ನವದೆಹಲಿ: ಅಂತಾರಾಷ್ಟ್ರೀಯ ನಿರ್ಬಂಧಗಳು, ಭಾರತದ ಆಪರೇಷನ್ ಸಿಂದೂರ ಕಾರ್ಯಾಚರಣೆ ಕೊಟ್ಟ ಏಟಿನಿಂದ ತತ್ತರಿಸಿರುವ ಪಾಕ್ ಪೋಷಿತ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಇದೀಗ ತನ್ನ ಹೆಸರನ್ನೇ ಬದಲಾಯಿಸಿಕೊಂಡಿದೆ. ಅಲ್ ಮುರಬಿತುನ್ (ಇಸ್ಲಾಂನ ರಕ್ಷಕರು) ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲು ಆರಂಭಿಸಿದೆ. ಆದರೆ, ಈ ಹೆಸರು ಜೈಷ್-ಎ-ಮೊಹಮ್ಮದ್‌ನ ಪಾಕಿಸ್ತಾನದ ಕಾರ್ಯಾಚರಣೆಗಷ್ಟೇ ಸೀಮಿತವಾಗಿದೆ.
ಜೈಷ್-ಎ-ಮೊಹಮ್ಮದ್ ಸಂಸ್ಥಾಪಕ ಮುಂದಿನ ಮಸೂದ್ ಅಜರ್ ಸೋದರ ಯೂಸುಫ್ ಅಜರ್‌ನ ಶ್ರದ್ಧಾಂಜಲಿ ಮುಂದಿನ ವಾರ ನಡೆಯಲಿದ್ದು, ಈ ವೇಳೆ ಈ ಹೆಸರಿನಡಿಯೇ ಆ ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಭಾರತದ ಸಂಸತ್ತಿನ ಮೇಲೆ 2001ರ ದಾಳಿ, 26/11ರಲ್ಲಿ ಮುಂಬೈ ಮೇಲಿನ ದಾಳಿಯಲ್ಲಿ ಜೈಷ್ ಸಂಘಟನೆ ಪ್ರಮುಖ ಪಾತ್ರವಹಿಸಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಉರಿ, ಪುಲ್ವಾಮಾ ದಾಳಿಯಲ್ಲೂ ಈ ಉಗ್ರ ಸಂಘಟನೆ ನೇರವಾಗಿ ಪಾಲ್ಗೊಂಡಿತ್ತು. ಆದರೆ, ಇದೀಗ ಸಂಘಟನೆ ಮೇಲೆ ಹಲವು ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ವಿದೇಶಗಳಿಂದ ದೇಣಿಗೆ ಪಡೆಯುವುದು ಕಷ್ಟವಾಗುತ್ತಿದೆ. ಹೀಗಾಗಿ ಸಂಘಟನೆ ತನ್ನ ಹೆಸರನ್ನೇ ಬದಲಾಯಿಸಿಕೊಂಡು ಕಾರ್ಯಾಚರಣೆಗಿಳಿದಿದೆ ಎಂದು ತಿಳಿದುಬಂದಿದೆ.
ಜೈಷ್ ಉಗ್ರ ಸಂಘಟನೆಯು 300 ಉಗ್ರ ತರಬೇತಿ ಕೇಂದ್ರಗಳನ್ನು ತೆರೆಯಲುದ್ದೇಶಿಸಿದ್ದು, ಇದಕ್ಕಾಗಿ 4 ಶತಕೋಟಿ ಪಾಕ್ ರುಪಾಯಿಯಷ್ಟು ಹಣ ಸಂಗ್ರಹಿಸುವ ಗುರಿ ಹೊಂದಿದೆ. ಇ-ವ್ಯಾಲೆಟ್‌ಗಳ ಮೂಲಕ ಸಂಘಟನೆಯು ಹಣ ಪಡೆಯುತ್ತಿದ್ದು, ಇಂಥ ನಾಲ್ಕು ಇ-ವ್ಯಾಲೆಟ್‌ಗಳನ್ನು ಉಗ್ರರ ಹಣಕಾಸು ವ್ಯವಹಾರಗಳ ಮೇಲೆ ಕಣ್ಣಿಡುವ ಸಂಘಟನೆಯಾದ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್(ಎಫ್‌ಎಟಿಎಫ್) ಜುಲೈನಲ್ಲಿ ನೀಡಿದ ತನ್ನ ವರದಿಯಲ್ಲಿ ಪ್ರಸ್ತಾಪಿಸಿತ್ತು. ಈ ಇ-ವ್ಯಾಲೆಟ್‌ಗಳು ನೇರವಾಗಿ ಮಸೂದ್ ಕುಟುಂಬದವರಿಗೆ ಸೇರಿದ್ದು ಎನ್ನಲಾಗಿದೆ.
ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಉಗ್ರರ ತರಬೇತಿ ಶಿಬಿರಗಳನ್ನು ಭಾರತೀಯ ಸೇನೆಯು ಸಂಪೂರ್ಣವಾಗಿ ನಾಶ ಮಾಡಿತ್ತು. ಇದೀಗ ಅದರ ಮರು ನಿರ್ಮಾಣಕ್ಕೂ ಜೈಷ್ ಪ್ರಯತ್ನ ನಡೆಸುತ್ತಿದೆ. ಮತ್ತೊಬ್ಬ ಉಗ್ರ ಹಫೀಜ್ ಸಯೀದ್‌ನ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯು ಭಾರತದ ದಾಳಿ ಬೆದರಿಕೆಯಿಂದ ಈಗಾಗಲೇ ತನ್ನ ಉಗ್ರ ತರಬೇತಿ ಕೇಂದ್ರಗಳನ್ನು ಖೈಬರ್ ಪಖ್ತುನ್‌ಕ್ವಾ ಪ್ರಾಂತ್ಯಕ್ಕೆ ವರ್ಗಾವಣೆ ಮಾಡಿದೆ.
ಇನ್ನು ಉಗ್ರ ಸಂಘಟನೆಗಳ ಮರು ನಿರ್ಮಾಣ ಕಾರ್ಯಾಚರಣೆಯ ಭಾಗವಾಗಿ ಈಗಾಗಲೇ ಗರ್ಹಿ ಹಬೀಬುಲ್ಲಾ ಪಟ್ಟಣದಲ್ಲಿ ಇತ್ತೀಚೆಗಷ್ಟೇ ಜೈಷ್ ಸಂಘಟನೆ ನೇಮಕಾತಿ ಶಿಬಿರವನ್ನೂ ನಡೆಸಿದೆ. ಸಂಘಟನೆಯ ಕಮಾಂಡರ್ ಮಸೂದ್ ಇಲ್ಯಾಸ್ ಕಾಶ್ಮೀರಿ ನೇತೃತ್ವದಲ್ಲಿ ಈ ನೇಮಕಾತಿ ಶಿಬಿರ ನಡೆದಿದೆ. ಈ ವೇಳೆ ಆತ ಮಾಡಿದ ಭಾಷಣದಿಂದ ಉಗ್ರ ಸಂಘಟನೆಗಳ ಕಾರ್ಯಾಚರಣೆಗೆ ಪಾಕ್ ಸರ್ಕಾರದ ನೆರವು ಸಿಗುತ್ತಿರುವುದು ಸ್ಪಷ್ಟವಾಗಿದೆ. ಜತೆಗೆ, ಈ ಶಿಬಿರಕ್ಕೆ ಪಾಕಿಸ್ತಾನ ಸೇನೆ ಮತ್ತು ಪೊಲೀಸರ ರಕ್ಷಣೆಯೂ ಇತ್ತು ಎಂಬುದಕ್ಕೂ ಗುಪ್ತಚರ ಸಂಸ್ಥೆಗಳಿಗೆ ಸಾಕ್ಷ್ಯ ಸಿಕ್ಕಿದೆ.
ಕಾಶ್ಮೀರಿಗಳ ರಕ್ತ ವ್ಯರ್ಥವಾಗಲ್ಲ: ಷರೀಫ್ ಕಿರಿಕ್
ಲಂಡನ್: ‘ನೆರೆಹೊರೆಯ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನ ಒಟ್ಟಿಗೆ ಬಾಳುವುದನ್ನು ಕಲಿಯಬೇಕು’ ಎಂದು ಅಪರೂಪಕ್ಕೆ ಶಾಂತಿಮಂತ್ರ ಪಠಿಸಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ‘ಕಾಶ್ಮೀರ ಸಮಸ್ಯೆ ಬಗೆಹರಿಯುವ ತನಕ ಇದು ಸಾಧ್ಯವಿಲ್ಲ’ ಎಂದು ಅದಕ್ಕೆ ಷರತ್ತು ವಿಧಿಸಿದ್ದಾರೆ. ಅಲ್ಲದೆ, ‘ಕಾಶ್ಮೀರಿಗಳ ರಕ್ತ ವ್ಯರ್ಥವಾಗುವುದಿಲ್ಲॐ ಎಂದು ಭಾರತಕ್ಕೆ ಎಚ್ಚರಿಸಿದ್ದಾರೆ.
ಲಂಡನ್‌ನಲ್ಲಿರುವ ಪಾಕ್ ಮೂಲದವರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕಾಶ್ಮೀರ ಸಮಸ್ಯೆ ಬಗೆಹರಿಯದೆ ಭಾರತದೊಂದಿಗಿನ ಸಂಬಂಧ ಸುಧಾರಿಸುತ್ತದೆ ಎಂದುಕೊಂಡರೆ ಅದು ಮೂರ್ಖತನ. ಈವರೆಗೆ ನಡೆದ 4 ಯುದ್ಧಗಳಲ್ಲಿ ಕೋಟ್ಯಂತರ ಡಾಲರ್‌ಗಳು ಖರ್ಚಾಗಿವೆ. ಆ ಹಣವನ್ನು ಪಾಕ್ ಜನರ ಅಭಿವೃದ್ಧಿಗೆ ಬಳಸಬಹುದು’ ಎಂದರು.ಈ ವೇಳೆ, ‘ಭಾರತ ಸಹಕಾರಿಯಾಗಿರುವ ಬದಲು ಕಾದಾಟದ ವರ್ತನೆ ತೋರುತ್ತಿದೆ’ ಎಂದು ಆರೋಪಿಸಿದ ಅವರು. ‘ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಭಾರತ ಮುಂದಾಗಬೇಕು. ಶಾಂತಿ ಸ್ಥಾಪನೆ ನಮ್ಮ ಕೈಯಲ್ಲಿದೆ’ ಎಂದರು.
7 ಯುದ್ಧ ನಿಲ್ಲಿಸಿದ ನನಗೆ 7 ನೊಬೆಲ್ ಬರಲಿ: ಟ್ರಂಪ್
ಪಿಟಿಐ ನ್ಯೂಯಾರ್ಕ್‌ಭಾರತದ ಸ್ಪಷ್ಟವಾದ ನಿರಾಕರಣೆ ಬಳಿಕವೂ, ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ನಿಲ್ಲಿಸಿದ್ದು ತಾನೇ ಎಂಬ ಸುಳ್ಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಜೊತೆಗೆ, ‘ನಾನು ಒಟ್ಟು 7 ಯುದ್ಧ ನಿಲ್ಲಿಸಿದ್ದೇನೆ. ಇದಕ್ಕಾಗಿ ನನಗೆ 7 ನೊಬೆಲ್ ಶಾಂತಿ ಪ್ರಶಸ್ತಿ ಬರಬೇಕು’ ಎಂದಿದ್ದಾರೆ.
ಶನಿವಾರ ಅಮೆರಿಕನ್ ಕಾರ್ನರ್‌ಸ್ಟೋನ್ ಇನ್‌ಸ್ಟಿಟ್ಯೂಟ್ ಸ್ಥಾಪಕರ ಔತಣಕೂಟದಲ್ಲಿ ಮಾತನಾಡಿದ ಟ್ರಂಪ್, ‘ಭಾರತಕ್ಕೆ, ನೀವು ಯುದ್ಧ ಮುಂದುವರಿಸಿದರೆ ನಾವು ನಿಮ್ಮೊಂದಿಗೆ ಯಾವುದೇ ವ್ಯಾಪಾರ ಮಾಡುವುದಿಲ್ಲ ಎಂದೆ. ಅವು ಪರಮಾಣು ಶಸ್ತ್ರಗಳನ್ನು ಹೊಂದಿರುವ ದೇಶಗಳು. ನಾನು ಹೇಳಿದ ಬಳಿಕ ಯುದ್ಧ ನಿಲ್ಲಿಸಿದರು. ಭಾರತ-ಪಾಕಿಸ್ತಾನ, ಥಾಯ್ಲೆಂಡ್-ಕಾಂಬೋಡಿಯಾ, ಅರ್ಮೇನಿಯಾ- ಅಜೆರ್ಬೈಜಾನ್ ಸೇರಿ 7 ಯುದ್ಧಗಳನ್ನು ನಿಲ್ಲಿಸಿದ್ದೇನೆ. ಪ್ರತಿಯೊಂದಕ್ಕೂ ನನಗೆ ನೊಬೆಲ್ ಪ್ರಶಸ್ತಿ ಸಿಗಬೇಕು’ ಎಂದರು.