ದೀದಿ ಸೋದರಳಿಯಗೆ ಬೀದಿಯಲ್ಲೇ ಏಟು!

Published : May 31, 2026, 08:47 AM IST
Mamata Banerjee Abhishek Banerjee

ಸಾರಾಂಶ

ಚುನಾವಣೋತ್ತರ ಹಿಂಸಾಚಾರಕ್ಕೆ ತುತ್ತಾಗಿದ್ದ ಪಕ್ಷದ ಕಾರ್ಯಕರ್ತರ ಮನೆಗೆ ತೆರಳಿದ್ದ ಟಿಎಂಸಿ ನಂ.2 ನಾಯಕ ಹಾಗೂ ಪ.ಬಂಗಾಳ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್‌ ಬ್ಯಾನರ್ಜಿ ಮೇಲೆ ಗುಂಪೊಂದು ಕಲ್ಲು, ಚಪ್ಪಲಿ, ಮೊಟ್ಟೆಯಿಂದ ದಾಳಿ ಮಾಡಿ, ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

  ಕೋಲ್ಕತಾ :  ಚುನಾವಣೋತ್ತರ ಹಿಂಸಾಚಾರಕ್ಕೆ ತುತ್ತಾಗಿದ್ದ ಪಕ್ಷದ ಕಾರ್ಯಕರ್ತರ ಮನೆಗೆ ತೆರಳಿದ್ದ ಟಿಎಂಸಿ ನಂ.2 ನಾಯಕ ಹಾಗೂ ಪ.ಬಂಗಾಳ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್‌ ಬ್ಯಾನರ್ಜಿ ಮೇಲೆ ಗುಂಪೊಂದು ಕಲ್ಲು, ಚಪ್ಪಲಿ, ಮೊಟ್ಟೆಯಿಂದ ದಾಳಿ ಮಾಡಿ, ಹಲ್ಲೆಗೆ ಯತ್ನಿಸಿದ ಘಟನೆ ಸೋನಾರ್ಪುರ್ ದಕ್ಷಿಣದಲ್ಲಿ ಶನಿವಾರ ನಡೆದಿದೆ.

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯನೂ ಆಗಿರುವ ಅಭಿಷೇಕ್‌, ಪಕ್ಷದ ಕಾರ್ಯಕರ್ತನೊಬ್ಬನ ಮನೆಗೆ ಭೇಟಿ ನೀಡಲು ಬೈಕ್‌ನಲ್ಲಿ ತೆರಳಿದ್ದರು. ಈ ವೇಳೆ ಗುಂಪೊಂದು ಕಳ್ಳ ಕಳ್ಳ ಎಂದು ಘೋಷಣೆ ಕೂಗುತ್ತಾ ಅಭಿಷೇಕ್ ಮೇಲೆ ಕಲ್ಲು, ಚಪ್ಪಲಿ, ಮೊಟ್ಟೆಗಳನ್ನು ಎಸೆದಿದೆ.

ಇದರ ಹೊರತಾಗಿಯೂ ಸ್ವಲ್ಪ ದೂರ ಬೈಕ್‌ನಲ್ಲೇ ಸಾಗಿದ ಅಭಿಷೇಕ್‌ ಬಳಿಕ ಬೈಕ್‌ನಿಂದ ಇಳಿದು ಕಾರ್ಯಕರ್ತನ ಮನೆಗೆ ನಡೆದು ಹೋಗುವ ವೇಳೆ ಅವರನ್ನು ಗುರಿಯಾಗಿಸಿ ಹಲ್ಲೆ ಯತ್ನ ನಡೆಸಲಾಗಿದೆ.

ಈ ವೇಳೆ ಅಭಿಷೇಕ್‌ರನ್ನು ಸುತ್ತುವರೆದ ರಕ್ಷಣೆ ನೀಡಿದ ಪೊಲೀಸ್‌ ಸಿಬ್ಬಂದಿ, ತಮ್ಮ ಹೆಲ್ಮೆಟ್‌ ಅನ್ನು ಟಿಎಂಸಿ ನಾಯಕನಿಗೆ ತೊಡಿಸಿ ಅವರಿಗೆ ಯಾವುದೇ ಅಪಾಯವಾಗದಂತೆ ತಡೆದು ಸುರಕ್ಷಿತವಾಗಿ ಸ್ಥಳದಿಂದ ತೆರವು ಮಾಡಿದರು.

ಬಳಿಕ ಘಟನೆ ಬಗ್ಗೆ ಮಾತನಾಡಿದ ಅಭಿಷೇಕ್‌, ‘ಬಿಜೆಪಿ ಅಧಿಕಾರಕ್ಕೆ ಬಂದು ತಿಂಗಳೂ ಆಗಿಲ್ಲ, ಆಗಲೇ ಅವರ ರೀತಿಯ ಪ್ರಜಾಪ್ರಭುತ್ವವನ್ನು ತೋರಿಸಿದ್ದಾರೆ. ಇದು ನನ್ನನ್ನು ಕೊಲ್ಲುವ ಯತ್ನವಾಗಿದ್ದು, ನಡೆದದ್ದೆಲ್ಲಾ ರೆಕಾರ್ಡ್‌ ಆಗಿದೆ. ಇದನ್ನು ಗವರ್ನರ್‌ ಗಮನಕ್ಕೆ ತರುವೆ ಹಾಗೂ ಕೋರ್ಟ್‌ಗೂ ಹೋಗುವೆ’ ಎಂದಿದ್ದಾರೆ.

ದಾಳಿ ಏಕೆ?:

ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಗುಂಪು, ಈ ಹಿಂದೆ ಟಿಎಂಸಿ ಆಡಳಿತದಲ್ಲಿ ನಡೆದ ಸ್ಥಳೀಯ ನಾಯಕರ ದೌರ್ಜನ್ಯ, ಸುಲಿಗೆ ದಂಧೆಯಿಂದ ಆಕ್ರೋಶಗೊಂಡಿತ್ತು. ಜೊತೆಗೆ ಕಳಪೆ ಆಡಳಿತ, ಹದಗೆಟ್ಟ ರಸ್ತೆ ಮತ್ತು ಅಸಮರ್ಪಕ ಕುಡಿಯುವ ನೀರಿನ ಸಮಸ್ಯೆಯಿಂದ ಬೇಸತ್ತಿತ್ತು. ಇದೇ ಕಾರಣಕ್ಕೆ ಮಮತಾ ಸರ್ಕಾರದಲ್ಲಿ ನಂ.2 ನಾಯಕನಾಗಿದ್ದ ಅಭಿಷೇಕ್ ಮೇಲೆ ದಾಳಿಗೆ ಯತ್ನಿಸಿತು ಎನ್ನಲಾಗಿದೆ.

ಆಗಿದ್ದೇನು?

- ಚುನಾವಣೆ ವಳಿಕ ಹಲವು ಟಿಎಂಸಿ ಕಾರ್ಯಕರ್ತರ ಮೇಲೆ ಹಲ್ಲೆ ಆಗಿತ್ತು

- ಅವರ ಮನೆಗೆ ಸಾಂತ್ವನ ಹೇಳಲು ಅಭಿಷೇಕ್‌ ಸೋನಾರ್‌ಪುರ ಗ್ರಾಮಕ್ಕೆ

- ಈ ವೇಳೆ ಅವರನ್ನು ಅಡ್ಡಗಟ್ಟಿದ ಗುಂಪಿನಿಂದ ಕಕ್ಳ ಕಳ್ಳ ಎಂದು ಕೂಗಿ ಹಲ್ಲೆ

- ಆಗ ಪೊಲೀಸರಿಂದ ತಮ್ಮ ಹೆಲ್ಮೆಟ್ಟನ್ನು ಅವರಿಗೆ ತೊಡಿಸಿ ಪೊಲೀಸ್ ರಕ್ಷಣೆ

- ಟಿಎಂಸಿ ಆಡಳಿತದಲ್ಲಿ ನಡೆದ ದೌರ್ಜನ್ಯಕ್ಕೆ ಒಳಗಾದವರಿಂದ ಕೃತ್ಯ ಶಂಕೆ

- ಆದರೆ ಬಿಜೆಪಿಯಿಂದ ನನ್ನ ಹತ್ಯೆಗೆ ಸಂಚು, ಕೋರ್ಟಿಗೆ ಹೋಗುವೆ: ಅಭಿಷೇಕ್‌

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿಯುಇಟಿ ವೇಳೆ ಭಾರಿ ತಾಂತ್ರಿಕ ಸಮಸ್ಯೆ - ಎನ್‌ಟಿಎ ಪರೀಕ್ಷೆಯಲ್ಲಿ ಮತ್ತೆ ಅವ್ಯವಸ್ಥೆ
ಪಾಕ್‌ನ ದಾದುನಲ್ಲಿ ದಾಖಲೆಯ 51.5° ಸೆ. ಉಷ್ಣ