ಇಎಫ್‌ಟಿಎ - ಭಾರತ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ

KannadaprabhaNewsNetwork |  
Published : Mar 11, 2024, 01:15 AM IST
ಒಪ್ಪಂದ | Kannada Prabha

ಸಾರಾಂಶ

ಪರಸ್ಪರರ ಉತ್ಪನ್ನಗಳಿಗೆ ಸುಂಕ ಕಡಿತ/ ರದ್ದು ಮಾಡುವುದೂ ಸೇರಿದಂತೆ ಹೂಡಿಕೆ, ವ್ಯಾಪಾರ ಉತ್ತೇಜನಕ್ಕೆ ಹಲವು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ 15 ವರ್ಷದಲ್ಲಿ ಭಾರತದಲ್ಲಿ 8 ಲಕ್ಷ ಕೋಟಿ ಹೂಡಿಕೆಯಾಗಲಿದೆ.

ನವದೆಹಲಿ: ಯುರೋಪ್‌ನ 4 ದೇಶಗಳ ಒಕ್ಕೂಟವಾದ ದ ಯುರೋಪಿಯನ್‌ ಫ್ರೀ ಟ್ರೇಡ್‌ ಅಸೋಸಿಯೇಷನ್‌ (ಇಎಫ್‌ಟಿಎ) ಜೊತೆ ಭಾರತ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ. 16 ವರ್ಷಗಳ ಸುದೀರ್ಘ ಮಾತುಕತೆ, ಚರ್ಚೆ ಬಳಿಕ ಇಂಥದ್ದೊಂದು ಒಪ್ಪಂದಕ್ಕೆ ಸಹಿ ಬಿದ್ದಿದೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘ಈ ಒಪ್ಪಂದ ಮುಕ್ತ, ನ್ಯಾಯಸಮ್ಮತ ಮತ್ತು ಸಮಾನ ವ್ಯಾಪಾರದ ಅವಕಾಶದ ಕುರಿತು ಪರಸ್ಪರ ಬದ್ಧತೆಯ ಸಂಕೇತವಾಗಿದ್ದು ಮುಕ್ತ ವ್ಯಾಪಾರಕ್ಕೆ ಹೊಸ ದಿಕ್ಕು ತೋರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಏನಿದು ಒಪ್ಪಂದ?:ಯುರೋಪಿಯನ್‌ ದೇಶಗಳಾದ ಸ್ವಿಜರ್ಲೆಂಡ್, ನಾರ್ವೆ, ಐಸ್‌ಲ್ಯಾಂಡ್‌ ಮತ್ತು ಲಿಕ್ಟಿನ್‌ಸ್ಟೈನ್‌ ದೇಶಗಳ ನಡುವೆ ಭಾರತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ. ಇಂಥ ಒಪ್ಪಂದಗಳ ಅನ್ವಯ ಸಾಮಾನ್ಯವಾಗಿ ಪರಸ್ಪರ ದೇಶಗಳ ಉತ್ಪನ್ನಗಳ ಮೇಲಿನ ಆಮದು, ರಫ್ತಿಗೆ ಹೇರಲಾಗುವ ತೆರಿಗೆ ಕಡಿತ ಮಾಡಲಾಗುತ್ತದೆ, ಇಲ್ಲವೇ ಪೂರ್ಣ ರದ್ದು ಮಾಡಲಾಗುತ್ತದೆ. ಹೀಗಾಗಿ ಒಂದು ದೇಶದ ಉತ್ಪನ್ನ ಒಪ್ಪಂದಕ್ಕೆ ಸಹಿ ಹಾಕಿದ ಮತ್ತೊಂದು ದೇಶಕ್ಕೆ ಯಾವುದೇ ತೆರಿಗೆ ಭಾರವಿಲ್ಲದೇ ಸರಬರಾಜು ಆಗುತ್ತದೆ. ಅದೇ ರೀತಿ ಮತ್ತೊಂದು ದೇಶದಿಂದಲೂ ಅಗ್ಗವಾಗಿ ವಸ್ತುಗಳ ಆಮದು ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.ಹೀಗಾಗಿ ಈ ಒಪ್ಪಂದದ ಪರಿಣಾಮ ಭಾರತದ ಬಹುತೇಕ ಕೈಗಾರಿಕಾ ಉತ್ಪನ್ನಗಳು ಸುಂಕ ರಹಿತವಾಗಿ ಇಎಫ್‌ಟಿಎ ದೇಶಗಳಿಗೆ ರಫ್ತು ಮಾಡಬಹುದು. ಜೊತೆಗೆ ಸಂಸ್ಕೃರಿತ ಕೃಷಿ ಉತ್ಪನ್ನಗಳ ರಫ್ತಿನ ಮೇಲಿನ ಸುಂಕಕ್ಕೂ ರಿಯಾಯಿತಿ ಸಿಗಲಿದೆ. ಅದೇ ರೀತಿ ಭಾರತ ಕೂಡಾ ತನ್ನ ಶೇ.82.7ರಷ್ಟು ಉತ್ಪನ್ನಗಳನ್ನು ಇಎಫ್‌ಟಿಎ ದೇಶಗಳಿಗೆ ತೆರಿಗೆ ಮುಕ್ತ ಮಾಡಲಿದೆ.ಈ ಒಪ್ಪಂದದ ವ್ಯಾಪ್ತಿಯಿಂದ ಭಾರತ ಪಾಲಿಗೆ ಅತ್ಯಂತ ಪ್ರಮುಖವಾದ ಡೈರಿ ಉತ್ಪನ್ನ, ಸೋಯಾ, ಕಲ್ಲಿದ್ದಲು ಮತ್ತು ಸೂಕ್ಷ್ಮ ಕೃಷಿ ಉತ್ಪನ್ನಗಳನ್ನು ಹೊರಗಿಡುವ ಮೂಲಕ ದೇಶದ ಕೃಷಿ, ಹೈನುಗಾರಿಕೆ ವಲಯವನ್ನು ರಕ್ಷಿಸುವ ಕೆಲಸ ಮಾಡಲಾಗಿದೆ.ಇದರ ಜೊತೆಗೆ ಹಾಲಿ ಭಾರತ ಮಾಡಿಕೊಂಡಿರುವ ಒಪ್ಪಂದದ ಅನ್ವಯ, ಯುರೋಪ್‌ನ ನಾಲ್ಕು ದೇಶಗಳು ಮುಂದಿನ 15 ವರ್ಷಗಳ ಅವಧಿಯಲ್ಲಿ 8 ಲಕ್ಷ ಕೋಟಿ ರು.ಬಂಡವಾಳ ಹೂಡಿಕೆ ಮಾಡಿ 10 ಲಕ್ಷ ಉದ್ಯೋಗ ಸೃಷ್ಟಿ ಮಾಡಲು ನೆರವಾಗಲಿವೆ. ಮುಕ್ತ ವ್ಯಾಪಾರ ಒಪ್ಪಂದದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ ಕುರಿತು ಕಾನೂನುಬದ್ಧವಾಗಿ ಭರವಸೆ ನೀಡಲಾಗಿದೆ ಎಂಬುದು ಈ ಒಪ್ಪಂದದ ಮತ್ತೊಂದು ಇಂಥದ್ದೊಂದು ಒಪ್ಪಂದದ ಕುರಿತು 16 ವರ್ಷಗಳ ಹಿಂದೆ ಮಾತುಕತೆ ಆರಂಭವಾಗಿತ್ತು. 2008ರಲ್ಲಿ ಆರಂಭವಾದ ಮಾತುಕತೆ 2013ರಲ್ಲಿ ಸ್ಥಗಿತಗೊಂಡಿತ್ತು. 2016ರಲ್ಲಿ ಮತ್ತೆ ಮಾತುಕತೆ ಪುನಾರಂಭವಾಗಿ ಇದೀಗ ಒಪ್ಪಂದದ ಸ್ವರೂಪ ಪಡೆದುಕೊಂಡಿದೆ.

PREV

Recommended Stories

ರಾಹುಲ್‌ ಗಾಂಧಿಗೆ ಸುಪ್ರೀಂ ಕೋರ್ಟ್‌ ತೀವ್ರ ತಪರಾಕಿ!
ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ವಿರುದ್ಧ ಕೇಂದ್ರಕ್ಕೆ ಮಹಾ ದೂರು