತಂಕ

KannadaprabhaNewsNetwork |  
Published : Mar 20, 2025, 01:18 AM ISTUpdated : Mar 20, 2025, 04:42 AM IST
HD Kumaraswamy

ಸಾರಾಂಶ

ಹೈಕೋರ್ಟ್‌ ಚಾಟಿಯ ಬಳಿಕ ಬಿಡದಿ ಹೋಬಳಿ ಕೇತಗಾನಹಳ್ಳಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಇತರರು ಮಾಡಿಕೊಂಡಿರುವ ಸರ್ಕಾರಿ ಭೂಮಿ ಒತ್ತುವರಿ ಸರ್ವೆ ಕಾರ್ಯ ವೇಗ ಪಡೆದುಕೊಂಡಿದೆ.

 ರಾಮನಗರ :  ಹೈಕೋರ್ಟ್‌ ಚಾಟಿಯ ಬಳಿಕ ಬಿಡದಿ ಹೋಬಳಿ ಕೇತಗಾನಹಳ್ಳಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಇತರರು ಮಾಡಿಕೊಂಡಿರುವ ಸರ್ಕಾರಿ ಭೂಮಿ ಒತ್ತುವರಿ ಸರ್ವೆ ಕಾರ್ಯ ವೇಗ ಪಡೆದುಕೊಂಡಿದೆ. ಮಂಗಳವಾರ ಆರಂಭಿಸಲಾದ ಜಾಗ ಸರ್ವೆ ಕಾರ್ಯ ಬುಧವಾರವೂ ಮುಂದುವರಿಯಿತು. ಈ ವೇಳೆ ಕುಮಾರಸ್ವಾಮಿ ಒತ್ತುವರಿ ಮಾಡಿಕೊಂಡಿರುವ 5 ಎಕರೆ 25 ಗುಂಟೆ ಜಾಗವೂ ಸೇರಿ ಹಲವು ಸರ್ವೆ ನಂಬರ್‌ಗಳಲ್ಲಿ ಒತ್ತುವರಿ ಗುರುತಿಸಿ ಕಬ್ಬಿಣದ ಸರಳನ್ನು ನೆಟ್ಟು ಕೆಂಪು ಬಟ್ಟೆ ಕಟ್ಟಿ ಗುರುತು ಮಾಡಲಾಯಿತು. ಇದೇ ವೇಳೆ ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

ಕುಮಾರಸ್ವಾಮಿ ಅವರ ತೋಟದ ಮನೆಯ ಕಾಂಪೌಂಡ್‌, ಶೆಡ್‌ಗಳು ಒತ್ತುವರಿ ಜಾಗದಲ್ಲಿವೆ. ಜತೆಗೆ ಒತ್ತುವರಿ ಜಾಗದಲ್ಲಿ ಅಡಕೆ ತೆಂಗು ಬೆಳೆಯಲಾಗಿದೆ. ಇದೀಗ ಕಾಂಪೌಂಡ್‌, ಶೆಡ್‌ಗೆ ನೆಲಸಮ ಭೀತಿ ಎದುರಾಗಿದೆ.

ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಗಳು, ಇತರೆ ಒತ್ತುವರಿದಾರರಿಗೆ ನೋಟಿಸ್ ಜಾರಿಯಾಗಲಿದ್ದು, ಅವರೆಲ್ಲರೂ 7 ದಿನದೊಳಗೆ ಉತ್ತರ ನೀಡಬೇಕು. ಇಲ್ಲದಿದ್ದರೆ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳ ತಂಡ ಕೇತಗಾನಹಳ್ಳಿ ಗ್ರಾಮದ ಸರ್ವೆ ನಂಬರ್‌ 7, 8, 9, 16/2 ಹಾಗೂ 79ರಲ್ಲಿ ಆಗಿರುವ ಒಟ್ಟು 11 ಎಕರೆ 23 ಗುಂಟೆ ಒತ್ತುವರಿ ಜಾಗವನ್ನು ಗುರುತಿಸಿತು. ಕುಮಾರಸ್ವಾಮಿ ಅವರು ಒತ್ತುವರಿ ಮಾಡಿಕೊಂಡಿರುವ 5 ಎಕರೆ 25 ಗುಂಟೆ ಜಾಗದಲ್ಲಿ ಕಲ್ಲುಗಳನ್ನು ನೆಟ್ಟು, ಬಣ್ಣದಿಂದ ಗೆರೆ ಹಾಕಲಾಗಿದೆ. ಸರ್ವೆ ನಂಬರ್‌ 8 ಮತ್ತು 9ರ ಜಮೀನಿನಲ್ಲಿ ತೋಟದ ಮನೆ ಹೊಂದಿರುವ ಕುಮಾರಸ್ವಾಮಿ ಅವರು ಒತ್ತುವರಿ ಜಾಗದಲ್ಲಿ ಕಾಂಪೌಂಡ್ ಹಾಗೂ ಶೆಡ್ ನಿರ್ಮಿಸಿದ್ದಾರೆ. ಉಳಿದ ಜಾಗದಲ್ಲಿ ಅಡಕೆ ಮತ್ತು ತೆಂಗು ಬೆಳೆಯಲಾಗಿದೆ. ಸರ್ವೆ ನಂಬರ್‌ 7ರ 7/8ನೇ ಬ್ಲಾಕ್‌ನಲ್ಲಿ 7 ಗುಂಟೆ ಜಾಗ ಒತ್ತುವರಿ ಮಾಡಿರುವ ಸಯ್ಯದ್ ನೂರ್ ಅಹಮದ್ ಎಂಬುವವರು ಶೆಡ್ ನಿರ್ಮಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗ ಸರ್ವೆ ವೇಳೆ ಒಟ್ಟು 14 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿರುವುದು ಬೆಳಕಿಗೆ ಬಂದಿದೆ. ಒತ್ತುವರಿದಾರರು ತಮ್ಮ ಬಳಿ ಜಮೀನಿಗೆ ಸಂಬಂಧಿಸಿದಂತೆ ಯಾವುದಾದರೂ ದಾಖಲೆಗಳು, ತಕರಾರು ಇದ್ದಲ್ಲಿ ಆಕ್ಷೇಪಣೆ ಸಲ್ಲಿಸಬಹುದು. ಇಲ್ಲವೆ 7 ದಿನದೊಳಗೆ ಒತ್ತುವರಿ ಜಾಗದಲ್ಲಿನ ವಸ್ತುಗಳನ್ನು ತೆಗೆದುಕೊಂಡು, ಬಿಟ್ಟುಕೊಟ್ಟು ನೋಟಿಸ್‌ಗೆ ಉತ್ತರ ನೀಡಲೇ ಬೇಕಿದೆ. ದಾಖಲೆಗಳು ಸೂಕ್ತವಾಗಿ ಇಲ್ಲದಿದ್ದರೆ ಜಿಲ್ಲಾಡಳಿತ ಕಾಂಪೌಂಡ್ ಗಳನ್ನು ನೆಲಸಮಗೊಳಿಸಿ ಸರ್ಕಾರಿ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದುಕೊಳ್ಳಲಿದೆ.

ಬುಧವಾರ ಸರ್ವೆ ನಂಬರ್ 7, 8, 9ರಲ್ಲಿ 11 ಎಕರೆಗೆ ಭೂಮಿಯನ್ನು ಮಾರ್ಕಿಂಗ್ ಮಾಡಿದ್ದು, ಇನ್ನುಳಿದ ಸರ್ವೆ ನಂಬರ್ ಗಳಲ್ಲೂ ಮಾರ್ಕಿಂಗ್ ಕಾರ್ಯ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ. 

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!