ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನವು ಪೈಲಟ್‌ನ ನಿಯಂತ್ರಣ ಕಳೆದುಕೊಂಡು ಏಕಾಏಕಿ 17000 ಅಡಿ ಕುಸಿದು, ಇನ್ನೇನು ಭೂಮಿಗೆ ಅಪ್ಪಳಿಸುವತ್ತ ಸಾಗುತ್ತಿದೆ ಎಂಬ ಹೊತ್ತಿನಲ್ಲೇ ಅದನ್ನು ಮತ್ತೆ ಸಹಜಸ್ಥಿತಿಗೆ ತಂದಿದ್ದು ಒಬ್ಬ ಸಾಮಾನ್ಯ ಟ್ರಕ್‌ ಚಾಲಕ!

ಟೆಲ್‌ ಅವೀವ್‌: ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನವು ಪೈಲಟ್‌ನ ನಿಯಂತ್ರಣ ಕಳೆದುಕೊಂಡು ಏಕಾಏಕಿ 17000 ಅಡಿ ಕುಸಿದು, ಇನ್ನೇನು ಭೂಮಿಗೆ ಅಪ್ಪಳಿಸುವತ್ತ ಸಾಗುತ್ತಿದೆ ಎಂಬ ಹೊತ್ತಿನಲ್ಲೇ ಅದನ್ನು ಮತ್ತೆ ಸಹಜಸ್ಥಿತಿಗೆ ತಂದಿದ್ದು ಒಬ್ಬ ಸಾಮಾನ್ಯ ಟ್ರಕ್‌ ಚಾಲಕ! ಅದರಲ್ಲೂ ಯೂಟ್ಯೂಬ್‌ ನೋಡಿ ಈ ಹಿಂದೆ ತಾನು ಪಡೆದಿದ್ದ ಜ್ಞಾನವನ್ನೇ ಬಳಸಿಕೊಂಡು ಟ್ರಕ್‌ ಚಾಲಕ ವಿಮಾನವನ್ನು ನಿಯಂತ್ರಣಕ್ಕೆ ಪಡೆದಿದ್ದ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಈ ಕುರಿತು ಸ್ವತಃ ಟ್ರಕ್‌ ಡೈವರ್‌ ಯನಿವ್‌ ಹಯೌನ್‌, ಇಸ್ರೇಲಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ನಾನು ‘ಏರ್‌ ಕ್ರ್ಯಾಶ್‌ ಇನ್ವೆಸ್ಟಿಗೇಷನ್‌’ ಎಂಬ ಡಾಕ್ಯುಮೆಂಟರಿಯಲ್ಲಿ ವಿಮಾನ ನಿಯಂತ್ರಿಸುವುದು ಹೇಗೆ ಎಂಬುದನ್ನು ನೋಡಿದ್ದೆ. ಅದರಲ್ಲಿ ತೋರಿಸಿದ್ದಂತೆ ಮಾಡಿ, ಇದ್ದಕ್ಕಿದ್ದಂತೆ ಎತ್ತರ ಕಳೆದುಕೊಂಡು ಭೂಮಿಯತ್ತ ನುಗ್ಗುತ್ತಿದ್ದ ವಿಮಾನವನ್ನು ನಿಯಂತ್ರಿಸಿದೆ’ ಎಂದು ಸಂಭವನೀಯ ಅನಾಹುತದಿಂದ ಪಾರಾದ ಫ್ಲೈದುಬೈ ಎಫ್‌ಜೆಡ್ 1073 ವಿಮಾನದಲ್ಲಿದ್ದ ಟ್ರಕ್‌ ಡ್ರೈವರ್‌ ಯನಿವ್ ಹಯೌನ್ ಹೇಳಿದ್ದಾರೆ.

ಅಲ್ಲದೆ ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹಯೌನ್‌, ‘ಎದುರು ಆಸನದಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಕಿರುಚಿದ್ದನ್ನು ಕೇಳಿ ಕಾಕ್‌ಪಿಟ್‌ನತ್ತ ಓಡಿದೆ. ಬಾಗಿಲು ತೆರೆದು ಒಳನುಗ್ಗಿದಾಗ ಪೈಲಟ್‌ ಗಾಯಗೊಂಡು ಬಿದ್ದಿದ್ದರು. ಅತ್ತ ದಾಳಿ ಮಾಡಿದ ಸಹಪೈಲಟ್‌, ವಿಮಾನದ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಳ್ಳಲು ಮುಂದಾಗಿದ್ದ. ಹಾಗಾದರೆ ಅನಾಹುತವಾದೀತೆಂಬುದನ್ನು ಕಂಡುಕೊಂಡು, ಆತನ ಕತ್ತು ಹಿಡಿದು ಇತರೆ ಪ್ರಯಾಣಿಕರ ಸಹಾಯದಿಂದ ಹೊರದಬ್ಬಿದೆ. ಬಳಿಕ, ಈ ಹಿಂದೆ ಹೆಂಡತಿಗೆ ತಿಳಿಯದಂತೆ ನೋಡಿದ್ದ ಸಾಕ್ಷ್ಯಚಿತ್ರವೊಂದರಲ್ಲಿ ತೋರಿಸಿದ್ದ ವಿಧಾನ ಪಾಲಿಸಿ ವಿಮಾನದ ಕಂಟ್ರೋಲ್‌ ನನ್ನ ಕೈಗೆ ತೆಗೆದುಕೊಂಡೆ. ಈ ಮೂಲಕ ಕೆಳಮುಳವಾಗಿ ಚಲಿಸುತ್ತಿದ್ದ ವಿಮಾನ ನೇರವಾಗಿ ಹಾರತೊಡಗಿತು’ ಎಂದು ಹೇಳಿದರು.

ಅದಾದ ನಂತರ ‘ಫ್ಲೈದುಬೈ ವಿಮಾನದ ಪೈಲಟ್‌ ಆಗಿದ್ದ ಇನ್ನೊಬ್ಬರು ಬಂದು ವಿಮಾನ ಚಾಲನೆ ಜವಾಬ್ದಾರಿಯನ್ನು ಕೈಗೆತ್ತಿಕೊಂಡರು. ನಾವಿತ್ತ ಗಾಯಗೊಂಡ ಪೈಲಟ್‌ನ ಆರೈಕೆಯಲ್ಲಿ ತೊಡಗಿದೆವು’ ಎಂದು ತಿಳಿಸಿದರು.

ಸಾಹಸಿ ಹಯೌನ್‌ ಬೆನ್‌ ಗುರಿಯನ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ನೆತನ್ಯಾಹು ಎದುರುಗೊಂಡು ಅಪ್ಪಿ ಮೆಚ್ಚುಗೆ ವ್ಯಕ್ತಪಡಿಸಿದರು. 180 ಪ್ರಯಾಣಿಕರ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

ದಾಳಿಕೋರ ಪೈಲಟ್‌ ಪಕ್ಕಾ ತೀವ್ರವಾದಿ

ಟೆಲ್‌ ಅವೀವ್‌: ಫ್ಲೈದುಬೈ ವಿಮಾನವನ್ನು ಅಪಹರಿಸಿ, ಅದರ ಪತನಕ್ಕೆ ಮುಂದಾಗಿದ್ದ ಒಮಾನಿ ಪೈಲಟ್‌ ಧಾರ್ಮಿಕ ಮೂಲಭೂತವಾದಿಯಾಗಿದ್ದ. ಮಹಿಳೆಯರಿಗೆ ಹಸ್ತಲಾಘವ ಮಾಡಲೂ ಆತ ನಿರಾಕರಿಸುತ್ತಿದ್ದ ಎಂಬ ಮಾಹಿತಿಯನ್ನು ಆತನ ಸಹೋದ್ಯೋಗಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಭಾರತೀಯ ಪೈಲಟ್‌ಗೆ ಬಿದ್ದಿದ್ದು ಕೊಡಲಿ ಏಟು!

ಟೆಲ್‌ ಅವೀವ್‌: ಭಾರತದ ಪೈಲಟ್‌ ಸ್ಮಿತ್‌ ಮಚ್ಛರ್‌ ಅವರ ಮೇಲೆ ಹಲ್ಲೆ ನಡೆಸಲು ಒಮಾನಿ ಪೈಲಟ್‌ ಹೊರಗಿನಿಂದ ಯಾವುದೇ ಚಾಕು ಅಥವಾ ಆಯುಧವನ್ನು ತಂದಿರಲಿಲ್ಲ. ಬದಲಾಗಿ ವಿಮಾನದ ಕಾಕ್‌‌ಪಿಟ್‌ನಲ್ಲೇ ಇರಿಸಲಾಗುವ ‘ಕ್ರ್ಯಾಶ್ ಆಕ್ಸ್’ (ಕೊಡಲಿ) ಬಳಸಿ ಈ ದಾಳಿ ನಡೆಸಿದ್ದ ಶಂಕೆ ಇದೆ.

ದಾಳಿ ತಪ್ಪಿಸಿದ ಸ್ಮಿತ್‌ ಮಚ್ಛರ್‌ ವಿಶ್ವಕ್ಕೇ ಹೆಮ್ಮೆ

ಕ್ಯಾಪ್ಟನ್ ಸ್ಮಿತ್‌ ಮಚ್ಛರ್ ಅಪಾರ ತಾಳ್ಮೆ, ವಿವೇಚನೆ ಮತ್ತು ಧೈರ್ಯವನ್ನು ಪ್ರದರ್ಶಿಸಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹೇಳಿದಂತೆ, ಈ ಭಾರತೀಯ, 9/11 ಮಾದರಿಯ ದಾಳಿಯೊಂದನ್ನು ವಿಫಲಗೊಳಿಸಿದ್ದಾರೆ. ಅವರ ಬಗ್ಗೆ ಇಡೀ ಜಗತ್ತು ಹೆಮ್ಮೆಪಡುತ್ತಿದೆ.

- ನರೇಂದ್ರ ಮೋದಿ, ಪ್ರಧಾನಿ