ಛತ್ರಪತಿ ಸಂಭಾಜಿ ನಗರ: ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಲು ‘ಕ್ಯಾ ಬೋಲ್ತಿ ಪಬ್ಲಿಕ್’ (ಜನ ಏನ್ ಹೇಳ್ತಾರೆ) ಎಂಬ ರಾಷ್ಟ್ರವ್ಯಾಪಿ ಸಾರ್ವಜನಿಕ ಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳುತ್ತೇವೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸ್ಥಾಪಕ ಅಭಿಜೀತ್ ದೀಪ್ಕೆ ಗುರುವಾರ ಘೋಷಿಸಿದ್ದಾರೆ.

ಸಮಸ್ಯೆಗಳು ಯಾವುವು ಎಂಬುದು ನಮಗೆ ತಿಳಿಯಲಿದೆ

ಇಲ್ಲಿ ನಡೆದ ಸಿಜೆಪಿ ಕೋರ್ ಕಮಿಟಿ ಸಭೆ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಅಭಿಯಾನದ ಮೂಲಕ, ದೇಶದ ಪ್ರಸ್ತುತ ಪರಿಸ್ಥಿತಿ ಮತ್ತು ಜನರು ಎದುರಿಸುತ್ತಿರುವ ಸಮಸ್ಯೆಗಳು ಯಾವುವು ಎಂಬುದು ನಮಗೆ ತಿಳಿಯಲಿದೆ.

ಅಭಿಯಾನದ ಮೊದಲ ಆದ್ಯತೆಯಾಗಿ ಶೈಕ್ಷಣಿಕ ಸುಧಾರಣೆ

ಅಭಿಯಾನದ ಮೊದಲ ಆದ್ಯತೆಯಾಗಿ ಶೈಕ್ಷಣಿಕ ಸುಧಾರಣೆಯನ್ನು ಕೈಗೆತ್ತಿಕೊಳ್ಳುತ್ತೇವೆ. ಶುಲ್ಕಗಳ ಏರಿಕೆಯಿಂದಾಗಿ ಅನೇಕ ಕುಟುಂಬಗಳಿಗೆ ಗುಣಮಟ್ಟದ ಶಿಕ್ಷಣವು ಕೈಗೆಟುಕದಂತಾಗಿದೆ. 1ನೇ ತರಗತಿ ವಾರ್ಷಿಕ ಶುಲ್ಕವು 1-2 ಲಕ್ಷ ರು.ವರೆಗೂ ಇದೆ. ಡಾ. ಅಂಬೇಡ್ಕರ್ ಹೇಳಿದಂತೆ ಶಿಕ್ಷಣ ಪ್ರತಿಯೊಬ್ಬರಿಗೂ ಕೈಗೆಟುಕುವಂತಿರಬೇಕು. ಅಭಿವೃದ್ಧಿಶೀಲ ಭಾರತಕ್ಕಾಗಿ ಅಂಬೇಡ್ಕರ್, ಮಹಾತ್ಮ ಗಾಂಧಿ ಮತ್ತು ಪಂಡಿತ್ ನೆಹರೂ ಅವರ ದೃಷ್ಟಿಕೋನದಂತೆ ಸಿಜೆಪಿ ಕಾರ್ಯನಿರ್ವಹಿಸಲಿದೆ.’ ಎಂದು ತಿಳಿಸಿದರು.