ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನವನ್ನು ಉಗ್ರ ಪೈಲಟ್ ಅಪಹರಿಸಲು ಯತ್ನಿಸಿದ ಘಟನೆ ಮಾಸುವ ಮುನ್ನವೇ, ಲಂಡನ್‌ನಿಂದ ಅಮೆರಿಕಕ್ಕೆ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಲಂಡನ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಸೋಮವಾರ ನಡೆದಿದೆ
-ಪುನಃ ಹೀಥ್ರೂ ಏರ್ಪೋರ್ಟ್‌ಗೆ ತಿರುಗಿಸಿ ಲ್ಯಾಂಡಿಂಗ್
-ಫ್ಲೈದುಬೈ ಅಪಹರಣ ಯತ್ನದ ಬೆನ್ನಲ್ಲೇ ಆತಂಕ ಸೃಷ್ಟಿಲಂಡನ್: ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನವನ್ನು ಉಗ್ರ ಪೈಲಟ್ ಅಪಹರಿಸಲು ಯತ್ನಿಸಿದ ಘಟನೆ ಮಾಸುವ ಮುನ್ನವೇ, ಲಂಡನ್‌ನಿಂದ ಅಮೆರಿಕಕ್ಕೆ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಲಂಡನ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಸೋಮವಾರ ನಡೆದಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಆದರೆ ಅಮೆರಿಕನ್ನರು ಮತ್ತು ಯಹೂದಿಗಳನ್ನು ಗುರಿಯಾಗಿಸಿ ಮತ್ತಷ್ಟು ವೈಮಾನಿಕ ದಾಳಿ ನಡೆಸಲಾಗುವುದು ಎಂದು ಅಲ್ ಖೈದಾ ಉಗ್ರ ಸಂಘಟನೆ ಬೆದರಿಸಿದ ಹಿನ್ನೆಲೆಯಲ್ಲಿ, ಈ ಘಟನೆ ಆತಂಕಕ್ಕೆ ಕಾರಣವಾಗಿದೆ.
ಆಗಿದ್ದೇನು?:ಬೋಯಿಂಗ್ 777 ವಿಮಾನವು ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಚಿಕಾಗೋಕ್ಕೆ ಪ್ರಯಾಣಿಸುತ್ತಿತ್ತು. ಐರ್ಲೆಂಡ್ ಮೇಲೆ ಸಂಚರಿಸುತ್ತಿದ್ದಾಗ, 37,000 ಅಡಿಗಳಷ್ಟು ಎತ್ತರದಲ್ಲಿದ್ದ ವಿಮಾನ ದಿಢೀರನೆ 9,000 ಅಡಿಗಳವರೆಗೆ ಕುಸಿದಿದೆ. ಈ ಬೆಳವಣಿಗೆ 9.5 ನಿಮಿಷದ ಅವಧಿಯಲ್ಲಿ ನಡೆದಿದೆ. ತಕ್ಷಣ ಸ್ಕ್ವಾಕ್ 7700 ಕೋಡ್ ಮೂಲಕ ವಿಮಾನದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
‘ವಿಮಾನದ ಒಳಭಾಗದ ಒತ್ತಡ ನಿರ್ವಹಣೆಯಲ್ಲಿ ಸಮಸ್ಯೆ ಉಂಟಾಗಿದೆ. ಹೀಗಾಗಿ ವಿಮಾನವನ್ನು ಪುನಃ ಹೀಥ್ರೂ ಏರ್ಪೋರ್ಟ್‌ಗೆ ತಿರುಗಿಸುತ್ತಿದ್ದೇವೆ. ವಿಮಾನದ ಒಳಭಾಗದ ಎತ್ತರದ ಮಟ್ಟವು (ಕ್ಯಾಬಿನ್ ಆಲ್ಟಿಟ್ಯೂಡ್) 10,500 ಅಡಿಗಳನ್ನು ತಲುಪಿದೆ. ಇಂಧನವನ್ನು ಹೊರಹಾಕಲು ಸಾಧ್ಯವಾಗುತ್ತಿಲ್ಲ. ವಿಮಾನದ ಪ್ರಸ್ತುತ ತೂಕವು ಅದರ ‘ಗರಿಷ್ಠ ಇಳಿಯುವಿಕೆಯ ತೂಕ’ಕ್ಕಿಂತ 30 ಮೆಟ್ರಿಕ್ ಟನ್‌ನಷ್ಟು ಹೆಚ್ಚಾಗಿದೆ’ ಎಂದು ಪೈಲಟ್ ಸಂದೇಶ ರವಾನಿಸಿದ್ದಾರೆ.ಈ ವೇಳೆ ಹೀಥ್ರೂ ಸಿಬ್ಬಂದಿ ವಿಮಾನ ಭೂಸ್ಪರ್ಶಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ನಂತರ ಪೈಲಟ್ ಕಷ್ಟಪಟ್ಟು ವಿಮಾನವನ್ನು ಹೀಥ್ರೂ ಏರ್ಪೋರ್ಟ್‌ನತ್ತ ತಿರುಗಿಸಿ, ಯಶಸ್ವಿಯಾಗಿ ಲ್ಯಾಂಡ್ ಮಾಡಿದ್ದಾರೆ. ಪ್ರಯಾಣಿಕರನ್ನು ಪರ್ಯಾಯ ವಿಮಾನದ ಮೂಲಕ ಚಿಕಾಗೋಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ. ಈ ತುರ್ತು ಪರಿಸ್ಥಿತಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.