ನಷ್ಟ ಭರಿಸಿದರಷ್ಟೇ ಸಾರ್ವಜನಿಕ ಆಸ್ತಿ ಹಾನಿಕೋರರಿಗೆ ಜಾಮೀನು?

KannadaprabhaNewsNetwork | Updated : Feb 05 2024, 12:06 PM IST

ಸಾರಾಂಶ

ಪ್ರತಿಭಟನೆ ಹಾಗೂ ಇತರ ಸಂದರ್ಭಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳ ಮೇಲೆ ಹಾನಿ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸಲು ಈಗಿರುವ ಕಾನೂನುಗಳು ತಿದ್ದುಪಡಿ ಆಗಬೇಕು.

ನವದೆಹಲಿ: ಪ್ರತಿಭಟನೆ ಹಾಗೂ ಇತರ ಸಂದರ್ಭಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳ ಮೇಲೆ ಹಾನಿ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸಲು ಈಗಿರುವ ಕಾನೂನುಗಳು ತಿದ್ದುಪಡಿ ಆಗಬೇಕು. 

ಈ ರೀತಿ ಆಸ್ತಿ ಹಾನಿ ಮಾಡುವವರಿಂದ, ಹಾನಿಯಾದ ಆಸ್ತಿಯ ಮೌಲ್ಯವನ್ನು ಸಂಪೂರ್ಣ ವಸೂಲಿ ಮಾಡಬೇಕು. ಇಂಥ ಪ್ರಕರಣಗಳಲ್ಲಿ ಜಾಮೀನು ಬೇಕೆಂದರೂ ಹಾನಿಯಾದ ಆಸ್ತಿಯ ಮೌಲ್ಯದಷ್ಟು ಹಣವನ್ನು ಠೇವಣಿ ಆಗಿರಿಸಿಕೊಂಡು ಜಾಮೀನು ನೀಡಬೇಕು ಎಂದು ಕಾನೂನು ಆಯೋಗವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಆಸ್ತಿಪಾಸ್ತಿ ಹಾನಿ ಸಂದರ್ಭದಲ್ಲಿ ಯಾರು ಪ್ರತಿಭಟನೆಯ ನೇತೃತ್ವ ವಹಿಸಿರುತ್ತಾರೋ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಅವರಿಂದಲೇ ಹಾನಿ ಮೌಲ್ಯವನ್ನು ವಸೂಲು ಮಾಡಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಅದು ಕಳೆದ ಶುಕ್ರವಾರ ಮಾಡಿದ ಶಿಫಾರಸಿನಲ್ಲಿ ಹೇಳಿದೆ.

ಕೇಂದ್ರ ಸರ್ಕಾರ ಕೆಲ ವರ್ಷಗಳ ಹಿಂದೆಯೇ ಇಂತದ್ದೊಂದು ಕಾಯ್ದೆ ಜಾರಿಗೆ ಒಲವು ತೋರಿತ್ತಾದರೂ, ಅದು ಫಲ ಕೊಟ್ಟಿರಲಿಲ್ಲ. ಆದರೆ ಅದಾದ ಬಳಿಕ ವಿವಿಧ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್‌ ಮತ್ತು ಕೆಲ ಹೈಕೋರ್ಟ್‌ಗಳು ಇಂಥ ಘಟನೆ ತಡೆಯಲು ಕೆಲವೊಂದು ನಿರ್ದೇಶನಗಳನ್ನು ನೀಡಿದ್ದವು.

ಈ ಹಿನ್ನೆಲೆಯಲ್ಲಿ ಇದೀಗ ಸ್ವತಃ ಕಾನೂನು ಆಯೋಗವೇ ಆಸ್ತಿಗೆ ಹಾನಿ ಮಾಡಿದ ಪ್ರಕರಣದಲ್ಲಿ ಜಾಮೀನು ಪಡೆಯಲು ಆರೋಪಿಗಳು ಪೂರ್ಣ ಪ್ರಮಾಣದ ದಂಡವನ್ನು ಕಟ್ಟಿಕೊಡುವುದನ್ನು ಕಡ್ಡಾಯಗೊಳಿಸುವ ಕಾಯ್ದೆ ಕುರಿತು ಶಿಫಾರಸು ಮಾಡಿದೆ. 

ಒಂದು ವೇಳೆ ಇಂಥ ಕಾಯ್ದೆ ಜಾರಿಯಾದರೆ ಬಳಿಕ ಉಳಿದವರು ಎಚ್ಚೆತ್ತುಕೊಂಡ ಇಂಥ ಘಟನೆಗಳಿಂದ ಹಿಂದೆ ಸರಿಯುತ್ತಾರೆ ಎಂಬುದು ಕಾಯ್ದೆ ಜಾರಿಯ ಹಿಂದಿನ ಉದ್ದೇಶವಾಗಿದೆ.

ಶಿಫಾರಸು ಏನು?

  • ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರ ವಿರುದ್ಧ ಕ್ರಮ ಆಗಬೇಕು
  • ಇದಕ್ಕಾಗಿ ಈಗಿರುವ ಕಾನೂನುಗಳಿಗೆ ತಿದ್ದುಪಡಿ ಮಾಡಬೇಕು- ಹಾನಿಯಾಗಿರುವ ಆಸ್ತಿಯ ಮೌಲ್ಯವನ್ನು ವಸೂಲು ಮಾಡಬೇಕು
  • ಆಸ್ತಿಯ ಮೌಲ್ಯದಷ್ಟು ಹಣವನ್ನು ಠೇವಣಿ ಮಾಡಿಸಿ ಜಾಮೀನು ಕೊಡಬೇಕು
  • ಇಂತಹ ಕ್ರಮದಿಂದ ಆಸ್ತಿಪಾಸ್ತಿಗೆ ಹಾನಿ ಮಾಡುವವರು ಪಾಠ ಕಲಿಯುತ್ತಾರೆ

Share this article