ನ್ಯಾಯಾಂಗಕ್ಕೆ ಮಸಿ ಬಳಿಯಲು ಪ್ರಯತ್ನ: 21 ಮಾಜಿ ಜಡ್ಜ್‌ಗಳಿಂದ ಪತ್ರ

KannadaprabhaNewsNetwork |  
Published : Apr 16, 2024, 02:04 AM ISTUpdated : Apr 16, 2024, 05:55 AM IST
ಚಂದ್ರಚೂಡ್‌ | Kannada Prabha

ಸಾರಾಂಶ

600 ವಕೀಲರ ಪತ್ರದ ಬೆನ್ನಲ್ಲೇ ಸಿಜೆಐಗೆ ಇನ್ನೊಂದು ಪತ್ರ ಬರೆದಿದ್ದು, ನಿವೃತ್ತ ನ್ಯಾಯಾಧೀಶರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

 ನವದೆಹಲಿ :  ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ಇರುವ ಸಾರ್ವಜನಿಕ ವಿಶ್ವಾಸವನ್ನು ಕುಂದಿಸುವ ಮೂಲಕ ನ್ಯಾಯಾಂಗವನ್ನೇ ದುರ್ಬಲಗೊಳಿಸಲು ಕೆಲವು ಬಣಗಳು ಪ್ರಯತ್ನವನ್ನು ತೀವ್ರಗೊಳಿಸಿವೆ ಎಂದು ಕಳವಳ ವ್ಯಕ್ತಪಡಿಸಿ ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ಗಳ 21 ನಿವೃತ್ತ ನ್ಯಾಯಾಧೀಶರು ಒಗ್ಗೂಡಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.

ದೇಶದ ನ್ಯಾಯಾಂಗ ಅಪಾಯದಲ್ಲಿದೆ, ಸ್ಥಾಪಿತ ಹಿತಾಸಕ್ತಿಗಳು ಕೋರ್ಟ್‌ಗಳಿಗೆ ಮಸಿ ಬಳಿಯಲು ಯತ್ನಿಸುತ್ತಿವೆ ಎಂದು ದೇಶದ 600ಕ್ಕೂ ಹೆಚ್ಚು ವಕೀಲರು ಮಾರ್ಚ್ ಅಂತ್ಯದಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದರು. ಅದರ ಬೆನ್ನಲ್ಲೇ 21 ನಿವೃತ್ತ ನ್ಯಾಯಾಧೀಶರು ಈಗ ಪತ್ರ ಬರೆದಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

ಈ ಪತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಇತ್ತೀಚಿನ ತಿಂಗಳುಗಳಲ್ಲಿ ನ್ಯಾಯಾಲಯ ತನ್ನ ಶಕ್ತಿಯನ್ನು ತೋರಿಸಿದೆ. ಹೀಗಾಗಿ ಅದನ್ನು ಬೆದರಿಸುವ, ಗದರಿಸುವ ಪ್ರಧಾನಮಂತ್ರಿ ರೂಪಿತ ಅಭಿಯಾನದ ಭಾಗ ಈ ಪತ್ರವಾಗಿದೆ ಎಂದು ಮೂದಲಿಸಿದೆ.

ಪತ್ರದಲ್ಲೇನಿದೆ?:

ಅತ್ಯಂತ ಯೋಜಿತ ಒತ್ತಡ, ತಪ್ಪು ಮಾಹಿತಿ ಹಾಗೂ ಸಾರ್ವಜನಿಕ ಅಗೌರವದ ಮೂಲಕ ನ್ಯಾಯಾಲಯವನ್ನು ದುರ್ಬಲಗೊಳಿಸಲು ಕೆಲವೊಂದು ಬಣಗಳು ಪ್ರಯತ್ನಗಳನ್ನು ತೀವ್ರಗೊಳಿಸಿವೆ. ಸಂಕುಚಿತ ರಾಜಕೀಯ ಹಿತಾಸಕ್ತಿ ಹಾಗೂ ವೈಯಕ್ತಿಕ ಲಾಭ ಗಳಿಕೆಯಿಂದ ಈ ಟೀಕಾಕಾರರು ಪ್ರೇರಿತರಾಗಿದ್ದಾರೆ. ನ್ಯಾಯಾಂಗದ ಮೇಲಿನ ಸಾರ್ವಜನಿಕ ಗೌರವವನ್ನು ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಪತ್ರದಲ್ಲಿ ದೂರಲಾಗಿದೆ.

ಪತ್ರ ಬರೆದವರಲ್ಲಿ ನಾಲ್ವರು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಾಧೀಶರು ಇದ್ದಾರೆ. ಅವೆಂದರೆ- ನ್ಯಾ। ದೀಪಕ್‌ ವರ್ಮಾ, ಕೃಷ್ಣ ಮುರಾರಿ, ದಿನೇಶ್‌ ಮಹೇಶ್ವರಿ ಹಾಗೂ ಎಂ.ಆರ್‌.ಶಾ. ಆದರೆ ತಾವು ಪತ್ರ ಬರೆಯುವುದಕ್ಕೆ ಕಾರಣವಾದ ನಿರ್ದಿಷ್ಟ ಘಟನೆಯನ್ನು 21 ನಿವೃತ್ತ ನ್ಯಾಯಾಧೀಶರು ಉಲ್ಲೇಖಿಸಿಲ್ಲ.

ಪ್ರತಿಪಕ್ಷಗಳ ಕೆಲವು ನಾಯಕರ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳಲ್ಲಿ ಕ್ರಮಗಳು ಆದ ಬಳಿಕ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ನಾಯಕರ ನಡುವೆ ವಾಗ್ಯುದ್ಧವೇ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಈ ಪತ್ರವನ್ನು ಬರೆಯಲಾಗಿದೆ.

ಕಾಂಗ್ರೆಸ್‌ ತಿರುಗೇಟು:

ಚುನಾವಣಾ ಬಾಂಡ್‌ ಯೋಜನೆಯನ್ನು ನ್ಯಾಯಾಲಯ ಇತ್ತೀಚೆಗೆ ದೇಶದ ಅತಿದೊಡ್ಡ ಭ್ರಷ್ಟಾಚಾರ ಹಗರಣ ಎಂದು ಕರೆದಿದೆ. ಮಣಿಪುರದಲ್ಲಿ ಸಾಂವಿಧಾನಿಕ ಸಂಸ್ಥೆ ಕುಸಿದುಬಿದ್ದಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಅಪನಗದೀಕರಣವನ್ನು ಹಾಲಿ ಜಡ್ಜ್‌ವೊಬ್ಬರು ಟೀಕಿಸಿದ್ದಾರೆ. ಪತ್ರ ಬರೆದವರಿಗೆ ಅದೇ ಟಾರ್ಗೆಟ್‌. ಹೀಗಾಗಿ ಮೋದಿ ಮಿತ್ರರಾದ ನಿವೃತ್ತ ನ್ಯಾಯಾಧೀಶರು 600 ವಕೀಲರ ಜತೆ ಈ ಪತ್ರವನ್ನು ಬರೆದಿದ್ದಾರೆ. ಇದು ನ್ಯಾಯಾಂಗವನ್ನು ಬೆದರಿಸುವ, ಗದರಿಸುವ ಕೃತ್ಯವಾಗಿದೆ ಎಂದು ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಟೀಕಿಸಿದ್ದಾರೆ.

ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಅತಿದೊಡ್ಡ ಅಪಾಯ ಎದುರಾಗಿರುವುದು ಬಿಜೆಪಿಯಿಂದ. ನಿವೃತ್ತ ನ್ಯಾಯಾಧೀಶರ ಪತ್ರಕ್ಕೆ ಸಹಿ ಹಾಕಿರುವ 4ನೇ ಹೆಸರನ್ನು ನೋಡಿ. ನ್ಯಾಯಾಧೀಶರಾಗಿದ್ದಾಗ ಪ್ರಧಾನಿ ಬಗ್ಗೆ ಅವರು ಏನು ಹೇಳಿದ್ದರು? ಅದರಿಂದಲೇ ಪತ್ರ ಉದ್ದೇಶ ಗೊತ್ತಾಗಿಬಿಡುತ್ತದೆ ಎಂದು ನ್ಯಾ। ಎಂ.ಆರ್‌.ಶಾ ಹೆಸರೆತ್ತದೆ ಟೀಕಿಸಿದ್ದಾರೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ