ಜನರಿಗಾಗಿ ಶಿಸ್ತಿನ ಸಿಪಾಯಿ ರೀತಿ ದುಡಿಯುತ್ತೇನೆ: ಸಿಎಂ

Published : Aug 16, 2026, 08:15 AM IST
Independence day DK Shivakumar

ಸಾರಾಂಶ

ರಾಜ್ಯದ ಜನರ ಇಚ್ಚೆ, ಎಲ್ಲರ ನಂಬಿಕೆಯಂತೆ ರಾಜ್ಯದ ಸೇವೆ ಸಲ್ಲಿಸುತ್ತೇನೆ. ರಾಗ ದ್ವೇಷಗಳಿಲ್ಲದೆ ಎಲ್ಲರನ್ನು ಒಟ್ಟಾಗಿ ಕೂಡಿಸಿಕೊಂಡು ಶಿಸ್ತಿನ ಸಿಪಾಯಿಯಂತೆ ರಾಜ್ಯಕ್ಕಾಗಿ ದುಡಿಯುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಬೆಂಗಳೂರು: ರಾಜ್ಯದ ಜನರ ಇಚ್ಚೆ, ಎಲ್ಲರ ನಂಬಿಕೆಯಂತೆ ರಾಜ್ಯದ ಸೇವೆ ಸಲ್ಲಿಸುತ್ತೇನೆ. ರಾಗ ದ್ವೇಷಗಳಿಲ್ಲದೆ ಎಲ್ಲರನ್ನು ಒಟ್ಟಾಗಿ ಕೂಡಿಸಿಕೊಂಡು ಶಿಸ್ತಿನ ಸಿಪಾಯಿಯಂತೆ ರಾಜ್ಯಕ್ಕಾಗಿ ದುಡಿಯುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಹಾಗೂ ಇತರ ಸದಸ್ಯರ ಜೊತೆ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

80ನೇ ವರ್ಷದ ಸ್ವಾತಂತ್ರ ಆಚರಿಸುವ ಭಾಗ್ಯ ನಮಗೆ ದೊರೆತಿದೆ. ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಅದು ನಮ್ಮ ಉಸಿರು. ಹರಿಪ್ರಸಾದ್‌ ಅವರ ನಾಯಕತ್ವದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ಬರಲು ಶ್ರಮಿಸಬೇಕು. ದೇಶದಲ್ಲೂ ಬದಲಾವಣೆಯಾಗಬೇಕು ಎಂದು ಕರೆ ನೀಡಿದರು. ಸಿದ್ದರಾಮಯ್ಯಅವರ ನೇತೃತ್ವದಲ್ಲಿ 5 ಗ್ಯಾರಂಟಿ ಜಾರಿಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲೂ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ನಾಡಿನ ಜನರ ಸೇವೆ ಮಾಡುವುದಾಗಿ ಹೇಳಿದರು.

ಹರಿಪ್ರಸಾದ್‌ ಮಾತನಾಡಿ, ‘ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯಲಾರಂಭಿಸಿದೆ. ಸಂವಿಧಾನ ವಿರೋಧಿ ಕೃತ್ಯಗಳು ಸಹಜ ಎಂಬಂತಾಗಿದೆ’ ಎಂದರು.

- ಕೆಪಿಸಿಸಿ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ 

ಸರ್ವಾಧಿಕಾರಿ ಧೋರಣೆಗೆ ಸರ್ಕಾರ ಅಂಟಿಕೊಂಡಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಕಿಡಿ ಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಚುನಾವಣೆ ಹೊರತುಪಡಿಸಿ ಉಳಿದ ಯಾವುದಕ್ಕೂ ತಮಗೆ ಸಂಬಂಧವಿಲ್ಲ ಎಂಬಂತೆ ಮೋದಿ ಇದ್ದಾರೆ. ಗೃಹಸಚಿವರು ತಮಗೆ ಯಾವುದೇ ಉತ್ತರದಾಯಿತ್ವವೇ ಇಲ್ಲ ಎನ್ನುತ್ತಿದ್ದಾರೆ. ಇದೆಲ್ಲವೂ ಪ್ರಜಾಪ್ರಭುತ್ವ ಕುಸಿಯುತ್ತಿರುವ ಸಂಕೇತ. ಕಾಂಗ್ರೆಸ್ಸಿಗರು ಪ್ರಜಾಸತ್ತಾತ್ಮಕ ಹೋರಾಟದ ಮೂಲಕ ಪ್ರಜಾಪ್ರಭುತ್ವ ಕುಸಿತ ತಡೆಯದಿದ್ದರೆ ಸ್ವಾತಂತ್ರ್ಯಕ್ಕೆ ಅರ್ಥವೇ ಇರುವುದಿಲ್ಲ ಎಂದು ಎಚ್ಚರಿಸಿದರು.

ಸುಪ್ರೀಂಕೋರ್ಟ್‌, ಹೈಕೋರ್ಟ್‌ ನ್ಯಾಯಾಧೀಶರ ನೇಮಕಾತಿಯಲ್ಲೂ ಏಕಪಕ್ಷೀಯ ನೀರ್ಧಾರಗಳು ಆಗುತ್ತಿವೆ. ಸರ್ಕಾರ ಮತ್ತು ನ್ಯಾಯಾಂಗದ ನಡುವೆ ಸಂಘರ್ಷ ಕಡಿಮೆಯಾಗುತ್ತಿದೆ. ಸರ್ಕಾರದ ಕೈ ಮೇಲಾಗುವ ತೀರ್ಪು ನೀಡುವ ನ್ಯಾಯಾಧೀಶರು ನಿವೃತ್ತಿ ನಂತರ ಉನ್ನತ ಹುದ್ದೆ ಪಡೆಯುವಂತಾಗಿದೆ. ಕಾನೂನುಗಳ ದುರ್ಬಳಕೆ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಚಾರಿತ್ರ್ಯ ಹರಣದ ಮೂಲಕ ಸರ್ಕಾರವನ್ನು ಪ್ರಶ್ನಿಸುವವರನ್ನು ಹಣಿಯಲಾಗುತ್ತಿದೆ ಎಂದು ಹರಿಪ್ರಸಾದ್‌ ದೂರಿದರು.

ಸ್ವಾತಂತ್ರ್ಯಕ್ಕೆ ಧಕ್ಕೆ:

ಸರ್ಕಾರದ ವಿರುದ್ಧ ಭಿನ್ನಾಭಿಪ್ರಾಯ ಹೊಂದಿರುವ ವ್ಯಕ್ತಿಗಳ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲಾಗುತ್ತಿದೆ. ಮೋದಿ ಅವಧಿಯಲ್ಲಿ ದೇಶದ್ರೋಹ ಪ್ರಕರಣ ಶೇ.90 ರಷ್ಟು ಹೆಚ್ಚಾಗಿದೆ. ಯುಎಪಿಎ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳಲ್ಲಿ 2015ರಿಂದ 2019ರ ನಡುವೆ ಶೇ.70ರಷ್ಟು ಹೆಚ್ಚಾಗಿವೆ. ಮೋದಿ ನೇತೃತ್ವದಲ್ಲಿ ಹಿಂದೆಂದೂ ಕಾಣದಷ್ಟೂ ಬಿಕ್ಕಟ್ಟುಗಳನ್ನು ದೇಶ ಎದುರಿಸುತ್ತಿದೆ. ಎಸ್‌ಐಆರ್ ಮೂಲಕ ಕೋಟ್ಯಂತರ ಮತದಾರರ ಮತ ಹಕ್ಕು ಕಸಿಯಲಾಗುತ್ತಿದೆ. ಅಯೋಧ್ಯೆ ರಾಮಮಂದಿರ ಲೂಟಿಯನ್ನೂ ಪ್ರಶ್ನಿಸಬಾರದು ಎಂದು ವಾದ ಮಾಡುತ್ತಿದ್ದಾರೆ. ಇದೆಲ್ಲವೂ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿರುವುದರ ಸೂಚಕ ಎಂದು ಹರಿಪ್ರಸಾದ್ ಹೇಳಿದರು.

ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ.ರೇವಣ್ಣ, ವಿಧಾನ ಪರಿಷತ್‌ ಸದಸ್ಯರಾದ ಡಾ.ಕೆ. ಗೋವಿಂದರಾಜ್, ಉಮಾಶ್ರೀ, ನಾಗರಾಜ್‌ ಯಾದವ್‌ ಹಾಜರಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೊದಲ ಬಾರಿ ಕೆಂಪುಕೋಟೆ ಮೇಲೆ ವಂದೇಮಾತರಂ ನಿನಾದ
ವಿಕಸಿತ ಭಾರತಕ್ಕೆ ಮೋದಿ ಸಪ್ತ ಧಾರಾ ಮಂತ್ರ