ಪಿಟಿಐ ನವದೆಹಲಿ: ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ದೇಶದ ಹಲವಾರು ರಾಜಕೀಯ ನಾಯಕರನ್ನು ಆಹ್ವಾನಿಸಲಾಗಿದೆ. ಆದರೆ ಈ ಆಹ್ವಾನವನ್ನು ಎಡಪಕ್ಷಗಳು ತಿರಸ್ಕರಿಸಿವೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿವೆ. ಮತ್ತೊಂದೆಡೆ ರಾಜ್ಯಸಭೆ ಸದಸ್ಯ ಕಪಿಲ್ ಸಿಬಲ್ ಕೂಡ ತಾವು ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದಿದ್ದಾರೆ. ಆಹ್ವಾನ ತಿರಸ್ಕರಿಸುತ್ತಿರುವುದಕ್ಕೆ ಬಿಜೆಪಿ ತಿರುಗೇಟು ಕೊಟ್ಟಿದೆ. ಶ್ರೀರಾಮಚಂದ್ರ ಯಾರ್‍ಯಾರನ್ನು ಕರೆಯುತ್ತಾನೋ ಅವರೆಲ್ಲಾ ಬರುತ್ತಾರೆ ಎಂದು ಟಾಂಗ್ ನೀಡಿದೆ.ಈ ನಡುವೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಆಹ್ವಾನ ಬಂದಿದೆ. ಆದರೆ ಅವರು ಹಾಜರಾಗುತ್ತಾರಾ? ಅಥವಾ ಗೈರು ಹಾಜರಾಗುತ್ತಾರಾ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.ಎಡಪಕ್ಷಗಳ ನಿಲುವೇನು?:ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರಿಗೆ ಆಹ್ವಾನ ಬಂದಿದೆ. ಧರ್ಮ ಎಂಬುದು ವೈಯಕ್ತಿಕ ಆಯ್ಕೆ. ಅದನ್ನು ರಾಜಕೀಯ ಲಾಭ ಗಳಿಸುವ ಸಾಧನ ಮಾಡಿಕೊಳ್ಳಬಾರದು. ಹೀಗಾಗಿ ಯೆಚೂರಿ ಅವರು ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ ಎಂದು ಸಿಪಿಎಂ ಪಾಲಿಟ್‌ಬ್ಯೂರೋ ತಿಳಿಸಿದೆ. ಈ ನಡುವೆ ಸಿಪಿಐ ಕೂಡ ಇದೇ ನಿಲುವು ಹೊಂದಿದೆ ಎನ್ನಲಾಗಿದೆ.ಇದಕ್ಕೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ತಿರುಗೇಟು ನೀಡಿದ್ದು, ಎಲ್ಲರಿಗೂ ಆಹ್ವಾನ ಹೋಗಿದೆ. ಆದರೆ ಶ್ರೀರಾಮ ಯಾರ್‍ಯಾರನ್ನು ಕರೆಯುತ್ತಾನೋ ಅವರು ಆಗಮಿಸುತ್ತಾರೆ ಎಂದಿದ್ದಾರೆ.
ಬಾಬ್ರಿ ಮಸೀದಿ ಸ್ಥಳ ವಾಪಸಿಗೆ ಜ.22ರಂದು ಪ್ರಾರ್ಥನೆ: ಎಸ್‌ಪಿ ಸಂಸದ ಬರ್ಕ್
ನವದೆಹಲಿ: ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಮಮಂದಿರದ ಜ.22ರ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಕರೆದರೂ ತಾವು ಹೋಗುವುದಿಲ್ಲ ಎಂದು ಸಮಾಜವಾದಿ ಪಾರ್ಟಿ ಸಂಸದ ಶಫೀಕುರ್ ರೆಹಮಾನ್ ಬರ್ಕ್ ಹೇಳಿದ್ದಾರೆ.‘ರಾಮಮಂದಿರ ಉದ್ಘಾಟನೆಗೆ ಯಾವುದೇ ಕಾರಣಕ್ಕೂ ನಾನು ಹೋಗಲ್ಲ. ಹಿಂದುಗಳು ಬಲದ ಮೂಲಕ ನಮ್ಮ ಬಾಬ್ರಿ ಮಸೀದಿಯನ್ನು ವಶಪಡಿಸಿಕೊಂಡಿದ್ದಾರೆ. ಜ. 22ರಂದು ನಮ್ಮಿಂದ ಕಿತ್ತುಕೊಂಡಿರುವ ಬಾಬ್ರಿ ಮಸೀದಿಯ ಜಾಗವನ್ನು ನಮಗೆ ಮರಳಿ ಕೊಡಬೇಕು ಎಂದು ನಾವು ಅಲ್ಲಾಹ್‌ನಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇವೆ. ಸುಪ್ರೀಂ ಕೋರ್ಟ್ ಸಹ ನಮ್ಮ ವಿರುದ್ಧ ತೀರ್ಪು ನೀಡಿತ್ತು. ರಾಮ ಮಂದಿರ ಉದ್ಘಾಟನೆ ಮಾನವೀಯತೆಯ ವಿರುದ್ಧವಾಗಿದೆ’ ಎಂದಿದ್ದಾರೆ.