ಹಿಮಾಚಲ ನೌಕರರ ವೇತನಕ್ಕೂ ದುಡ್ಡಿಲ್ಲ!

KannadaprabhaNewsNetwork |  
Published : Apr 20, 2026, 01:45 AM ISTUpdated : Apr 20, 2026, 04:45 AM IST
Himachal

ಸಾರಾಂಶ

ಸದ್ಯ ನಡೆಯುತ್ತಿರುವ ಪಂಚರಾಜ್ಯ ಚುನಾವಣೆಯಲ್ಲಿ ಬಹುತೇಕ ಪಕ್ಷಗಳು ಭರ್ಜರಿ ಉಚಿತ ಕೊಡುಗೆ ಘೋಷಿಸುತ್ತಿರುವ ನಡುವೆಯೇ, ಹಲವು ಗ್ಯಾರಂಟಿ ಘೋಷಿಸಿ ಆರ್ಥಿಕ ಸಂಕಷ್ಟದಲ್ಲಿರುವ ಹಿಮಾಚಲ ಪ್ರದೇಶದ ಕಾಂಗ್ರೆಸ್‌ ಸರ್ಕಾರ, ಇದೀಗ ಸರ್ಕಾರಿ ನೌಕರರ ವೇತನ ಪಾವತಿಗೂ ಸಂಕಷ್ಟ ಪಡುವ ಸ್ಥಿತಿಗೆ ತಲುಪಿದೆ.

  ಶಿಮ್ಲಾ :  ಸದ್ಯ ನಡೆಯುತ್ತಿರುವ ಪಂಚರಾಜ್ಯ ಚುನಾವಣೆಯಲ್ಲಿ ಬಹುತೇಕ ಪಕ್ಷಗಳು ಭರ್ಜರಿ ಉಚಿತ ಕೊಡುಗೆ ಘೋಷಿಸುತ್ತಿರುವ ನಡುವೆಯೇ, ಹಲವು ಗ್ಯಾರಂಟಿ ಘೋಷಿಸಿ ಆರ್ಥಿಕ ಸಂಕಷ್ಟದಲ್ಲಿರುವ ಹಿಮಾಚಲ ಪ್ರದೇಶದ ಕಾಂಗ್ರೆಸ್‌ ಸರ್ಕಾರ, ಇದೀಗ ಸರ್ಕಾರಿ ನೌಕರರ ವೇತನ ಪಾವತಿಗೂ ಸಂಕಷ್ಟ ಪಡುವ ಸ್ಥಿತಿಗೆ ತಲುಪಿದೆ.

ಹಣಕಾಸು ವೆಚ್ಚ ನಿರ್ವಹಿಸುವ ಸಲುವಾಗಿ ಹಿರಿಯ ಸರ್ಕಾರಿ ಅಧಿಕಾರಿಗಳ ವೇತನದ ಶೇ.30ರಷ್ಟನ್ನು 6 ತಿಂಗಳ ಕಾಲ ಮುಂದೂಡಲು ನಿರ್ಧರಿಸಿದೆ. ಇನ್ನೂ ಕೆಲವು ವರ್ಗದ ನೌಕರರ ಶೇ.20ರಷ್ಟು ವೇತನ ಮುಂದೂಡಿಕೆ ಆಗಿದೆ.

ಯಾರಿಗೆ ಶಾಕ್‌?:

ಮುಂದಿನ 6 ತಿಂಗಳ ಕಾಲ ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನದಲ್ಲಿ ಶೇ.50ರಿಂದ ಶೇ.20ರವರೆಗೆ ಕಡಿತ ಘೋಷಣೆ ಬೆನ್ನಲ್ಲೇ, ಇದೀಗ ಹಿರಿಯ ಸರ್ಕಾರಿ ನೌಕರರ ವೇತನ ಪಾವತಿ ಮುಂದೂಡಿಕೆ ನಿರ್ಧಾರ ಹೊರಬಿದ್ದಿದೆ. ರಾಜ್ಯ ಸರ್ಕಾರ ಭಾರೀ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ, ಕೇಂದ್ರ ಸರ್ಕಾರದ ಕೆಲ ಅನುದಾನಗಳಿಗೆ ಕತ್ತರಿ ಬಿದ್ದಿದೆ. ಹೀಗಾಗಿ ಪರಿಸ್ಥಿತಿ ನಿರ್ವಹಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್‌ ಸುಖು ಪ್ರಕಟಿಸಿದ್ದಾರೆ.

ಯಾರಿಗೆ ಎಷ್ಟು ವೇತನ ವಿಳಂಬ?:

ಹಣಕಾಸು ಇಲಾಖೆ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಈ ವೇತನ ಮುಂದೂಡಿಕೆ ಮೇ 2026ರಿಂದ ಜಾರಿಗೆ ಬರುತ್ತದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕ, ಹೆಚ್ಚುವರಿ ಮಹಾನಿರ್ದೇಶಕ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ವೇತನದ ಶೇ.30 ಭಾಗ ವಿಳಂಬವಾಗಿ ಪಾವತಿ ಮಾಡಲಾಗುವುದು.

ಕಾರ್ಯದರ್ಶಿಗಳು, ಇಲಾಖೆ ಮುಖ್ಯಸ್ಥರು, ಪೊಲೀಸ್ ಇನ್‌ಸ್ಪೆಕ್ಟರ್ ಜನರಲ್, ಡೆಪ್ಯೂಟಿ ಇನ್‌ಸ್ಪೆಕ್ಟರ್ ಜನರಲ್, ಸೂಪರಿಂಟೆಂಡೆಂಟ್ ಆಫ್ ಪೊಲೀಸ್, ಜಿಲ್ಲಾ ಮಟ್ಟದವರೆಗಿನ ಪೊಲೀಸ್ ಅಧಿಕಾರಿಗಳು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಜಿಲ್ಲಾ ಮಟ್ಟದ ಅರಣ್ಯ ಅಧಿಕಾರಿಗಳ ಸಂಬಳದ ಶೇ.20 ಭಾಗ ಮುಂದೂಡಿಕೆಯಾಗಲಿದೆ.

ಗ್ಯಾರಂಟಿ ತಂದ ಸಂಕಷ್ಟ: ಹಿಮಾಚಲ ಪ್ರದೇಶದ 2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 10 ಗ್ಯಾರಂಟಿ ಘೋಷಿಸಿತ್ತು. ಮುಖ್ಯಮಂತ್ರಿ ಸುಖ್‌ವಿಂದರ್ ಸಿಂಗ್ ಸುಖು ಸರ್ಕಾರ ಇವುಗಳಲ್ಲಿ ಕೆಲವನ್ನು ಜಾರಿಗೊಳಿಸಿದೆ. ಪ್ರಮುಖವಾಗಿ ಮಹಿಳೆಯರಿಗೆ 1,500 ರು. ಮಾಸಿಕ ನೆರವು, ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಜಾರಿಗೊಳಿಸಿದೆ. ಇದರಿಂದ 2017ರಲ್ಲಿ ಅಧಿಕಾರಕ್ಕೆ ಬರುವ ವೇಳೆ ಇದ್ದ ಅಂದಾಜು 50000 ಕೋಟಿ ರು. ಸಾಲದ ಹೊರೆ ಇದೀಗ 1 ಲಕ್ಷ ಕೋಟಿ ರು. ಮೀರಿದೆ.  

ಈ ಸಂಕಷ್ಟದ ಹಿನ್ನೆಲೆಯಲ್ಲಿ ಹಿಂದಿನ ವರ್ಷ 58,514 ಕೋಟಿ ರು. ಇದ್ದ ಬಜೆಟ್‌ ಅನ್ನು 2026-27ರಲ್ಲಿ 54,928 ಕೋಟಿ ರು.ಗೆ ಇಳಿಸಲಾಗಿದೆ. ಅದರ ಮುಂದುವರೆದ ಭಾಗವಾಗಿ ಇದೀಗ ವೇತನ ಕಡಿತ, ಪಾವತಿ ಮುಂದೂಡಿಕೆ ನಿರ್ಧಾರ ಪ್ರಕಟಿಸಲಾಗಿದೆ. ಈ ಕ್ರಮವು ತಾತ್ಕಾಲಿಕವಾಗಿದ್ದು, ರಾಜ್ಯದ ಹಣಕಾಸು ಸ್ಥಿತಿ ಸುಧಾರಿದ ನಂತರ ಮುಂದೂಡಲಾದ ವೇತನವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ರಾಜ್ಯದ ಗಂಭೀರ ಆರ್ಥಿಕ ದುಸ್ಥಿತಿ

- ಹಿಮಾಚಲ ಸರ್ಕಾರದ ಮಾಸಿಕ ಆದಾಯ 100 ರು. ಎಂದಿಟ್ಟುಕೊಳ್ಳೋಣ

- ಅದರಲ್ಲಿ ₹27 ವೇತನ, ₹21 ಪಿಂಚಣಿ, ₹13 ಸಾಲದ ಬಡ್ಡಿಗೆ ಪಾವತಿ

- ₹9 ಸಾಲ ಮರುಪಾವತಿಗೆ ಮತ್ತು ₹10 ಸ್ವಾಯತ್ತ ಸಂಸ್ಥೆಗಳಿಗೆ ಹಂಚಿಕೆ

- ಕೊನೆಗೆ ಅಭಿವೃದ್ಧಿ ಕೆಲಸಗಳಿಗೆ ಉಳಿಯುವುದು ಕೇವಲ ₹20 ಮಾತ್ರ

- 10 ಗ್ಯಾರಂಟಿ ಘೋಷಿಸಿದ್ದರಿಂದಲೇ ಈ ಮುಗ್ಗಟ್ಟು ಎಂಬ ಸಂದೇಹ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ವಿಪಕ್ಷಗಳ ವಾಟ್ಸಾಪ್‌ಗೆ ಕೇಂದ್ರದ ಮಸೂದೆ ಆಫ್!
ಲೋಕಸಭೆಯಲ್ಲಿ ಮಸೂದೆ ಸೋಲಿಸಿ ಕಾಂಗ್ರೆಸ್ಸಿಂದ ಭ್ರೂಣಹತ್ಯೆಯಂಥ ಪಾಪ ಕೃತ್ಯ : ಮೋದಿ