ಕೋವಿಡ್‌ ಮಹಾಮಾರಿಯ ದುಷ್ಪರಿಣಾಮಗಳಿಂದ ಜಗತ್ತು ಇನ್ನೂ ಪೂರ್ಣವಾಗಿ ಚೇತರಿಸಿಕೊಳ್ಳುವ ಮುನ್ನವೇ, ರಷ್ಯಾದಲ್ಲಿ ಮಾರಣಾಂತಿಕವಾದ ಪ್ಲೇಗ್‌ ಹರಡುತ್ತಿರುವ ಶಂಕೆ ವ್ಯಕ್ತವಾಗಿದೆ.

- ಮುನ್ನೆಚ್ಚರಿಕೆಗಾಗಿ 5 ಆಸ್ಪತ್ರೆ ಬಂದ್‌ । 200 ಜನರು ಕ್ವಾರಂಟೈನ್‌

- ಲ್ಯಾಬ್‌ನಿಂದ ಬ್ಯಾಕ್ಟೀರಿಯಾ ಸೋರಿಕೆ । ಪ್ಲೇಗ್‌ ಹರಡುವ ಆತಂಕ

ಮಾಸ್ಕೋ: ಕೋವಿಡ್‌ ಮಹಾಮಾರಿಯ ದುಷ್ಪರಿಣಾಮಗಳಿಂದ ಜಗತ್ತು ಇನ್ನೂ ಪೂರ್ಣವಾಗಿ ಚೇತರಿಸಿಕೊಳ್ಳುವ ಮುನ್ನವೇ, ರಷ್ಯಾದಲ್ಲಿ ಮಾರಣಾಂತಿಕವಾದ ಪ್ಲೇಗ್‌ ಹರಡುತ್ತಿರುವ ಶಂಕೆ ವ್ಯಕ್ತವಾಗಿದೆ. ಪ್ರಯೋಗಾಲಯದ ಸಂಶೋಧಕಿಯೊಬ್ಬರು ಶಂಕಿತ ವೈರಸ್‌ನಿಂದ ಸಾವನ್ನಪ್ಪಿದ್ದು, ಆಕೆಯ ಸಂಪರ್ಕಕ್ಕೆ ಬಂದ ಸುಮಾರು 200 ಜನರನ್ನು ಕ್ವಾರೆಂಟೈನ್‌ನಲ್ಲಿ ಇರಿಸಲಾಗಿದೆ. 5 ಆಸ್ಪತ್ರೆಗಳ ಬಾಗಿಲು ಮುಚ್ಚಲಾಗಿದೆ.

ಹರಡಿದ್ದು ಹೇಗೆ?:

ಸೈಬೀರಿಯಾದ ಸಂಶೋಧಕಿ ದರ್ಯಾ ಶಿಪಿಲೋವಾ (28) ಪ್ರಯೋಗಾಲಯವೊಂದರಲ್ಲಿ ಸಂಶೋಧಕಿಯಾಗಿ ಕೆಲಸ ಮಾಡುತ್ತಿದ್ದರು. ಆಗ ಅಚಾನಕ್ಕಾಗಿ ಜೀವಂತ ಬ್ಯಾಕ್ಟೀರಿಯಾಗಳಿದ್ದ ಟೆಸ್ಟ್‌ ಟ್ಯೂಬ್‌ ಅನ್ನು ಮುರಿದಿದ್ದಾರೆ. ಅದರಿಂದ ಬ್ಯಾಕ್ಟೀರಿಯಾ ಹರಡಿರುವ ಸಾಧ್ಯತೆಯಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ನಂತರ ಆಕೆಗೆ ತೀವ್ರ ನ್ಯುಮೋನಿಯಾ ಲಕ್ಷಣಗಳು ಕಂಡುಬಂದಿದ್ದರಿಂದ, ಸೆ.29ರಂದು ಶೆಲೆಖೋವ್‌ನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಅ.1ರಂದು ಸಾವನ್ನಪ್ಪಿದ್ದಾರೆ. ಅವರು ನ್ಯುಮೋನಿಕ್ ಪ್ಲೇಗ್‌ನಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಆಕೆಯ ಸಾವಿನ ನಂತರ ರಷ್ಯಾದ ಆರೋಗ್ಯ ಅಧಿಕಾರಿಗಳು ತೀವ್ರ ಎಚ್ಚರಿಕೆ ವಹಿಸಿದ್ದಾರೆ. ಮೃತಳ ಸಂಪರ್ಕಕ್ಕೆ ಬಂದ ಸುಮಾರು 200 ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, 5 ಆಸ್ಪತ್ರೆಗಳನ್ನು ಬಂದ್ ಮಾಡಲಾಗಿದೆ.

ಪ್ಲೇಗ್‌ ಸಾಧ್ಯತೆ ಕಡಿಮೆ:

‘ಇರ್ಕುಟ್ಸ್ಕ್ ಪ್ರದೇಶದಲ್ಲಿ ಕಂಡುಬಂದಿರುವ ಸೋಂಕು ಹೆಚ್ಚಾಗಿ ಪ್ಲೇಗ್ ಅಲ್ಲ, ಒಂದು ವೇಳೆ ಅದು ಪ್ಲೇಗ್ ಎಂದು ದೃಢಪಟ್ಟರೂ ಸಹ, ಈ ರೋಗವು ಹರಡುವುದಿಲ್ಲ. ಅಲ್ಲದೆ, ಚಳಿಗಾಲ ಬಂತೆಂದರೆ ಶೀತ ವಾತಾವರಣಕ್ಕೆ ಇದರ ಹರಡುವಿಕೆ ನಿಲ್ಲುತ್ತದೆ’ ಎಂದು ರಷ್ಯಾದ ಸಾರ್ವಜನಿಕ ಆರೋಗ್ಯ ಮತ್ತು ಗ್ರಾಹಕ ಸಂರಕ್ಷಣಾ ಸಂಸ್ಥೆ ರೋಸ್ಪೊಟ್ರೆಬ್‌ನಾಡ್ಜೋರ್‌ನ ಮಾಜಿ ಮುಖ್ಯಸ್ಥ ಗೆನ್ನಡಿ ಒನಿಶೆಂಕೊ ತಿಳಿಸಿದ್ದಾರೆ.

ಏನಿದು ನ್ಯುಮೋನಿಕ್‌ ಪ್ಲೇಗ್‌?:

ಪ್ಲೇಗ್ ಎಂಬುದು ‘ಯೆರ್ಸಿನಿಯಾ ಪೆಸ್ಟಿಸ್’ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದ್ದು, ಇದು ಸಾಮಾನ್ಯವಾಗಿ ಸಣ್ಣ ಸಸ್ತನಿಗಳು ಮತ್ತು ಅವುಗಳ ಮೇಲಿರುವ ಕೀಟಗಳಲ್ಲಿ ಕಂಡುಬರುತ್ತದೆ. ಸೋಂಕಿತ ಕೀಟಗಳ ಕಡಿತದ ಮೂಲಕ ಮನುಷ್ಯರಿಗೆ ಹರಡುತ್ತದೆ. ನ್ಯುಮೋನಿಕ್ ಪ್ಲೇಗ್, ಪ್ಲೇಗ್‌ನ ಅತ್ಯಂತ ಅಪಾಯಕಾರಿ ಮತ್ತು ಮಾರಣಾಂತಿಕ ರೂಪವಾಗಿದೆ. ಇದು ವೇಗವಾಗಿ ಉಲ್ಬಣಗೊಳ್ಳುವ ಸ್ವಭಾವ ಮತ್ತು ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿರುವುದರಿಂದ, ಇದನ್ನು ವೈದ್ಯಕೀಯ ತುರ್ತುಸ್ಥಿತಿ ಎಂದು ಪರಿಗಣಿಸಲಾಗುತ್ತದೆ. 24 ಗಂಟೆಯಲ್ಲಿ ಚಿಕಿತ್ಸೆ ಪಡೆಯದಿದ್ದರೆ ಸಾವು ಸಂಭವಿಸಬಹುದು.