ಎಪ್ಸ್ಟೀನ್‌ ಸೆ* ಫೈಲ್‌ಗಳಲ್ಲಿ ಕ್ಲಿಂಟನ್‌, ಜಾಕ್ಸನ್‌ ಫೋಟೋ

KannadaprabhaNewsNetwork |  
Published : Dec 21, 2025, 02:45 AM ISTUpdated : Dec 21, 2025, 04:59 AM IST
epstein

ಸಾರಾಂಶ

ಅಮೆರಿಕ ಹಾಗೂ ವಿಶ್ವ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಎಪ್ಸ್ಟೀನ್‌ ಲೈಂಗಿ* ಹಗರಣದ ಇನ್ನೊಂದು ಸುತ್ತಿನ ಕಡತಗಳು ಬಹಿರಂಗವಾಗಿವೆ. ಈ ಕಡತಗಳಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌, ಪಾಪ್ ತಾರೆ ಮೈಕೆಲ್‌ ಜಾಕ್ಸನ್‌ ಸೇರಿ ಅನೇಕರ ಫೋಟೋಗಳಿದ್ದರೆ, ಸಂಪರ್ಕ ಪುಸ್ತಕದಲ್ಲಿ ಟ್ರಂಪ್‌ ಅವರ ಹೆಸರಿದೆ.

 ವಾಷಿಂಗ್ಟನ್‌: ಅಮೆರಿಕ ಹಾಗೂ ವಿಶ್ವ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಎಪ್ಸ್ಟೀನ್‌ ಲೈಂಗಿಕ ಹಗರಣದ ಇನ್ನೊಂದು ಸುತ್ತಿನ ಕಡತಗಳು ಬಹಿರಂಗವಾಗಿವೆ. ಈ ಕಡತಗಳಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌, ಪಾಪ್ ತಾರೆ ಮೈಕೆಲ್‌ ಜಾಕ್ಸನ್‌ ಸೇರಿ ಅನೇಕರ ಫೋಟೋಗಳಿದ್ದರೆ, ಸಂಪರ್ಕ ಪುಸ್ತಕದಲ್ಲಿ (ಕಾಂಟ್ಯಾಕ್ಟ್‌ ಬುಕ್) ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೆಸರಿದೆ. ಈ ದಾಖಲೆಗಳ ಬಿಡುಗಡೆಗೆ ಅಮೆರಿಕ ಸಂಸತ್ತಿನ ಸದನವಾದ ‘ಕಾಂಗ್ರೆಸ್’, ಟ್ರಂಪ್‌ ಸರ್ಕಾರಕ್ಕೆ ಶುಕ್ರವಾರ ಗಡುವು ವಿಧಿಸಿತ್ತು. ಈ ಪ್ರಕಾರ ದಾಖಲೆಗಳು ಬಿಡುಗಡೆ ಆಗಿವೆ.

ಹಿಂದೆಂದೂ ನೋಡಿರದ ಚಿತ್ರ

ಇದರಲ್ಲಿ ಹಲವು ಈ ಹಿಂದೆಂದೂ ನೋಡಿರದ ಚಿತ್ರಗಳಿದ್ದು, ಅದರಲ್ಲಿ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಬಿಸಿನೀರಿನ ತೊಟ್ಟಿಯಲ್ಲಿ ಒರಗಿ ಕುಳಿತ ಚಿತ್ರವಿದೆ. ಚಿತ್ರದ ಒಂದು ಭಾಗದಲ್ಲಿನ ವ್ಯಕ್ತಿಯನ್ನು ಕಪ್ಪು ಬಣದ್ಣದಿಂದ ಮರೆಮಾಚಲಾಗಿದೆ.

ಮತ್ತೊಂದು ಚಿತ್ರದಲ್ಲಿ, ಕ್ಲಿಂಟನ್ ಕಪ್ಪು ಕೂದಲಿನ ಮಹಿಳೆಯೊಂದಿಗೆ ಈಜುತ್ತಿದ್ದಾರೆ. ಬಹುಶಃ ಈಕೆ ಎಪ್ಸ್ಟೀನ್ ಸಹವರ್ತಿ ಗಿಸ್ಲೇನ್ ಮ್ಯಾಕ್ಸ್‌ವೆಲ್‌ಳಂತೆ ಕಾಣುತ್ತಾಳೆ.ಇನ್ನೊಂದಿಷ್ಟು ಫೋಟೋಗಳಲ್ಲಿ ಪಾಪ್ ತಾರೆ ಮೈಕೆಲ್ ಜಾಕ್ಸನ್ ಹಾಗೂ ಕ್ಲಿಂಟನ್ ಒಟ್ಟಾಗಿ ಕಾಣಿಸಿದ್ದಾರೆ.

ಇನ್ನು ಫೈಲ್‌ಗಳಲ್ಲಿನ ಸಂಪರ್ಕ ಪುಸ್ತಕದಲ್ಲಿ ಟ್ರಂಪ್ ಅವರ ಹೆಸರು ಕಾಣಿಸಿಕೊಂಡಿದೆ. ಆದರೆ ಪುಸ್ತಕ ಯಾರಿಗೆ ಸೇರಿದೆ ಎಂಬುದು ಸ್ಪಷ್ಟವಾಗಿಲ್ಲ.

ಎಪ್ಸ್ಟೀನ್‌ ಹೈಪ್ರೊಫೈಲ್‌ ಲೈಂಗಿಕ ಕಳ್ಳಸಾಗಣೆದಾರ

ಎಪ್ಸ್ಟೀನ್‌ ಹೈಪ್ರೊಫೈಲ್‌ ಲೈಂಗಿಕ ಕಳ್ಳಸಾಗಣೆದಾರನಾಗಿದ್ದು, ಪ್ರತಿಷ್ಠಿತರಿಗೆ ಹುಡುಗಿಯರನ್ನು ಒದಗಿಸುತ್ತಿದ್ದ ಎಂಬ ಆರೋಪವಿದೆ. ಈತ ಲೈಂಗಿಕ ಕಳ್ಳಸಾಗಣೆ ಕೇಸಲ್ಲಿ ಬಂಧಿತನಾಗಿದ್ದಾಗ 2019ರಲ್ಲಿ ಅಮೆರಿಕದ ಜೈಲಲ್ಲೇ ತೀರಿಕೊಂಡಿದ್ದ. ಆತನ ಕೃತ್ಯಗಳ ಕಡತಗಳು ಕಾನೂನು ಹೋರಾಟದಲ್ಲಿ ಸಿಲುಕಿ ರಹಸ್ಯವಾಗಿದ್ದವು. ಆದರೆ ಈಗ ಕೋರ್ಟಿನ ಅನುಮತಿ ಸಿಗುತ್ತಿದ್ದಂತೆಯೇ ಒಂದೊಂದಾಗಿ ಬಯಲಾಗುತ್ತಿವೆ.

ಈ ಮುಂಚಿನ ಕಡತಗಳಲ್ಲಿ ಟ್ರಂಪ್‌ ಹಾಗೂ ಮೈಕ್ರೋಸಾಫ್ಟ್‌ ಮುಖ್ಯಸ್ಥ ಬಿಲ್‌ ಗೇಟ್ಸ್‌ ಕೆಲ ಹುಡುಗಿಯರ ಜತೆ ಕಾಣಿಸಿಕೊಂಡಿರುವ ಚಿತ್ರಗಳು ಬಯಲಾಗಿದ್ದವು.

ಆಯುರ್ವೇದ ಪ್ರಸ್ತಾಪ!:

ಎಪ್ಸ್ಟೀನ್‌ ಕಡತಗಳಲ್ಲಿ ಆಯುರ್ವೇದದ ಪ್ರಸ್ತಾಪವಿದೆ. ಆಯುರ್ವೇದವನ್ನು ಒಂದು ಮಸಾಜ್‌ ತಂತ್ರ ಎಂದು ಕಡತವೊಂದರಲ್ಲಿ ನಮೂದಿಸಲಾಗಿದೆ.

ಕನ್ನಡದ ‘ಅಪ್ಪಾಜಿ’ ಖ್ಯಾತಿಯ ನಟಿ ಆಮನಿ ಬಿಜೆಪಿ ಸೇರ್ಪಡೆ

ಹೈದರಾಬಾದ್‌: ಟಾಲಿವುಡ್‌ನ ಜನಪ್ರಿಯ ಬಹುಭಾಷಾ ನಟಿ ಹಾಗೂ ಕನ್ನಡದ ಅಪ್ಪಾಜಿ ಮತ್ತು ಬಾಳಿನ ಜ್ಯೋತಿ ಚಿತ್ರದಲ್ಲಿ ನಟಿಸಿದ್ದ ಆಮನಿ ಶನಿವಾರ ಬಿಜೆಪಿ ಸೇರಿದರು.ಕೇಂದ್ರ ಸಚಿವ ಜಿ.ಕಿಶನ್‌ ರೆಡ್ಡಿ, ತೆಲಂಗಾಣ ಬಿಜೆಪಿ ಅಧ್ಯಕ್ಷ ಎನ್‌.ರಾಮಚಂದರ್‌ ರಾವ್‌ ಸಮ್ಮುಖ ಇಲ್ಲಿ ಆಮನಿ ಮತ್ತು ಹೆಸರಾಂತ ಪ್ರಸಾದನ ಕಲಾವಿದೆ ಶೋಭಾ ಲತಾ ಕೇಸರಿ ಪಕ್ಷ ಸೇರ್ಪಡೆಯಾದರು.

ಆಮನಿ 1990ರ ದಶಕದ ಜನಪ್ರಿಯ ನಾಯಕ ನಟಿ. ವಿಷ್ಣುವರ್ಧನ್‌ ಅವರ ‘ಅಪ್ಪಾಜಿ’ ಚಿತ್ರದ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಇವರು ಮೇರು ನಟರಾದ ಕಮಲ್‌ ಹಾಸನ್‌, ನಾಗಾರ್ಜುನ ಅಕ್ಕಿನೇನಿ, ಬಾಲಕೃಷ್ಣ, ಜಗಪತಿ ಬಾಬು, ವಿಷ್ಣುವರ್ಧನ್‌ ಅವರ ಜತೆಗೂ ನಟಿಸಿದ್ದಾರೆ.‘ಶುಭ ಸಂಕಲ್ಪಂ’, ‘ಶುಭ ಲಗ್ನಂ’, ‘ಮಿಸ್ಟರ್ ಪೆಲ್ಲಂ’, ‘ಘರಾನಾ ಬುಲ್ಲೋಡು’, ‘ಹಲೋ ಬ್ರದರ್’, ಮೊದಲಾದವು ಆಮನಿ ಅವರ ಪ್ರಮುಖ ಸಿನಿಮಾಗಳು.

ನಿತೀಶ್‌ ಹಿಜಾಬ್ ಎಳೆದಿದ್ದ ವೈದ್ಯೆ ಕರ್ತವ್ಯಕ್ಕೆ ಚಕ್ಕರ್‌

 ಪಟನಾ : ಈ ವಾರದ ಆರಂಭದಲ್ಲಿ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದ ವೇಳೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನೂತನವಾಗಿ ನೇಮಕವಾಗಿದ್ದ ಮಹಿಳಾ ವೈದ್ಯೆ ಡಾ। ನುಸ್ರತ್‌ರ ಹಿಜಾಬ್‌ ಎಳೆದಿದ್ದರು. ತೀವ್ರ ಮಾನಸಿಕ ಒತ್ತಡದಲ್ಲಿ ಸಿಲುಕಿರುವ ನುಸ್ರತ್‌, ಕರ್ತವ್ಯಕ್ಕೆ ಹಾಜರಾಗಲು ಕೊನೆಯ ದಿನವಾಗಿದ್ದ ಶನಿವಾರ ಡ್ಯೂಟಿಗೆ ಗೈರಾಗಿದ್ದಾರೆ.

ಈ ಬಗ್ಗೆ ನುಸ್ರತ್‌ ಹಾಜರಾಗಬೇಕಿದ್ದ ಸರ್ಕಾರಿ ಟಿಬ್ಬಿ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಮಹ್ಫೂಜುರ್ ರೆಹಮಾನ್ ಹೇಳಿಕೆ ನೀಡಿದ್ದು, ‘ಇಂದು ನುಸ್ರತ್‌ ಸೇವಾ ಹಾಜರಾತಿಗೆ ಕೊನೆಯ ದಿನವಾಗಿತ್ತು. ಆದರೆ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಹಾಜರಾಗುವ ಅವಧಿ ವಿಸ್ತರಣೆ ಬಗ್ಗೆ ಸರ್ಕಾರ ಪರಿಗಣಿಸಬಹುದು’ ಎಂದಿದ್ದಾರೆ. 

ಜಾರ್ಖಂಡ್‌ ಆಫರ್:

ಈ ನಡುವೆ ನುಸ್ರತ್‌ಗೆ ಜಾರ್ಖಂಡ್ ಸರ್ಕಾರ ಆಫರ್‌ ನೀಡಿದೆ. ‘ನಮ್ಮಲ್ಲಿ ನುಸ್ರತ್‌ಗೆ 3 ಲಕ್ಷ ರು. ಮಾಸಿಕ ಸಂಬಳ, ಸರ್ಕಾರಿ ಫ್ಲಾಟ್ ಮತ್ತು ಅಪೇಕ್ಷಿತ ಹುದ್ದೆಯೊಂದಿಗೆ ಕೆಲಸ ನೀಡುತ್ತೇವೆ’ ಎಂದು ಜಾರ್ಖಂಡ್ ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ಹೇಳಿದ್ದಾರೆ. 

ರಾಜ್ಯಪಾಲ ಬೇಸರ:

ಸಿಎಂ ಹಿಜಾಬ್‌ ವಿವಾದಕ್ಕೆ ಬಿಹಾರ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಬೇಸರ ವ್ಯಕ್ತಪಡಿಸಿದ್ದು, ‘ಈ ಪ್ರಕರಣದಲ್ಲಿ ವಿವಾದ ಎನ್ನುವ ಪದ ಕೇಳಲು ಬೇಸರವಾಗುತ್ತಿದೆ. ನಿತೀಶ್‌ ವಿದ್ಯಾರ್ಥಿನಿಯರನ್ನು ತನ್ನ ಮಗಳಂತೆ ಪರಿಗಣಿಸುತ್ತಾರೆ. ಒಬ್ಬ ತಂದೆಯಾಗಿ ಅವರು ಮಾಡಿದ್ದರಲ್ಲಿ ತಪ್ಪೇನಿದೆ?’ ಎಂದಿದ್ದಾರೆ.

ಈ ವರ್ಷ ಚಿನ್ನ ಖರೀದಿ ಶೇ.12ರಷ್ಟು ಕುಸಿತ?  

ನವದೆಹಲಿ: ವಿಶ್ವದಲ್ಲೇ ಅತಿದೊಡ್ಡ ಚಿನ್ನದ ಮಾರುಕಟ್ಟೆಯಾದ ಭಾರತದಲ್ಲಿ ಈ ವರ್ಷ ಚಿನ್ನದ ಖರೀದಿ ಶೇ.12ರಷ್ಟು ಕುಸಿಯುವ ನಿರೀಕ್ಷೆ ಇದೆ. ಕಳೆದ ವರ್ಷ 802.8 ಟನ್‌ ಚಿನ್ನ ಖರೀದಿಯಾಗಿತ್ತು. ಈ ಬಾರಿ ಅದು 650-700 ಟನ್‌ಗೆ ಇಳಿಕೆಯಾಗುವ ಸಂಭವವಿದೆ. ಇದಕ್ಕೆ ಚಿನ್ನದ ದರದ ನಾಗಲೋಟವೇ ಮೂಲ ಕಾರಣ ಎಂದು ವಲ್ಡ್‌ ಗೋಲ್ಡ್‌ ಕೌನ್ಸಿಲ್‌ ಇಂಡಿಯಾ ಅಭಿಪ್ರಾಯಪಟ್ಟಿದೆ.

ಈ ವರ್ಷದ ಆರಂಭದಿಂದ ಚಿನ್ನದ ದರ ಶೇ.65ರಷ್ಟು ಹೆಚ್ಚಾಗಿದೆ. ಸದ್ಯ 10 ಗ್ರಾಂ. ಚಿನ್ನದ ದರ 1.32 ಲಕ್ಷ ರು. ದಾಟಿದೆ. ಇಷ್ಟಾದರೂ ಗ್ರಾಹಕರಿಗೆ ಈಗಲೂ 18 ಅಥವಾ 14 ಕ್ಯಾರೆಟ್‌ ಚಿನ್ನದ ಬದಲು 22 ಕ್ಯಾರೆಟ್‌ ಚಿನ್ನವೇ ಅಚ್ಚುಮೆಚ್ಚು. 22 ಕ್ಯಾರೆಟ್‌ ಚಿನ್ನದ ಆಭರಣಗಳನ್ನು ಖರೀದಿಸಲು ಜನ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಎಂದು ಕೌನ್ಸಿಲ್‌ ತಿಳಿಸಿದೆ.ಇನ್ನು ಚಿನ್ನದ ಆಭರಣಗಳ ಖರೀದಿಗೆ ಹೋಲಿಸಿದರೆ ಚಿನ್ನದ ಮೇಲಿನ ಹೂಡಿಕೆಯ ಪ್ರಮಾಣ ಹೆಚ್ಚಾಗಿದೆ. ಮದುವೆ ಸೀಸನ್‌ನ ಹೊರತಾಗಿಯೂ ಚಿನ್ನದ ಖರೀದಿ ಏರುಗತಿ ದಾಖಲಿಸುತ್ತಿಲ್ಲ. ಆದರೆ ಹೂಡಿಕೆಯಾಗಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ
ಆನೆಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ರೈಲು, 7 ಗಜ ಬಲಿ