ಸೋಮವಾರ ಕಾಕ್ರೋಕ್ ಜನತಾ ಪಾರ್ಟಿ (ಸಿಜೆಪಿ) ಹಮ್ಮಿಕೊಂಡಿದ್ದ ಸಂಸತ್ ಚಲೋ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಭಾರೀ ದೌರ್ಜನ್ಯ ಎಸಗಿದ್ದಾರೆ ಎಂಬ ಟೀಕೆಗಳ ನಡುವೆಯೇ, ಶಾಂತಿ ಕಾಪಾಡುವ ವೇಳೆ 100ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.
- ಭದ್ರತಾ ಸಿಬ್ಬಂದಿಯತ್ತ ಕಲ್ಲು, ಶೂ ತೂರಾಟ
- ಆರ್‌ಎಎಫ್ ಮಹಿಳಾ ಸಿಬ್ಬಂದಿ ಕೈ ಫ್ರ್ಯಾಕ್ಚರ್---
- ಮೊನ್ನೆ ದೆಹಲಿಯಲ್ಲಿ ನಡೆದಿದ್ದ ಜಿರಳೆ ಪಾರ್ಟಿ ಹೋರಾಟ- ಕೇಂದ್ರ ಶಿಕ್ಷಣ ಸಚಿವ ಪ್ರಧಾನ್ ರಾಜೀನಾಮೆಗೆ ಬಿಗಿಪಟ್ಟು
- ಈ ವೇಳೆ ಭಾರಿ ಹಿಂಸಾತ್ಮಕ ಪ್ರತಿಭಟನೆ, ಕಲ್ಲು ತೂರಾಟ- ರಸ್ತೆ ಮಧ್ಯದ ಬ್ಯಾರಿಕೇಡ್ ಮುರಿದು ಶಾಂತಿ ಕದಡಲು ಯತ್ನ
- ಘರ್ಷಣೆ ವೇಳೆ 120 ಪೊಲೀಸರಿಗೆ ಪೆಟ್ಟ, ಆಸ್ಪತ್ರೆಗೆ ದಾಖಲು--
ನವದೆಹಲಿ: ಸೋಮವಾರ ಕಾಕ್ರೋಕ್ ಜನತಾ ಪಾರ್ಟಿ (ಸಿಜೆಪಿ) ಹಮ್ಮಿಕೊಂಡಿದ್ದ ಸಂಸತ್ ಚಲೋ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಭಾರೀ ದೌರ್ಜನ್ಯ ಎಸಗಿದ್ದಾರೆ ಎಂಬ ಟೀಕೆಗಳ ನಡುವೆಯೇ, ಶಾಂತಿ ಕಾಪಾಡುವ ವೇಳೆ 100ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.ಸಿಜೆಪಿ ನಾಯಕರು ಸೋಮವಾರದ ಪ್ರತಿಭಟನೆಗೆ ಅನುಮತಿ ಪಡೆಯದೆಯೇ ಸಂಸತ್ ಭವನದತ್ತ ನುಗ್ಗಲು ಪ್ರಯತ್ನಿಸಿದ್ದರು. ಈ ವೇಳೆ ಅತ್ಯಂತ ಸೂಕ್ಷ್ಮ ಪ್ರದೇಶವಾದ ಸಂಸತ್ ಭವನ ಮತ್ತು ಅಲ್ಲಿನ ಸದಸ್ಯರನ್ನು ಕಾಪಾಡುವ ಹೊಣೆ ಹೊತ್ತಿದ್ದ ಪೊಲೀಸರು, 20000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರ ತಡೆಯಲು ಆಯಕಟ್ಟಿನ ಜಾಗಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದರು.
ಈ ವೇಳೆ ಪೊಲೀಸರ ಹಲವು ಬಾರಿ ಎಚ್ಚರಿಕೆ ನೀಡಿದ ಹೊರತಾಗಿಯೂ ಪ್ರತಿಭಟನಾಕಾರರು ಬ್ಯಾರಿಕೇಡ್ ಹತ್ತಿ ಸಂಸತ್ ಭವನದತ್ತ ನುಗ್ಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಅವರನ್ನು ತಡೆಯಲು ಯತ್ನಿಸಿದ ವೇಳೆ ಪೊಲೀಸರ ಮೇಲೆ ಕಲ್ಲು ಹಾಗೂ ಇತರೆ ವಸ್ತುಗಳಿಂದ ದಾಳಿ ಮಾಡಲಾಗಿದೆ. ಜೊತೆಗೆ ಕ್ಷಿಪ್ರಕಾರ್ಯ ಪಡೆಯ ಸಿಬ್ಬಂದಿಯೊಬ್ಬರನ್ನು ನೂರಾರು ಗುಂಪೊಂದು ಮುತ್ತಿಗೆ ಹಾಕಿ ಅವರನ್ನು ಮನಬಂದಂತೆ ಥಳಿಸಿದ ಘಟನೆಯ ವಿಡಿಯೋ ಕೂಡಾ ಸೆರೆಯಾಗಿದೆ. ಹೀಗೆ ಪ್ರತಿಭಟನಾಕಾರರ ದಾಳಿಯ ವೇಳೆ 118 ಪೊಲೀಸರು ಗಾಯಗೊಂಡಿದ್ದು, ಈ ಪೈಕಿ ಹಲವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಕೈ ಮುರಿದುಕೊಂಡ ಆರ್‌ಎಎಫ್ ಸಿಬ್ಬಂದಿ:
ಪ್ರತಿಭಟನಾಕಾರರನ್ನು ನಿಯಂತ್ರಿಸುವ ಯತ್ನದಲ್ಲಿ ಕ್ಷಿಪ್ರ ಕಾರ್ಯಪಡೆಯ ಸಹಾಯಕ ಕಮಾಂಡೆಂಟ್ ಸೋನಿಯಾ ಸೆಹ್ರಾವತ್ ಅವರ ಎಡಗೈ ಮುರಿದಿದೆ. ‘ನೂಕುನುಗ್ಗಲಿನ ನಡುವೆ ಕಾಲ್ತುಳಿತದಿಂದ ಯುವತಿಯೊಬ್ಬರನ್ನು ರಕ್ಷಿಸುತ್ತಿದ್ದ ವೇಳೆ ನನ್ನ ಕೈಗೆ ಏಟಾಯಿತು’ ಎಂದಿರುವ ಅವರು, ‘ಪ್ರತಿಭಟನಾಕಾರರಲ್ಲಿ ವಿದ್ಯಾರ್ಥಿಗಳ ನಡುವೆ ಕೆಲ ಸಮಾಜಘಾತುಕ ಶಕ್ತಿಗಳೂ ಸೇರಿಕೊಂಡಿದ್ದವು. ಅವರು ಪ್ರಚೋದನಾಕಾರಿ ಹೇಳಿಕೆಗಳ ಮೂಲಕ ಶಾಂತಿ ಕದಡುತ್ತಿದ್ದರು. ಇಂಥವರ ಪತ್ತೆಯೇ ಸವಾಲಾಗಿತ್ತು. ಕೆಲವರು ಬ್ಯಾರಿಕೇಡ್‌ಗಳನ್ನು ಮುರಿದರೆ, ಇನ್ನೂ ಕೆಲವರು ನಮ್ಮ ಹೆಲ್ಮೆಟ್ ಕಸಿಯಲು ಯತ್ನಿಸಿದರು. ಕಲ್ಲು ಹಾಗೂ ಶೂ ಎಸೆಯಲಾಯಿತು’ ಎಂದು ಪರಿಸ್ಥಿತಿಯನ್ನು ವಿವರಿಸಿದ್ದಾರೆ.