ಹೊಸ ಪಕ್ಷ ಸ್ಥಾಪಿಸುವೆ: ಜಯಲಲಿತಾ ಗಳತಿ ಆಪ್ತೆ ಶಶಿಕಲಾ ಘೋಷಣೆ

KannadaprabhaNewsNetwork |  
Published : Feb 25, 2026, 02:00 AM IST
ಶಶಿಕಲಾ | Kannada Prabha

ಸಾರಾಂಶ

ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಅವರ ಗೆಳತಿ ವಿ.ಕೆ. ಶಶಿಕಲಾ ಅವರು ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರಲ್ಲಿ ಇವರು ಸ್ಪರ್ಧಿಸುವ ಸಾಧ್ಯತೆಯಿದೆ.

ರಾಮನಾಥಪುರಂ: ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಅವರ ಗೆಳತಿ ವಿ.ಕೆ. ಶಶಿಕಲಾ ಅವರು ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರಲ್ಲಿ ಇವರು ಸ್ಪರ್ಧಿಸುವ ಸಾಧ್ಯತೆಯಿದೆ. ಜಯಲಲಿತಾರ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ‘ನನ್ನ ಹೊಸ ಪಕ್ಷದ ಹೆಸರನ್ನು ಆದಷ್ಟು ಬೇಗ ಘೋಷಿಸುತ್ತೇನೆ. ಅದು ವಿರೋಧಿಗಳು ಮತ್ತು ದ್ರೋಹಿಗಳನ್ನು ಸೋಲಿಸುವ ಪಕ್ಷವಾಗಿ ಹೊರಹೊಮ್ಮಲಿದೆ’ ಎಂದು ಘೋಷಿಸಿದ್ದಾರೆ. ಇದೇ ವೇಳೆ ಪಕ್ಷದ ಧ್ವಜವನ್ನು ಅನಾವರಣಗೊಳಿಸಿದ್ದಾರೆ. ಕಪ್ಪು, ಬಿಳಿ, ಕೆಂಪು ಬಣ್ಣದ ಬಾವುಟದ ನಡುವಲ್ಲಿ ದ್ರಾವಿಡ ಐಕಾನ್‌ ಕರುಣಾನಿಧಿ, ಅಣ್ಣಾಡಿಎಂಕೆ ಸ್ಥಾಪಕ ರಾಮಚಂದ್ರನ್‌ ಮತ್ತು ಜಯಲಲಿತಾರ ಚಿತ್ರವಿದೆ.

==

ಇಂದಿನಿಂದ ಮೋದಿ 2 ದಿನ ಇಸ್ರೇಲ್‌ ಪ್ರವಾಸ

ರಕ್ಷಣೆ, ಭದ್ರತಾ ಸಹಕಾರ ವರ್ಧನೆಗೆ ಒತ್ತು

9 ವರ್ಷದಲ್ಲಿ ಪ್ರಧಾನಿ 2ನೇ ಇಸ್ರೇಲ್‌ ಭೇಟಿ

ಪಿಟಿಐ ನವದೆಹಲಿ

ಇರಾನ್‌-ಅಮೆರಿಕ ಯುದ್ಧಾತಂಕ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರವಾಗಿರುವ ನಡುವೆಯೇ, ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಪ್ರಧಾನಿ ನರೇಂದ್ರ ಮೋದಿ ಬುಧವಾರದಿಂದ 2 ದಿನ ಇಸ್ರೇಲ್‌ ಪ್ರವಾಸ ಕೈಗೊಳ್ಳಲಿದ್ದಾರೆ.9 ವರ್ಷಗಳಲ್ಲಿ ಇದು ಮೋದಿಯವರ 2ನೇ ಇಸ್ರೇಲ್ ಭೇಟಿ. 2017ರಲ್ಲಿ ಮೊದಲ ಭೇಟಿ ನೀಡಿದ್ದರು.

ಇಸ್ರೇಲ್‌ ಸಂಸತ್ತಿನಲ್ಲಿ ಮೋದಿ ಮಾತನಾಡಲಿದ್ದು, ಅಲ್ಲಿನ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅಧ್ಯಕ್ಷ ಐಸಾಕ್ ಹೆರ್ಜಾಗ್ ಜೊತೆಗೂ ಸಭೆ ನಡೆಸಲಿದ್ದಾರೆ. ಗುರುವಾರ ನಡೆಯಲಿರುವ ಉಭಯ ಪ್ರಧಾನಿಗಳನ್ನು ಒಳಗೊಂಡ ನಿಯೋಗ ಮಟ್ಟದ ಮಾತುಕತೆಯಲ್ಲಿ ಪರಸ್ಪರ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಹೆಚ್ಚಿಸುವುದು ಕೇಂದ್ರಬಿಂದುವಾಗಿರಲಿದೆ. ಬುಧವಾರ ರಾತ್ರಿ ನೆತನ್ಯಾಹು ಮೋದಿಯವರಿಗೆ ಖಾಸಗಿ ಭೋಜನಕೂಟವನ್ನು ಏರ್ಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

==

ದೀಪಸ್ತಂಭ ವಿವಾದದ ದೇಗುಲಕ್ಕೆ ಮಾ.1ರಂದು ಮೋದಿ ಭೇಟಿ

ಚೆನ್ನೈ: ತಿರುಪ್ಪುರನ್‌ಕುಂದ್ರಂ ಬೆಟ್ಟದ ಮೇಲಿನ ಸ್ತಂಭದಲ್ಲಿ ದೀಪ ಬೆಳಗುವುದಕ್ಕೆ ಸಂಬಂಧಿಸಿದ ವಿವಾದದಿಂದ ಸುದ್ದಿಯಾಗಿರುವ ಸುಬ್ರಹ್ಮಣ್ಯನ್‌ ಸ್ವಾಮಿ ದೇವಸ್ಥಾನಕ್ಕೆ ಮಾ.1ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಚಾರಕ್ಕಾಗಿ ಮೋದಿಯವರು ಮದುರೈ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ದೇಗುಲಕ್ಕೂ ತೆರಳಿ ಪೂಜೆ ಸಲ್ಲಿಸಲಿದ್ದಾರೆ ಎಂದು ನಾಯಕರು ಮಾಹಿತಿ ನೀಡಿದ್ದಾರೆ.ದೀಪಸ್ತಂಭದ ಬಳಿಯೇ ಮಸೀದಿ ಇರುವ ಕಾರಣ, ಅಲ್ಲಿ ದೀಪೋತ್ಸವಕ್ಕೆ ಅನುಮತಿಸಿದರೆ ಅಶಾಂತಿ ಸೃಷ್ಟಿಯಾಗಿ ಕೋಮುಗಲಭೆ ಸಂಭವಿಸಬಹುದು ಎಂದು ಮುಸಲ್ಮಾನರು ಮತ್ತು ರಾಜ್ಯ ಸರ್ಕಾರದಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಕಳೆದ ತಿಂಗಳು ಮದ್ರಾಸ್‌ ಹೈ ಕೋರ್ಟ್‌ನ ಮದುರೈ ಪೀಠ ದೀಪೋತ್ಸವಕ್ಕೆ ಅನುಮತಿಸಿತ್ತು.

==

ಕೇರಳ ಸ್ಟೋರಿ-2 ಬಗ್ಗೆ ಹೈಕೋರ್ಟ್‌ ಅಸಮಾಧಾನ

ಚಿತ್ರದಲ್ಲಿ ರಾಜ್ಯವನ್ನು ತಪ್ಪಾಗಿ ಬಿಂಬಿಸಲಾಗಿದೆ: ಕಿಡಿ

ಕೊಚ್ಚಿ: ಬಿಡುಗಡೆಗೆ ಹಲವು ತೊಡಕುಗಳನ್ನು ಎದುರಿಸುತ್ತಿರುವ ‘ಕೇರಳ ಸ್ಟೋರಿ-2’ ಚಿತ್ರದಲ್ಲಿ ರಾಜ್ಯವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಕೇರಳ ಹೈಕೋರ್ಟ್‌ ಆಕ್ಷೇಪಿಸಿದ್ದು, ಇದು ಕೋಮು ಸಂಘರ್ಷಕ್ಕೆ ಎಡೆಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದೆ.

ಫೆ.27ರಂದು ಚಿತ್ರ ಬಿಡುಗಡೆಗೆ ನೀಡಲಾಗಿರುವ ಪರವಾನಗಿಯನ್ನು ರದ್ದುಪಡಿಸುವಂತೆ ಹಾಗೂ ಅದರ ಹೆಸರನ್ನೇ ಬದಲಿಸುವಂತೆ ಕೋರಿ ಸಲ್ಲಿಕೆಯಾಗಿದ್ದ 3 ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾ। ಬೇಚು ಕುರಿಯನ್‌ ಥಾಮಸ್‌, ‘ಕೇರಳದಲ್ಲಿ ಎಲ್ಲರೂ ಕೋಮು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಆದರೆ ಚಿತ್ರದಲ್ಲಿ ಇದನ್ನು ಸತ್ಯಕ್ಕೆ ವಿರುದ್ಧವಾಗಿ ತೋರಿಸಲಾಗಿದೆ. ಚಿತ್ರದ ಹೆಸರಲ್ಲಿ ರಾಜ್ಯವೊಂದರ ಹೆಸರು ಬಳಸಿ, ಇದು ನೈಜ ಘಟನೆ ಆಧರಿತ ಎನ್ನುವುದರಿಂದ ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ’ ಎಂದರು.

ಬುಧವಾರ ಮತ್ತೆ ವಿಚಾರಣೆ ನಡೆಯಲಿದ್ದು, 27ಕ್ಕೆ ಬಿಡುಗಡೆ ಆಗುತ್ತದೆಯೇ ಇಲ್ಲವೇ ಎಂದು ನಿರ್ಧಾರ ಆಗುವ ಸಾಧ್ಯತೆ ಇದೆ.ಕೋರ್ಟ್‌ ಸೂಚನೆ ಒಪ್ಪದ ಚಿತ್ರತಂಡ:

ಆದರೆ, ಕೊಚ್ಚಿಯಲ್ಲಿ ಎಲ್ಲಾದರೂ ಕೋರ್ಟ್‌ಗಾಗಿ ಚಿತ್ರಪ್ರದರ್ಶನ ಏರ್ಪಡಿಸಿ ಎಂಬ ನಿರ್ದೇಶನವನ್ನು ಸಿನಿಮಾ ತಂಡ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಬುಧವಾರ ನಡೆಸಲು ಕೋರ್ಟ್‌ ನಿರ್ಧರಿಸಿದೆ. ಅತ್ತ ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್‌ಅನ್ನು ಅತ್ತ ಕೋರ್ಟ್‌ ನಿರ್ದೇಶನದಂತೆ ಹಿಂಪಡೆಯುವ ಭರವಸೆಯನ್ನಷ್ಟೇ ತಂಡ ನೀಡಿದೆ.

ಚಿತ್ರದಲ್ಲಿ ವಿವಿಧ ರಾಜ್ಯಗಳ ಮಹಿಳೆಯರನ್ನು ತೋರಿಸಲಾಗಿದೆಯಾದರೂ ಅದರ ಹೆಸರಲ್ಲಿ ಕೇರಳವನ್ನು ಮಾತ್ರ ಉಲ್ಲೇಖಿಸಲಾಗಿದೆ. ಇದರಿಂದಾಗಿ, ಉಗ್ರವಾದ, ಬಲವಂತದ ಮತಾಂತರ, ಜನಸಂಖ್ಯಾ ಬದಲಾವಣೆಗೆ ಪಿತೂರಿ ನಡೆಯುತ್ತಿರುವುದು ಕೇರಳದಲ್ಲಿ ಎಂದು ಬಿಂಬಿತವಾಗುತ್ತದೆ ಎಂಬುದು ಆಕ್ಷೇಪದ ಮೂಲ ಕಾರಣ.

==

ಒಂದೇ ದಿನ ಸೆನ್ಸೆಕ್ಸ್‌ 1068, ನಿಫ್ಟಿ 288 ಅಂಕ ಕುಸಿತ

ಮುಂಬೈ: ಷೇರುಪೇಟೆ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಮಂಗಳವಾರ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿವೆ. ಸೆನ್ಸೆಕ್ಸ್‌ 1068 ಅಂಕ ಇಳಿದು 82,225.92 ರಲ್ಲಿ ಮುಕ್ತಾಯಗೊಂಡಿದ್ದರೆ, ನಿಫ್ಟಿ 288.35 ಅಂಕ ಕುಸಿದು 25,424.65 ರಲ್ಲಿ ಅಂತ್ಯವಾಗಿದೆ.ಅಮೆರಿಕ- ಇರಾನ್ ಉದ್ವಿಗ್ನತೆಯಿಂದ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಆರ್ಥಿಕ ಹಿಂಜರಿತ ಈ ನಕಾರಾತ್ಮಕ ಬೆಳವಣಿಗೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಸೋಮವಾರ ಸೆನ್ಸೆಕ್ಸ್ 479.95 ಅಂಕ ಕುಸಿದು 83,294.66ರಲ್ಲಿ, ನಿಫ್ಟಿ 141.75 ಅಂಕ ಇಳಿಕೆ ಕಂಡು 25,713ರಲ್ಲಿ ಸ್ಥಿರವಾಗಿತ್ತು.

==

5 ಅಶ್ಲೀಲ ಆ್ಯಪ್‌ಗಳಿಗೆ ಕೇಂದ್ರ ಸರ್ಕಾರ ನಿರ್ಬಂಧ

ನವದೆಹಲಿ: ಅಶ್ಲೀಲ ಆ್ಯಪ್‌ಗಳ ಮೇಲೆ ಪ್ರಹಾರ ಮುಂದುವರಿಸಿರುವ ಕೇಂದ್ರ ಸರ್ಕಾರ, ಮಂಗಳವಾರ ಐದು ಅಶ್ಲೀಲ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಬಂಧಿಸಿದೆ. ಮೂಡ್‌ಎಕ್ಸ್‌ವಿಐಪಿ, ಕೋಯಲ್ ಪ್ಲೇಪ್ರೊ, ಡಿಜಿ ಮೂವೀಪ್ಲೆಕ್ಸ್‌ ಹಾಗೂ ಜುಗ್ನು- ಇವು ನಿಷೇಧಕ್ಕೊಳಗಾದ ಆ್ಯಪ್‌ಗಳು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇರಳ ಹೆಸರು ಕೇರಳಂ ಎಂದು ಬದಲಾವಣೆ
ಬನಿಯನ್‌ ಪ್ರೊಟೆಸ್ಟ್: ಯುವ ಕಾಂಗ್ರೆಸ್‌ ಮುಖ್ಯಸ್ಥ ಚಿಬ್‌ ಬಂಧನ