ಬೆಂಗಳೂರು ಆಸ್ಪತ್ರೆಗಳಲ್ಲಿಅಂಡಾಣು ಮಾರಾಟ ದಂಧೆ

KannadaprabhaNewsNetwork |  
Published : Feb 25, 2026, 02:00 AM ISTUpdated : Feb 25, 2026, 05:40 AM IST
sperm

ಸಾರಾಂಶ

ಮಹಿಳೆಯರಿಗೆ ಹಣದ ಆಮಿಷವೊಡ್ಡಿ, ವಿವಿಧೆಡೆಗಳಿಂದ ಬೆಂಗಳೂರಿಗೆ ಕರೆತಂದು ಕಾನೂನುಬಾಹಿರವಾಗಿ ಅಂಡಾಣುವನ್ನು ಹೊರತೆಗೆಯುತ್ತಿದ್ದ ಬೃಹತ್‌ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.   ಅಮಾಯಕ ಮಹಿಳೆಯರ ಜೀವವನ್ನು ಅಪಾಯಕ್ಕೆ ಒಡ್ಡುತ್ತಿದ್ದ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

 ಥಾಣೆ (ಮಹಾರಾಷ್ಟ್ರ) :  ಮಹಿಳೆಯರಿಗೆ ಹಣದ ಆಮಿಷವೊಡ್ಡಿ, ವಿವಿಧೆಡೆಗಳಿಂದ ಬೆಂಗಳೂರಿಗೆ ಕರೆತಂದು ಕಾನೂನುಬಾಹಿರವಾಗಿ ಅಂಡಾಣುವನ್ನು ಹೊರತೆಗೆಯುತ್ತಿದ್ದ ಬೃಹತ್‌ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಬೆಂಗಳೂರು, ತೆಲಂಗಾಣ ಮತ್ತು ಮಹಾರಾಷ್ಟ್ರದ ನಾಗ್ಪುರ, ಪುಣೆ, ನಾಸಿಕ್‌ಗಳಲ್ಲಿ ವಿಸ್ತರಿಸಿದ್ದ ಈ ಜಾಲ ಅಮಾಯಕ ಮಹಿಳೆಯರ ಜೀವವನ್ನು ಅಪಾಯಕ್ಕೆ ಒಡ್ಡುತ್ತಿದ್ದ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಈಗಾಗಲೇ ನಾಲ್ವರು ಖದೀಮ ಸ್ತ್ರೀಯರನ್ನು ಪೊಲೀಸರು ಬಂಧಿಸಿದ್ದು, ಇನ್ನಷ್ಟು ಅಕ್ರಮ ಬಯಲಿಗೆಳೆಯಲು ಬಲೆ ಬೀಸಿದ್ದಾರೆ.

ಏನಿದು ದಂಧೆ?:

ಕೃತಕ ಗರ್ಭಧಾರಣೆ ಮಾಡಲು ಮಹಿಳೆಯರಿಂದ ಅಂಡಾಣುವನ್ನು ದಾನ ಪಡೆಯಲಾಗುತ್ತದೆ. ಅದನ್ನು ಸಂತಾನಾಪೇಕ್ಷಿ ಪುರುಷನ ವೀರ್ಯದೊಂದಿಗೆ ಸಂಯೋಗಿಸಿ ಮಗುವನ್ನು ಸೃಷ್ಟಿಸಲಾಗುತ್ತದೆ. ಈ ರೀತಿ ಅಂಡಾಣುವನ್ನು ದಾನ ಮಾಡಲು ಕಾನೂನಿದೆ. ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಕಾಯ್ದೆ-2021, ಓರ್ವ ಮಹಿಳೆಯರ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಅಂಡಾಣು ದಾನ ಮಾಡಲು ಅವಕಾಶ ಕಲ್ಪಿಸಿದೆ. ಆದರೆ ಸದ್ಯ ಬಲೆಗೆ ಬಿದ್ದಿರುವ ಜಾಲ ಪ್ರತಿ ಮಹಿಳೆಯಿಂದ ಕಾನೂನುಬಾಹಿರವಾಗಿ 33 ಸಲ ಅಂಡಾಣುವನ್ನು ಹೊರತೆಗೆದ ಆಘಾತಕಾರಿ ಸಂಗತಿ ಬಯಲಾಗಿದೆ.

ಬೆಂಗಳೂರೇ ಕಾರಸ್ಥಾನ!:

ಅಂಡಾಣು ದಾನ ಮಾಡಿದರೆ 25,000ದಿಂದ 30,000 ರು. ನೀಡುವುದಾಗಿ ಮಹಿಳೆಯರಿಗೆ ಖದೀಮರು ಆಮಿಷ ಒಡ್ಡುತ್ತಿದ್ದರು. ನಂತರ ವಿವಿಧ ಸ್ಥಳಗಳಿಂದ ಅವರನ್ನು ಬೆಂಗಳೂರಿಗೆ ಕರೆತಂದು, ಸೂಕ್ತ ವೈದ್ಯಕೀಯ ನಿಯಮಗಳ ಪಾಲನೆಯನ್ನು ಸಹ ಮಾಡದೆ ಅಕ್ರಮವಾಗಿ ಅಂಡಾಣುವನ್ನು ಹೊರತೆಗೆಯಲಾಗುತ್ತಿತ್ತು. ಕೆಲಸ ಮುಗಿದ ಬಳಿಕ ಅವರಿಗೆ ಹಣ ಕೊಡದೆ ವಂಚಿಸಲಾಗುತ್ತಿತ್ತು. ಹೀಗೆ ಕನಿಷ್ಠ 40 ಮಹಿಳೆಯರು ವಂಚನೆಗೆ ಒಳಗಾಗಿದ್ದರು. ತನ್ನಿಂದ ಅಂಡಾಣು ದಾನ ಪಡೆದು ಹಣ ಕೊಡದೆ ಮೋಸ ಮಾಡಿದ್ದಾರೆಂದು ಮಹಿಳೆಯೊಬ್ಬರು ದೂರು ನೀಡಿದ್ದರು. ಆಗ ಕಿಂಗ್‌ಪಿನ್‌ ಸುಲಕ್ಷಣಾ ಗಡೇಕರ್ (44) ಎಂಬಾಕೆಯ ಮನೆ ಮೇಲೆ ದಾಳಿ ನಡೆಸಿದಾಗ, ಅಲ್ಲಿ ಹಾರ್ಮೋನ್ ಇಂಜೆಕ್ಷನ್‌ಗಳು ಪತ್ತೆಯಾಗಿವೆ. ಬಳಿಕ ಅಶ್ವಿನಿ ಚಬುಸ್ಕವಾರ್ (29), ಮಂಜುಷಾ ವಾಂಖೆಡೆ (46), ಸೋನಲ್‌ ಗಡೇವಾಲ್‌ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

₹10 ಲಕ್ಷ ಬೆಲೆಯ ಅಕ್ರಮ ಇಂಜೆಕ್ಷನ್‌ ವಶ:

ಸೂಕ್ತ ಪಂಚನಾಮೆಯ ನಂತರ ಪೊಲೀಸರು 3 ಸ್ಥಳಗಳಿಂದ 9.5-10 ಲಕ್ಷ ರು. ಮೌಲ್ಯದ ಅಕ್ರಮ ಇಂಜೆಕ್ಷನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಸೋನಲ್‌ ಗಡೇವಾಲ್‌ ಯಾವುದೇ ವೈದ್ಯಕೀಯ ಪದವಿ ಪಡೆಯದೆ ಅಕ್ರಮವಾಗಿ ಸೋನೋಗ್ರಫಿಗೆ (ಹೊಟ್ಟೆಯ ಸ್ಕ್ಯಾನಿಂಗ್‌) ಸಹಾಯ ಮಾಡುತ್ತಿದ್ದಳು ಮತ್ತು ಅಂಡೋತ್ಪತ್ತಿ ಉತ್ತೇಜಿಸುವ ಉಪಕರಣಗಳನ್ನು ಮನೆಯಲ್ಲಿ ಸಂಗ್ರಹಿಸಿದ್ದಳು ಎನ್ನಲಾಗಿದೆ. ಸಂಪೂರ್ಣ ಜಾಲವನ್ನು ಬಯಲಿಗೆಳೆಯಲು 4 ತಂಡಗಳು ತನಿಖೆ ನಡೆಸುತ್ತಿವೆ. ಉಲ್ಹಾಸ್‌ನಗರ ಮತ್ತು ಥಾಣೆಯಲ್ಲಿರುವ 2 ಆಸ್ಪತ್ರೆಗಳು ಅನುಮತಿ ಪಡೆಯದೆ ಸೋನೋಗ್ರಫಿಗಳನ್ನು ನಡೆಸುತ್ತಿರುವುದರಿಂದ ಪರಿಶೀಲನೆಗೆ ಒಳಪಟ್ಟಿವೆ. ಅಧಿಕಾರಿಗಳು ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಎಚ್ಚರಿಕೆ:

ಮಹಾರಾಷ್ಟ್ರ ಆರೋಗ್ಯ ಸಚಿವ ಪ್ರಕಾಶ್ ಅಬಿತ್ಕರ್ ಸಮಗ್ರ ತನಿಖೆಯ ಭರವಸೆ ನೀಡಿದ್ದು, ಅಂಡಾಣುವಿನ ಅಕ್ರಮ ಮಾರಾಟದಲ್ಲಿ ಭಾಗಿಯಾಗಿರುವ ಯಾವುದೇ ವೈದ್ಯ ಅಥವಾ ಏಜೆಂಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಹೂಚೆಂಡು ಎಸೆದ ಅಭಿಮಾನಿ: ಬಾಂಬ್‌ ಎಂದು ಓಡಿದ ವಿಜಯ್‌
ಈ ವರ್ಷ ಮುಂಗಾರು ಮಳೆ ಪ್ರಮಾಣ ಇಳಿಕೆ : ಐಎಂಡಿ