1500 ಜನರ ಊರಿನಲ್ಲಿ ಮೂರೇ ತಿಂಗ್ಳಲ್ಲಿ 27000 ಮಕ್ಕಳ ಜನನ!

KannadaprabhaNewsNetwork |  
Published : Dec 19, 2025, 03:15 AM ISTUpdated : Dec 19, 2025, 04:38 AM IST
Birth

ಸಾರಾಂಶ

1500 ಜನಸಂಖ್ಯೆ ಇರುವ ಪುಟ್ಟ ಗ್ರಾಮವೊಂದರಲ್ಲಿ 3 ತಿಂಗಳಲ್ಲಿ ಎಷ್ಟು ಮಕ್ಕಳು ಜನ್ಮತಾಳಬಹುದು? 10, 20, ಹೆಚ್ಚೆಂದರೆ 50. ಆದರೆ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಕೇವಲ ಮೂರೇ ತಿಂಗಳಲ್ಲಿ ಭರ್ಜರಿ 27397 ಮಕ್ಕಳು ಜನಿಸಿದ್ದಾರೆ!

 ಮುಂಬೈ: 1500 ಜನಸಂಖ್ಯೆ ಇರುವ ಪುಟ್ಟ ಗ್ರಾಮವೊಂದರಲ್ಲಿ 3 ತಿಂಗಳಲ್ಲಿ ಎಷ್ಟು ಮಕ್ಕಳು ಜನ್ಮತಾಳಬಹುದು? 10, 20, ಹೆಚ್ಚೆಂದರೆ 50. ಆದರೆ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಕೇವಲ ಮೂರೇ ತಿಂಗಳಲ್ಲಿ ಭರ್ಜರಿ 27397 ಮಕ್ಕಳು ಜನಿಸಿದ್ದಾರೆ!

ಹೌದು, ಈ ಲೆಕ್ಕಾಚಾರ ನೋಡಿ ಸ್ವತಃ ಸರ್ಕಾರವೇ ದಂಗಾಗಿ ಹೋಗಿದೆ.

ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಅರ್ನಿ ತಾಲೂಕಿನ ಶೇಂದುರಸಾನಿ ಗ್ರಾಮ ಪಂಚಾಯತಿಯಲ್ಲಿ ಇಂಥದ್ದೊಂದು ಅಚ್ಚರಿಯ ಬೆಳವಣಿಗೆ ನಡೆದಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಜನನ ಮತ್ತು ಮರಣ ನೋಂದಣಿಯಲ್ಲಿ ಆಗಿರುವ ವಿಳಂಬ ಪತ್ತೆ ಮಾಡಲು ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರ ಅಭಿಯಾನವೊಂದನ್ನು ಆರಂಭಿಸಿತ್ತು. ಈ ವೇಳೆ ಶೇಂದುರಸಾನಿ ಗ್ರಾಮದಲ್ಲಿ ಆಗಿರುವ ಜನನ ಮತ್ತು ಮರಣ ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಏಕೆಂದರೆ ಕೇವಲ 1500 ಜನಸಂಖ್ಯೆಯ ಈ ಗ್ರಾಮದಲ್ಲಿ ಸೆಪ್ಟೆಂಬರ್‌ - ನವೆಂಬರ್‌ ಅವಧಿಯಲ್ಲಿ 27397 ಮಕ್ಕಳ ಜನನವಾಗಿದ್ದರೆ, 7 ಜನರ ಸಾವು ಸಂಭವಿಸಿದ್ದು ಕಂಡುಬಂದಿದೆ. ಜನನ ಮತ್ತು ಮರಣ ನೋಂದಣಿಗೆ ಇರುವ ಸಿವಿಲ್ ರಿಜಿಸ್ಟ್ರೇಶನ್ ಸಿಸ್ಟಂನಲ್ಲಿ (ಸಿಆರ್‌ಎಸ್‌) ಈ ಲೆಕ್ಕಾಚಾರ ಕಂಡುಬಂದಿದೆ.

ತನಿಖೆ:

ಈ ಲೆಕ್ಕಾಚಾರದ ಬಗ್ಗೆ ಭಾರೀ ಅನುಮಾನದ ಬಂದು ತನಿಖೆ ನಡೆಸಿದ ವೇಳೆ, ಶೇಂದುರಸಾನಿ ಗ್ರಾಮ ಪಂಚಾಯ್ತಿಯ ಸಿಆರ್‌ಎಸ್‌ ಲಾಗಿನ್‌ ಅನ್ನು ಸೈಬರ್‌ ವಂಚಕರು ಹ್ಯಾಕ್ ಮಾಡಿರುವುದು ಪತ್ತೆಯಾಗಿದೆ. ಮುಂಬೈನ ತಂಡವೊಂದು ಈ ಗ್ರಾಪಂನ ಸಿಆರ್‌ಎಸ್‌ ಲಾಗಿನ್‌ ಹ್ಯಾಕ್‌ ಮಾಡಿ, ಭಾರೀ ಪ್ರಮಾಣದಲ್ಲಿ ಜನನ ನೋಂದಣಿ ಮಾಡಿರುವುದು ಕಂಡುಬಂದಿದೆ.

ಹ್ಯಾಕ್‌ ಏಕೆ?:

ನಕಲಿ ದಾಖಲಾತಿಗಳನ್ನು ಸೃಷ್ಟಿಸಲು ಜನನ ಮತ್ತು ಮರಣ ಪ್ರಮಾಣ ಪತ್ರದ ಅಗತ್ಯವಿದೆ. ಹೀಗಾಗಿ ಸೈಬರ್ ವಂಚಕರು ಈ ಗ್ರಾಮದಲ್ಲಿ 27000ಕ್ಕೂ ಹೆಚ್ಚು ಜನರು ಜನಿಸುವುದಾಗಿ ನಕಲಿ ದಾಖಲೆ ಸೃಷ್ಟಿಸಲು ಹ್ಯಾಕ್‌ ಮಾಡಿದ್ದು ಕಂಡುಬಂದಿದೆ. ಹೀಗೆ ಹ್ಯಾಕ್‌ ಮಾಡಿ ಜನನ ಪ್ರಮಾಣ ಪತ್ರ ಸೃಷ್ಟಿಯಾದವರಲ್ಲಿ ಬಹುತೇಕ ಹೆಸರು ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದವರದ್ದು ಎಂದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇನ್ನಷ್ಟು ವಿಸ್ತೃತ ತನಿಖೆಗೆ ಆದೇಶಿಸಿದೆ.

ಇದು ಹೇಗೆ ಸಾಧ್ಯ?

- ಜನನ ಪತ್ರ ಸೃಷ್ಟಿಸಿಕೊಡುವ ದಂಧೆಕೋರರಿಂದ ಮಹಾರಾಷ್ಟ್ರದ ಶೇಂದುರಸಾನಿ ಗ್ರಾಪಂ ವೆಬ್‌ ಹ್ಯಾಕ್‌

- ಪಶ್ಚಿಮ ಬಂಗಾಳ, ಉತ್ತರಪ್ರದೇಶದವರ ಹೆಸರಿನಲ್ಲಿ ಜನನ ಪ್ರಮಾಣ ಪತ್ರ ಸೃಷ್ಟಿಸಿರುವ ಹ್ಯಾಕರ್‌ಗಳು

- ಜನನ- ಮರಣ ನೋಂದಣಿ ಬಗ್ಗೆ ಮಹಾರಾಷ್ಟ್ರ ಸರ್ಕಾರ ಪರಿಶೀಲನೆ ನಡೆಸಿದಾಗ ಅಕ್ರಮ ಬೆಳಕಿಗೆ

- ಸೆಪ್ಟೆಂಬರ್‌- ನವೆಂಬರ್‌ ಅವಧಿಯಲ್ಲಿ ಶೇಂದುರಸಾನಿ ಗ್ರಾಮ ಪಂಚಾಯಿತಿಯಲ್ಲಿ 27397 ಮಕ್ಕಳ ಜನನ

- ಹ್ಯಾಕ್‌ ಆಗಿರುವುವುದು ಪತ್ತೆ. ಈ ಬಗ್ಗೆ ವಿಸ್ತೃತ ತನಿಖೆಗೆ ಆದೇಶಿಸಿದ ಮಹಾರಾಷ್ಟ್ರದ ಎನ್‌ಡಿಎ ಸರ್ಕಾರ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!