ನವದೆಹಲಿ: ಯುಪಿಐ ಮತ್ತು ಇತರೆ ಡಿಜಿಟಲ್ ಪಾವತಿ ವಿಧಾನಗಳ ಮೇಲೆ ಶುಲ್ಕ ವಿಧಿಸಲು ಬ್ಯಾಂಕ್‌ಗಳು ಹಾಗೂ ಸೇವಾ ಪೂರೈಕೆದಾರರಿಗೆ ಅಧಿಕಾರ ನೀಡುವ ಮಸೂದೆಯನ್ನು ಲೋಕಸಭೆಯು ಗುರುವಾರ ಅಂಗೀಕರಿಸಿದೆ.

ಧ್ವನಿಮತದ ಮೂಲಕ ಯಾವುದೇ ಚರ್ಚೆಯಿಲ್ಲದೆ ಪಾಸ್

2007ರ ಪಾವತಿ ಮತ್ತು ಸೆಟಲ್‌ಮೆಂಟ್‌ ವ್ಯವಸ್ಥೆಗಳ ಕಾಯಿದೆಯನ್ನು ತಿದ್ದುಪಡಿ ಮಾಡುವ ಈ ಮಸೂದೆಯನ್ನು, ಸಂಸತ್ತಿನಲ್ಲಿ ವಿಪಕ್ಷಗಳ ಗದ್ದಲದ ನಡುವೆಯೇ ಧ್ವನಿಮತದ ಮೂಲಕ ಯಾವುದೇ ಚರ್ಚೆಯಿಲ್ಲದೆ ಪಾಸ್ ಮಾಡಲಾಯಿತು.

ಹೊಸ ಮಸೂದೆ ಏನು ಹೇಳುತ್ತೆ?:

ಪ್ರಸ್ತುತ ಯುಪಿಐ ವಹಿವಾಟುಗಳು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿವೆ. ಆದರೆ ಹೊಸ ಮಸೂದೆಯು, ಬ್ಯಾಂಕ್‌ಗಳು ಮತ್ತು ಪಾವತಿ ಸೇವಾ ಪೂರೈಕೆದಾರರು ನಿರ್ದಿಷ್ಟ ಪಾವತಿ ವಿಧಾನಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ ಅಥವಾ ಶುಲ್ಕ ವಿಧಿಸುವುದನ್ನು ತಡೆಯುತ್ತಿದ್ದ ಹಳೆಯ ಕಾನೂನು ನಿಬಂಧನೆಯನ್ನು ತೆಗೆದುಹಾಕುತ್ತದೆ. ಯಾವ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳಿಗೆ ಶುಲ್ಕ ವಿಧಿಸಬೇಕು ಅಥವಾ ಯಾವುದನ್ನು ಉಚಿತವಾಗಿ ಮುಂದುವರಿಸಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ.