ನೆಹರು 2 ತಪ್ಪಿಂದಾಗಿ ಪಿಒಕೆ ದೇಶದ ಕೈತಪ್ಪಿತು: ಅಮಿತ್‌ ಶಾ

KannadaprabhaNewsNetwork | Published : Dec 7, 2023 1:15 AM

ಸಾರಾಂಶ

ಪಾಕ್‌ ಆಕ್ರಮಿತ ಕಾಶ್ಮೀರ ನಮ್ಮದೇ: ಗೃಹ ಸಚಿವ. ಕಾಶ್ಮೀರ ಅಸೆಂಬ್ಲಿಯ 24 ಸೀಟು ಪಿಒಕೆಗೆ ಮೀಸಲು

ಪಿಟಿಐ, ನವದೆಹಲಿಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ನಮ್ಮದೇ ಎಂದು ಮತ್ತೊಮ್ಮೆ ಪುನರುಚ್ಚರಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪಿಒಕೆ ಇಂದು ನಮ್ಮ ದೇಶದ ಭೂಭಾಗವಾಗದೇ ಇರುವುದಕ್ಕೆ ದೇಶದ ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರು ಎಸಗಿದ ಎರಡು ಪ್ರಮಾದಗಳೇ ಕಾರಣ ಎಂದು ಕಿಡಿಕಾರಿದ್ದಾರೆ. ಜೊತೆಗೆ ನೆಹರು ಮಾಡಿದ ತಪ್ಪಿನಿಂದಾಗಿ ಜಮ್ಮು ಮತ್ತು ಕಾಶ್ಮೀರದ ಜನರು ಕಷ್ಟ ಅನುಭವಿಸುವಂತಾಯಿತು ಎಂದು ದೂರಿದ್ದಾರೆ.ಬುಧವಾರ ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮೀಸಲು (ತಿದ್ದುಪಡಿ) ಹಾಗೂ ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಪುನರ್‌ವಿಂಗಡನಾ (ತಿದ್ದುಪಡಿ) ಮಸೂದೆ ಕುರಿತು ಮಾತನಾಡಿದ ಅಮಿತ್‌ ಶಾ, ‘ತಿದ್ದುಪಡಿ ಮಸೂದೆಯು ಇಬ್ಬರು ಕಾಶ್ಮೀರಿ ಪಂಡಿತ ಸಮುದಾಯದ ವ್ಯಕ್ತಿಗಳನ್ನು ರಾಜ್ಯ ವಿಧಾನಸಭೆಗೆ ನಾಮನಿರ್ದೇಶನ ಮಾಡಲು ಅವಕಾಶ ಕಲ್ಪಿಸುತ್ತದೆ. ಜೊತೆಗೆ ಪಾಕ್ ಆಕ್ರಮಿತ ಕಾಶ್ಮೀರದಿಂದ ಹೊರಹಾಕಲ್ಪಟ್ಟ ವ್ಯಕ್ತಿಗಳಿಗೆ ಮೀಸಲಿಡಲಾಗುತ್ತದೆ. ಈ ಎರಡೂ ತಿದ್ದುಪಡಿಗಳು ಕಳೆದ 70 ವರ್ಷಗಳಿಂದ ತಮ್ಮ ಹಕ್ಕುಗಳಿಂದ ವಂಚಿತರಾದವರಿಗೆ ನ್ಯಾಯ ದೊರಕಿಸಿಕೊಡುತ್ತವೆ ಮತ್ತು ಸ್ಥಳಾಂತರಗೊಂಡವರಿಗೆ ಶಾಸನಸಭೆಯಲ್ಲಿ ತಮ್ಮ ಧ್ವನಿಯಾಗಲು ಅವಕಾಶ ಕಲ್ಪಿಸುತ್ತವೆ’ ಎಂದರು.

ಜೊತೆಗೆ, ‘ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಜಮ್ಮುಗೆ ಈ ಹಿಂದೆ 37 ಸ್ಥಾನ ಇತ್ತು. ಅದನ್ನು ಇದೀಗ 43ಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ ಕಾಶ್ಮೀರಕ್ಕೆ 46 ಸ್ಥಾನ ಇದ್ದು ಅದನ್ನು 47ಕ್ಕೆ ಹೆಚ್ಚಿಸಲಾಗಿದೆ. ಜೊತೆಗೆ 24 ಸ್ಥಾನಗಳನ್ನು ಪಾಕ್‌ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆಂದೇ ಮೀಸಲಿಡಲಾಗಿದೆ ಏಕೆಂದರೆ ಅದು ನಮ್ಮ ಪ್ರದೇಶ’ ಎಂದು ಹೇಳಿದರು.ಇದೇ ವೇಳೆ ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ ನೆಹರು ಅವರೇ ಕಾರಣ ಎಂದು ಟೀಕಿಸಿದ ಅಮಿತ್‌ ಶಾ, ‘‘ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ನೆಹರು ಎಸಗಿದ ಮೊದಲ ತಪ್ಪೆಂದರೆ 1962ರ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಭಾರತ ಗೆಲುವಿನ ಹಂತದಲ್ಲಿದ್ದಾಗ ಮತ್ತು ಭಾರತೀಯ ಸೇನೆ ಹಾಲಿ ಪಾಕ್‌ನ ಭಾಗವಾಗಿರುವ ಪಂಜಾಬ್‌ ಪ್ರಾಂತ್ಯವನ್ನು ಪ್ರವೇಶಿಸಿದ್ದ ವೇಳೆ ನೆಹರು ಕದನ ವಿರಾಮ ಘೋಷಿಸಿದರು. ಈ ಮೂಲಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನನಕ್ಕೆ ಕಾರಣವಾದರು. ಒಂದು ವೇಳೆ 3 ದಿನಗಳ ಬಳಿಕ ಕದನ ವಿರಾಮ ಘೋಷಿಸಿದ್ದರೆ ಪಾಕ್‌ ಆಕ್ರಮಿತ ಕಾಶ್ಮೀರ ಕೂಡಾ ಭಾರತದ ವಶದಲ್ಲೇ ಇರುತ್ತಿತ್ತು. ಇಡೀ ಕಾಶ್ಮೀರವನ್ನು ಗೆಲ್ಲುವ ಮೊದಲೇ ನೆಹರು ಕದನ ವಿರಾಮ ಘೋಷಿಸಿದರು. ಇದು ಬಹುದೊಡ್ಡ ಪ್ರಮಾದ. ಕದನ ವಿರಾಮ ಘೋಷಿಸಿದ್ದು ತಪ್ಪು ನಿರ್ಧಾರ ಎಂದು ಬಳಿಕ ಸ್ವತಃ ನೆಹರು ಒಪ್ಪಿಕೊಂಡಿದ್ದರು’ ಎಂದು ಶಾ ಹೇಳಿದರು.

ಇನ್ನು, ‘2ನೇ ಪ್ರಮಾದವೆಂದರೆ ಕಾಶ್ಮೀರ ವಿಷಯವನ್ನು ಆತುರಾತುರವಾಗಿ ವಿಶ್ವಸಂಸ್ಥೆ ಬಳಿಗೆ ಕೊಂಡೊಯ್ದಿದ್ದು. ಈ ವಿಷಯವನ್ನು ಭಾರತ ವಿಶ್ವಸಂಸ್ಥೆಯ ಸಂವಿಧಾನದ 51ನೇ ವಿಧಿಯ ಅನ್ವಯ ದಾಖಲಿಸಬೇಕಿತ್ತೇ ವಿನಃ 35ನೇ ವಿಧಿಯ ಅನ್ವಯ ಅಲ್ಲ’ ಎಂದು ಅಮಿತ್‌ ಶಾ ಟೀಕಿಸಿದರು.2 ಪ್ರಮಾದ 1. 1962ರ ಪಾಕ್‌ ವಿರುದ್ಧದ ಯುದ್ಧದಲ್ಲಿ ಗೆಲ್ಲುವ ಮೊದಲೇ ಕದನ ವಿರಾಮ ಘೋಷಿಸಿದ್ದು. ಇದು ತಪ್ಪು ನಿರ್ಧಾರವಾಗಿತ್ತು ಎಂದು ಸ್ವತಃ ನೆಹರು ಹೇಳಿಕೊಂಡಿದ್ದರು.2. ಕಾಶ್ಮೀರ ವಿಷಯವನ್ನು ಆತುರಾತುರವಾಗಿ ವಿಶ್ವಸಂಸ್ಥೆ ಬಳಿಗೆ ಕೊಂಡೊಯ್ದಿದ್ದು. ವಿಶ್ವಸಂಸ್ಥೆಯ 51ನೇ ವಿಧಿ ಬದಲು 35ನೇ ವಿಧಿ ಅನ್ವಯ ದಾಖಲಿಸಿದ್ದು.

Share this article