ಎವರೆಸ್ಟ್‌ನಲ್ಲಿ ಮೃತರ ಶವ ಕೆಳಗೆ ತರಲು ₹1 ಕೋಟಿ ವೆಚ್ಚ!

KannadaprabhaNewsNetwork |  
Published : May 29, 2026, 01:45 AM IST
ಎವರೆಸ್ಟ್ | Kannada Prabha

ಸಾರಾಂಶ

ವಿಶ್ವದ ಅತ್ಯಂತ ಎತ್ತರದ ಹಿಮಶಿಖರ ಎವರೆಸ್ಟ್‌ ಏರುವುದು ಪ್ರತಿಯೊಬ್ಬ ಚಾರಣಿಗರ ಕನಸು. ಆದರೆ ಸುರಕ್ಷಿತವಾಗಿ ಹೋಗಿ ಬಂದರೆ ತೊಂದರೆ ಇಲ್ಲ. ಆದರೆ ಹೋದವರ ಪೈಕಿ ಯಾರಾದರೂ ಅಲ್ಲೇ ಮೃತಪಟ್ಟರೆ ಅದು ಕುಟುಂಬದವರ ಪಾಲಿಗೆ ಅಥವಾ ಶವಗಳನ್ನು ಮರಳಿ ಕೆಳಗೆ ತರಲು ಹೋಗುವವರ ಪಾಲಿಗೂ ಭಾರೀ ಸವಾಲಿನ ಕೆಲಸ. ಇದೇ ಕಾರಣಕ್ಕೆ ಇತ್ತೀಚೆಗೆ ಯಶಸ್ವಿಯಾಗಿ ಹಿಮಶಿಖರ ಏರಿ, ಕೆಳಗೆ ಇಳಿಯುವ ವೇಳೆ ಮೃತ ಪಟ್ಟ ಹೈದ್ರಾಬಾದ್‌ನ ಅರುಣ್ ಕುಮಾರ್‌ ದೇಹವನ್ನು ಅಲ್ಲೇ ಬಿಡಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ.

ಶಿಖರ ಏರುವುದಕ್ಕಿಂತಲೂ ಶವ ಮರಳಿ ತರುವ ಕಾರ್ಯಾಚರಣೆಯೇ ಅತಿ ಸಂಕಷ್ಟದ್ದು

ಹತ್ತಾರು ಶೆರ್ಪಾಗಳ ಜೀವಕ್ಕೆ ಅಪಾಯ । ಹೀಗಾಗಿ ಶವ ಅಲ್ಲೇ ಬಿಡುವ ಕುಟುಂಬಗಳು

ಹೈದರಾಬಾದ್‌: ವಿಶ್ವದ ಅತ್ಯಂತ ಎತ್ತರದ ಹಿಮಶಿಖರ ಎವರೆಸ್ಟ್‌ ಏರುವುದು ಪ್ರತಿಯೊಬ್ಬ ಚಾರಣಿಗರ ಕನಸು. ಆದರೆ ಸುರಕ್ಷಿತವಾಗಿ ಹೋಗಿ ಬಂದರೆ ತೊಂದರೆ ಇಲ್ಲ. ಆದರೆ ಹೋದವರ ಪೈಕಿ ಯಾರಾದರೂ ಅಲ್ಲೇ ಮೃತಪಟ್ಟರೆ ಅದು ಕುಟುಂಬದವರ ಪಾಲಿಗೆ ಅಥವಾ ಶವಗಳನ್ನು ಮರಳಿ ಕೆಳಗೆ ತರಲು ಹೋಗುವವರ ಪಾಲಿಗೂ ಭಾರೀ ಸವಾಲಿನ ಕೆಲಸ. ಇದೇ ಕಾರಣಕ್ಕೆ ಇತ್ತೀಚೆಗೆ ಯಶಸ್ವಿಯಾಗಿ ಹಿಮಶಿಖರ ಏರಿ, ಕೆಳಗೆ ಇಳಿಯುವ ವೇಳೆ ಮೃತ ಪಟ್ಟ ಹೈದ್ರಾಬಾದ್‌ನ ಅರುಣ್ ಕುಮಾರ್‌ ದೇಹವನ್ನು ಅಲ್ಲೇ ಬಿಡಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ.

ಸಾಹಸದ ಯಾತ್ರೆ:

8,848.86 ಮೀ. ಎತ್ತರದ ಮೌಂಟ್‌ ಎವರೆಸ್ಟ್‌ನ ಶಿಖರ ಏರುವ ಪ್ರಕ್ರಿಯೆ ಒಟ್ಟಾರೆ 2 ತಿಂಗಳಿನದ್ದು. ಇದಕ್ಕೆ ಆಗುವ ವೆಚ್ಚ ಅಂದಾಜು 50 ಲಕ್ಷ ರು.ನಿಂದ 90 ಲಕ್ಷ ರು. ಇದರಲ್ಲಿ ಶಿಖರ ಏರುವ ಶುಲ್ಕ, ತರಬೇತಿ, ಶೆರ್ಪಾಗಳ ವೆಚ್ಚ, ಶಿಖರ ಹತ್ತಲು ಬೇಕಾದ ಉಪಕರಣ, ವಿಮಾ ವೆಚ್ಚ ಸೇರಿರುತ್ತದೆ.

ಮೃತಪಟ್ಟರೆ ಸಂಕಷ್ಟ:

ಒಂದು ವೇಳೆ ಶಿಖರ ಏರುವ ವೇಳೆ ಅಥವಾ ಇಳಿಯುವ ವೇಳೆ ಅಲ್ಲಿ ಯಾರಾದರೂ ಸಾವನ್ನಪ್ಪಿದರೆ ಅವರನ್ನು ಕರೆತರುವುದು ಬಹಳ ಕಷ್ಟದ ಕೆಲಸ. ಕಾರಣ ಸಮುದ್ರದ ಮಟ್ಟದಿಂದ 6400 ಅಡಿ ಎತ್ತರದವರೆಗೆ ಮಾತ್ರ ಹೆಲಿಕಾಪ್ಟರ್‌ಗಳು ಸಾಗಬಲ್ಲದು. ಆ ಎತ್ತರದಲ್ಲಿ ಸಿಕ್ಕಿಬಿದ್ದಿದ್ದರೆ ಜೀವಂತ ವ್ಯಕ್ತಿ ಅಥವಾ ಮೃತ ವ್ಯಕ್ತಿಗಳ ಶವವನ್ನು ಕಾಪ್ಟರ್‌ ಮೂಲಕ ಕೆಳಗೆ ತರಬಹುದು. ಇದಕ್ಕೆ ವಿಮೆ ಹಣ ಲಭ್ಯವಿದೆ. ಆದರೆ ಕಾಪ್ಟರ್‌ ಬಿಟ್ಟು ಶೆರ್ಪಾಗಳೇ ಶವ ಎಳೆದು ತರಬೇಕೆಂದರೆ ಅದಕ್ಕೆ ವಿಮೆ ಹಣ ಲಭ್ಯವಿಲ್ಲ.

ಭಾರೀ ಹೊರೆ:

ಕಾಪ್ಟರ್‌ಗಳು ತೆರಳಲು ಸಾಧ್ಯವಾಗದ ಪ್ರಕರಣಗಳಲ್ಲಿ ಶೆರ್ಪಾಗಳೇ ಮೃತರ ಶವ ತರುತ್ತಾರೆ. ಆದರೆ ಇದಕ್ಕೆ ಕನಿಷ್ಠ 1 ಕೋಟಿ ರು.ಅಥವಾ ಅದಕ್ಕಿಂತಲೂ ಹೆಚ್ಚು ಶುಲ್ಕ ವಿಧಿಸಲಾಗುತ್ತದೆ. ಇದೀಗ ಅರುಣ್‌ ಪ್ರಕರಣದಲ್ಲೂ ಆಗಿದ್ದು ಇದೇ. ಅವರು ಸಾವನ್ನಪ್ಪಿದ ಪ್ರದೇಶ ಶಿಖರದ ತುದಿಯಿಂದ 60 ಮೀಟರ್‌ ಕೆಳಗಿದೆ. ಇಲ್ಲಿಂದ ಶವ ತರಬೇಕಾದರೆ ಕನಿಷ್ಠ 10-12 ಶೆರ್ಪಾಗಳು ತೆರಳಬೇಕು. ಅವರು ಆಕ್ಸಿಜನ್‌ ಸಿಲಿಂಡರ್‌ ಸೇರಿದಂತೆ ರಕ್ಷಣೆಗೆ ಬೇಕಾಗುವ ಇನ್ನಿತರೆ ಉಪಕರಣ ಹೊತ್ತುಕೊಂಡು ಹತ್ತಬೇಕಾದ ಕಾರಣ ಸಮಯವೂ ಜಾಸ್ತಿ ತಗುಲುತ್ತದೆ. ಬಳಿಕ ಶವ ಇರುವ ಜಾಗಕ್ಕೆ ತೆರಳಿ ಅಲ್ಲಿ ಶವ ಹುಡುಕಿ ಹೊರತೆಗೆದು, ಹಗ್ಗ ಕಟ್ಟಿ ದುರ್ಗಮ ಮಾರ್ಗದಲ್ಲಿ ಇಳಿಸಬೇಕು. ಸದಾ ನೀರ್ಗಲ್ಲು ಕುಸಿತದ ಅಪಾಯ ಇರುವ ಈ ಪ್ರದೇಶಕ್ಕೆ ತೆರಳುವುದು ಶೆರ್ಪಾಗಳ ಜೀವಕ್ಕೂ ಅಪಾಯ.

ಶವ ಅಲ್ಲೇ ಬಿಡಲು ನಿರ್ಧಾರ:

ಇದೇ ಕಾರಣಕ್ಕೆ ಕುಟುಂಬ ಸದಸ್ಯರು ಅರುಣ್‌ ಶವವನ್ನೇ ಶಿಖರದ ಹಿಮದ ನಡುವೆಯೇ ಬಿಡಲು ನಿರ್ಧರಿಸಿದ್ದಾರೆ. ‘ದೇಹ ತರಲು ಮುಂದಾದರೂ ಅದು ನಮ್ಮನ್ನು ತಲುಪುವಷ್ಟರಲ್ಲಿ ಬಹಳ ಹಾನಿಯಾಗಿರುತ್ತದೆ. ಪರ್ವಾತಾರೋಹಿಯಾಗಿದ್ದ ತಿವಾರಿಯ ಬಯಕೆಯೂ ಹಿಮಾಲಯದೊಂದಿಗೆ ಹೀಗೆ ಸಂಪರ್ಕದಲ್ಲಿರುವುದೇ ಆಗಿತ್ತು’ ಎಂದಿದ್ದಾರೆ.

ಮೃತಪಟ್ಟಿದ್ದು ಹೇಗೆ?:

ಪರ್ವತಾರೋಹಣದ ವೇಳೆಯೇ ಅರುಣ್‌ರ ಆರೋಗ್ಯ ಹದಗೆಟ್ಟಿದ್ದು, ಅಲ್ಲಿಂದಲೇ ಮರಳುವಂತೆ ಅವರಿಗೆ ಸೂಚಿಸಲಾಗಿತ್ತು. ಆದರೆ, ‘ಶಿಖರಕ್ಕೆ ಇಷ್ಟು ಸ್ಪಷ್ಟವಾಗಿ ಕಾಣುತ್ತಿರುವಾಗ ಹಿಂದಿರುಗುವ ಮಾತೇ ಇಲ್ಲ’ ಎಂದು ಅವರದನ್ನು ತಿರಸ್ಕರಿಸಿ ತಮ್ಮಾಸೆಯಂತೆ ಪರ್ವತದ ತುದಿಯನ್ನೇರಿದ್ದರು. ಅಲ್ಲಿಂದ ಇಳಿಯುವ ವೇಳೆ ಅರುಣ್‌ ಇದ್ದಕ್ಕಿದ್ದಂತೆ ರಕ್ತದ ವಾಂತಿ ಮಾಡಿಕೊಳ್ಳಲಾರಂಭಿಸಿದರು. ಕೂಡಲೇ ಜತೆಗಿದ್ದ ಶೆರ್ಪಾಗಳು ಆಕ್ಸಿಜನ್‌ ಮಾಕ್ಸ್‌ ನೆರವಿನಿಂದ ಅವರನ್ನು ರಕ್ಷಿಸಲು ಯತ್ನಿಸಿದರಾದರೂ ಸಫಲರಾಗಲಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದೇಶದ ಮೊದಲ ಹೈಡ್ರೋಜನ್‌ ರೈಲಿಗೆ ಸರ್ಕಾರ ಗ್ರೀನ್‌ ಸಿಗ್ನಲ್‌
SIR ಸಭೆಗೆ ಗೈರಾದ ಕೆಪಿಸಿಸಿ ಪದಾಧಿಕಾರಿಗಳ ವಿರುದ್ಧ ಕ್ರಮ