ಛತ್ತೀಸ್‌ಗಢದಲ್ಲಿ ನಕ್ಸಲರ ಬೃಹತ್‌ ಖೋಟಾ ನೋಟು ಫ್ಯಾಕ್ಟರಿ ಪತ್ತೆ!

KannadaprabhaNewsNetwork |  
Published : Jun 24, 2024, 01:33 AM ISTUpdated : Jun 24, 2024, 03:59 AM IST
ವಶಪಡಿಸಿಕೊಂಡ ವಸ್ತುಗಳು | Kannada Prabha

ಸಾರಾಂಶ

ಛತ್ತೀಸ್‌ಗಢದ ಅರಣ್ಯದಲ್ಲಿ ಮಾವೋವಾದಿ ನಕ್ಸಲರು ನಡೆಸುತ್ತಿದ್ದ ಖೋಟಾನೋಟು ಫ್ಯಾಕ್ಟರಿಯನ್ನು ಭದ್ರತಾ ಪಡೆಗಳು ಬಯಲಿಗೆ ಎಳೆದಿವೆ. ಈ ವೇಳೆ ನಕ್ಸಲರು ಮುದ್ರಿಸಿಟ್ಟಿದ್ದ ಅಪಾರ ಖೋಟಾ ನೋಟಿನ ದಾಸ್ತಾನೇ ಪತ್ತೆಯಾಗಿದೆ. 

ಸುಕ್ಮಾ(ಛತ್ತೀಸ್‌ಗಢ): ಛತ್ತೀಸ್‌ಗಢದ ಅರಣ್ಯದಲ್ಲಿ ಮಾವೋವಾದಿ ನಕ್ಸಲರು ನಡೆಸುತ್ತಿದ್ದ ಖೋಟಾನೋಟು ಫ್ಯಾಕ್ಟರಿಯನ್ನು ಭದ್ರತಾ ಪಡೆಗಳು ಬಯಲಿಗೆ ಎಳೆದಿವೆ. ಈ ವೇಳೆ ನಕ್ಸಲರು ಮುದ್ರಿಸಿಟ್ಟಿದ್ದ ಅಪಾರ ಖೋಟಾನೋಟಿನ ದಾಸ್ತಾನೇ ಪತ್ತೆಯಾಗಿದೆ. 3 ದಶಕಗಳಿಂದ ನಕ್ಸಲರ ಉಪಟಳದಿಂದ ತತ್ತರಿಸಿರುವ ಛತ್ತೀಸ್‌ಗಢದಲ್ಲಿ ಮಾವೋವಾದಿಗಳ ಬಳಿ ಇಷ್ಟೊಂದು ನಕಲಿ ಹಣ ಪತ್ತೆಯಾಗುತ್ತಿರುವುದು ಇದೇ ಮೊದಲು.

ಇದರೊಂದಿಗೆ, ಭದ್ರತಾ ವ್ಯವಸ್ಥೆಗೆ ಸವಾಲಾಗಿದ್ದ ನಕ್ಸಲರು ಖೋಟಾನೋಟು ಮುದ್ರಿಸಿ ಚಲಾವಣೆಗೆ ಹರಿಬಿಡುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿರುವ ಸಂಗತಿ ಕೂಡ ಬಯಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಯುಪಿಎಸ್‌, ಪ್ರಿಂಟರ್‌ ಬಳಸಿಕೊಂಡು ಖೋಟಾನೋಟುಗಳನ್ನು ಮುದ್ರಿಸಿ ಬಸ್ತರ್‌ ವಲಯದ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ವಾರದ ಸಂತೆಗಳಲ್ಲಿ ನಕ್ಸಲರು ಇವನ್ನು ಬಳಕೆ ಮಾಡುತ್ತಿದ್ದರು. ಅಮಾಯಕ ಬುಡಕಟ್ಟು ಜನರಿಂದ ವಸ್ತು ಖರೀದಿಸಿ ಅವರಿಗೆ ಈ ಖೋಟಾನೋಟು ಕೊಟ್ಟು ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ತೆಯಾಗಿದ್ದು ಹೇಗೆ?:  ಸುಕ್ಮಾ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ನಕ್ಸಲರು ಖೋಟಾನೋಟು ಮುದ್ರಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ, ಜಿಲ್ಲಾ ಸಶಸ್ತ್ರ ಪಡೆ, ಬಸ್ತರ್‌ ಫೈಟರ್ಸ್‌ ಹಾಗೂ ಜಿಲ್ಲಾ ಪೊಲೀಸರನ್ನು ಒಳಗೊಂಡ ಜಂಟಿ ತಂಡ ಶೋಧ ಕಾರ್ಯ ಆರಂಭಿಸಿತ್ತು. ಸುಕ್ಮಾ ಜಿಲ್ಲೆಯ ಕೋರಜ್‌ಗುಡಾ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳನ್ನು ಕಾಣುತ್ತಿದ್ದಂತೆ ನಕ್ಸಲರು ದಟ್ಟಾರಣ್ಯದೊಳಕ್ಕೆ ಪರಾರಿಯಾದರು. ಈ ವೇಳೆ ಅಪಾರ ಖೋಟಾನೋಟು ದಾಸ್ತಾನನ್ನೇ ಬಿಟ್ಟು ಓಡಿದರು.

ಈ ವೇಳೆ ಭದ್ರತಾ ಪಡೆಗಳಿಗೆ 50, 100, 200 ಹಾಗೂ 200 ರು. ಮುಖಬೆಲೆಯ ಖೋಟಾನೋಟುಗಳು, ಕಲರ್‌ ಪ್ರಿಂಟಿಂಗ್ ಮಷಿನ್‌ಗಳು, ಕಪ್ಪು ಮತ್ತು ಬಿಳುಪು ಪ್ರಿಂಟರ್‌, ವಿದ್ಯುತ್‌ ಪೂರೈಕೆಗೆ ಬಳಸುವ ಇನ್‌ವರ್ಟರ್‌ ಯಂತ್ರ, 200 ಬಾಟಲಿ ಇಂಕು, 9 ಪ್ರಿಂಟರ್‌, 4 ಪ್ರಿಂಟರ್‌ ಕಾಟ್ರಿಜ್‌ಗಳು ಪತ್ತೆಯಾಗಿವೆ. ಜತೆಗೆ ನಾಡ ಬಂದೂಕು, ಸ್ಫೋಟಕ, ಇನ್ನಿತರೆ ವಸ್ತುಗಳು, ನಕ್ಸಲರ ಸಮವಸ್ತ್ರ ಕೂಡ ಸಿಕ್ಕಿವೆ ಎಂದು ಸುಕ್ಮಾ ಎಸ್‌ಪಿ ಕಿರಣ್‌ ಜಿ. ಚವಾಣ್‌ ಅವರು ತಿಳಿಸಿದ್ದಾರೆ.

ಹಣಕಾಸಿನ ಕೊರತೆ ಹಿನ್ನೆಲೆಯಲ್ಲಿ ನಕ್ಸಲರು ಈ ಖೋಟಾನೋಟುಗಳನ್ನು ಮುದ್ರಣ ಮಾಡುತ್ತಿದ್ದರು. ಪ್ರತಿ ವಲಯವಾರು ಸಮಿತಿಗಳ ಒಬ್ಬರು ಅಥವಾ ಇಬ್ಬರು ಸದಸ್ಯರು ಬೋಗಸ್‌ ನೋಟುಗಳನ್ನು ಮುದ್ರಣ ಮಾಡಲು 2022ರಲ್ಲೇ ನಕ್ಸಲರು ನಿರ್ದೇಶನ ನೀಡಿದ್ದರು. ಈ ಕಾರ್ಯಾಚರಣೆಯೊಂದಿಗೆ ನಕ್ಸಲರ ಹಣಕಾಸು ಮೂಲವನ್ನೇ ಬಂದ್‌ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ