ಪ್ರಯಾಗ್‌ರಾಜ್: ಭಾರತೀಯ ವಾಯುಪಡೆಯ ಧ್ವಜದಲ್ಲಿ 72 ವರ್ಷದ ಬಳಿಕ ಇದೇ ಮೊದಲ ಬಾರಿಗೆ ಬದಲಾವಣೆಯನ್ನು ಮಾಡಲಾಗಿದ್ದು, ಭಾನುವಾರ ಇಲ್ಲಿ ನಡೆದ ವಾಯುಪಡೆಯ 91ನೇ ವಾರ್ಷಿಕೋತ್ಸವದಲ್ಲಿ ಧ್ವಜ ಅನಾವರಣ ಮಾಡಲಾಗಿದೆ. ರಾಷ್ಟ್ರ ಲಾಂಛನ ಮತ್ತು ಹಾರುತ್ತಿರುವ ಗರುಡದ ಚಿಹ್ನೆ ಇರುವ ವಾಯುಪಡೆಯ ಲಾಂಛನವನ್ನು ಧ್ವಜದಲ್ಲಿ ಅಳವಡಿಸಲಾಗಿದೆ. ಧ್ವಜದಲ್ಲಿದ್ದ ರೌಂಡೆಲ್‌ನ ಮೇಲ್ಭಾಗದಲ್ಲಿ ಈ ಲಾಂಛನವನ್ನು ಅಳವಡಿಸಲಾಗಿದೆ.
ಧ್ವಜದ ಬಲಭಾಗದ ಮೇಲ್ತುದಿಯಲ್ಲಿ ರಾಷ್ಟ್ರಧ್ವಜವಿದೆ. ಇಲ್ಲಿ ನಡೆದ ವಾಯುಪಡೆಯ 91ನೇ ವಾರ್ಷಿಕೋತ್ಸವದಲ್ಲಿ ಹೊಸ ಧ್ವಜವನ್ನು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅನಾವರಣಗೊಳಿಸಿದರು. ಹೊಸ ಧ್ವಜವನ್ನು ಅನಾವರಣಗೊಳಿಸಿದ ಬಳಿಕ ಇಲ್ಲಿರುವ ವಾಯುನೆಲೆಯಲ್ಲಿ ಹೊಸ ಧ್ವಜವನ್ನು ಹಾರಿಸಿ ಹಳೆಯ ಧ್ವಜವನ್ನು ಇಳಿಸಲಾಯಿತು. ಹಳೆ ಧ್ವಜವನ್ನು ದೆಹಲಿಯಲ್ಲಿರುವ ವಾಯುಪಡೆ ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ. ಕಳೆದ ವಾಯುಪಡೆ ದಿನಾಚರಣೆಯಲ್ಲಿ ಸಮವಸ್ತ್ರದಲ್ಲಿ ಬದಲಾವಣೆ ಮಾಡಲಾಗಿತ್ತು. ಈ ಹಿಂದೆ ನೌಕಾಪಡೆಯ ಧ್ವಜದಲ್ಲೂ ಬದಲಾವಣೆ ಮಾಡಲಾಗಿತ್ತು.