ಜಕಾರ್ತಾ: ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದ ಪ್ರೌಢಶಾಲೆಯೊಂದರ ಮಸೀದಿಯಲ್ಲಿ ಸ್ಫೋಟ ಸಂಭವಿಸಿ ವಿದ್ಯಾರ್ಥಿಗಳು ಸೇರಿ 54 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ಜಕಾರ್ತಾದ ಎಸ್‌ಎಂಎ 27 ಪ್ರೌಢಶಾಲೆಯ ಮಸೀದಿಯಲ್ಲಿ ಮಧ್ಯಾಹ್ನ ಧರ್ಮೋಪದೇಶ ಪ್ರಾರಂಭವಾಗುತ್ತಿದ್ದಂತೆಯೇ 2 ದೊಡ್ಡ ಸ್ಫೋಟಗಳು ಕೇಳಿಬಂದವು. ಮಸೀದಿಯಲ್ಲಿ ಹೊಗೆ ತುಂಬುತ್ತಿದ್ದಂತೆ ವಿದ್ಯಾರ್ಥಿಗಳು ಭಯಭೀತರಾಗಿ ಹೊರಗೆ ಓಡಿಹೋಗಿದ್ದಾರೆ. ಸ್ಫೋಟದಿಂದಾಗಿ ಕನಿಷ್ಠ 54 ಜನ ಗಾಯಗೊಂಡಿದ್ದಾರೆ.
ಚಿಕಿತ್ಸೆ ಬಳಿಕ ಹಲವರನ್ನು ಮನೆಗೆ ಕಳಿಸಲಾಗಿದ್ದು, 20 ವಿದ್ಯಾರ್ಥಿಗಳು ಇನ್ನೂ ಆಸ್ಪತ್ರೆಯಲ್ಲೇ ಇದ್ದಾರೆ. ಅವರಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಂಬ್ ನಿಗ್ರಹ ದಳವು ಮಸೀದಿಯ ಬಳಿ ಆಟಿಕೆ ರೈಫಲ್‌ಗಳು ಮತ್ತು ಆಟಿಕೆ ಗನ್ ಅನ್ನು ಪತ್ತೆಹಚ್ಚಿದೆ.
ಸ್ಫೋಟದ ಕಾರಣ ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ.
ನವದೆಹಲಿ: ಅನಿಲ್ ಅಂಬಾನಿ ಒಡೆತನ ರಿಲಯನ್ಸ್ ಪವರ್‌ಗೆ ಸಂಕಷ್ಟಗಳ ಸರಣಿ ಮುಂದುವರೆದಿದೆ. 68 ಕೋಟಿ ರು.ಗಳಿಗೆ ಬ್ಯಾಂಕ್‌ಗೆ ನಕಲಿ ಗ್ಯಾರಂಟಿ ನೀಡಿದ ಆರೋಪದಲ್ಲಿ ಕೋಲ್ಕತಾದ ಅಮರ್ ನಾಥ್ ದತ್ತ ಎಂಬುವರನ್ನು ಇ.ಡಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧನಕ್ಕೊಳಗಾದವರ ಸಂಖ್ಯೆ 3ಕ್ಕೇರಿಕೆಯಾಗಿದೆ.ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇವರನ್ನು ಬಂಧಿಸಲಾಗಿದ್ದು, ಕೋರ್ಟು 4 ದಿನಗಳ ಕಾಲ ಇ.ಡಿ ವಶಕ್ಕೆ ನೀಡಿದೆ. ಈ ಕೇಸಲ್ಲಿ ರಿಲಯನ್ಸ್ ಪವರ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಕುಮಾರ್ ಪಾಲ್, ಒಡಿಶಾ ಮೂಲದ ಬಿಸ್ವಾಲ್ ಟ್ರೇಡ್‌ಲಿಂಕ್ ಎಂಬ ಕಂಪನಿಯ ಮುಖ್ಯಸ್ಥ ಪಾರ್ಥ ಸಾರಥಿ ಬಿಸ್ವಾಲ್ ಎಂಬುವರನ್ನು ಈ ಹಿಂದೆ ಬಂಧಿಸಲಾಗಿತ್ತು.
ಮುಂಬೈ: ಪುಣೆಯಲ್ಲಿ ವಿವಾದಕ್ಕೆ ಒಳಗಾಗಿದ್ದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರ ಪುತ್ರ ಪಾರ್ಥ ಪವಾರ್ ಅವರ ಕಂಪನಿಯ ಭೂಹಂಚಿಕೆ ಒಪ್ಪಂದ ರದ್ದುಗೊಳಿಸಲಾಗಿದೆ ಹಾಗೂ ಈ ಬಗ್ಗೆ ಸರ್ಕಾರ ನೇಮಿಸಿದ ಸಮಿತಿಗೆ 1 ತಿಂಗಳಲ್ಲಿ ವರದಿಗೆ ಸೂಚಿಸಲಾಗಿದೆ.ಈ ಬಗ್ಗೆ ಖುದ್ದು ಘೋಷಣೆ ಮಾಡಿದ ಅಜಿತ್, ‘ಖರೀದಿಸಿದ ಭೂಮಿ ಸರ್ಕಾರಕ್ಕೆ ಸೇರಿದ್ದು ಎಂದು ಮಗನಿಗೆ ಗೊತ್ತಿರಲಿಲ್ಲ. ಹೀಗಾಗಿ ಈಗ ವಿವಾದಾತ್ಮಕ ವಹಿವಾಟನ್ನು ಈಗ ರದ್ದುಗೊಳಿಸಲಾಗಿದೆ’ ಎಂದರು.
ಪುಣೆಯ ಮುಂಧ್ವಾ ಪ್ರದೇಶದಲ್ಲಿ 40 ಎಕರೆ ಭೂಮಿ ಪಾರ್ಥ ಅವರ ಕಂಪನಿಗೆ 300 ಕೋಟಿ ರು.ಗೆ ಹಂಚಿಕೆ ಆಗಿತ್ತು. ‘ಆದರೆ ಇದು 1800 ಕೋಟಿ ರು. ಮಾರುಕಟ್ಟೆ ಮೌಲ್ಯ ಹೊಂದಿದೆ. ಇದು ವಂಚನೆ’ ಎಂಬ ಆರೋಪ ಕೇಳಿಬಂದಿತ್ತು.
ಮ.ಪ್ರ. ತರಬೇತಿನಿರತ ಪೊಲೀಸರಿಗೆ ಭಗವದ್ಗೀತೆ ಪಾಠ
ಪಿಟಿಐ ಭೋಪಾಲ್‌ಮಧ್ಯಪ್ರದೇಶದಲ್ಲಿ ತರಬೇತಿ ಪಡೆಯುತ್ತಿರುವ ಎಲ್ಲಾ ಕಾನ್‌ಸ್ಟೇಬಲ್‌ಗಳಿಗೆ ತರಬೇತಿ ಹಂತದಲ್ಲಿಯೇ ಭಗವದ್ಗೀತೆಯನ್ನು ಕಲಿಸುವಂತೆ ರಾಜ್ಯ ಪೊಲೀಸ್ ಇಲಾಖೆ, ರಾಜ್ಯದಲ್ಲಿರುವ ಎಲ್ಲಾ ತರಬೇತಿ ಕೇಂದ್ರಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ.
‘ಮಹಾರಾಷ್ಟ್ರದಲ್ಲಿರುವ 8 ಪೊಲೀಸ್ ತರಬೇತಿ ಕೇಂದ್ರಗಳಲ್ಲಿ, 9 ತಿಂಗಳು ಕಾನ್‌ಸ್ಟೇಬಲ್ ತರಬೇತಿಗೆ ಆಯ್ಕೆಯಾಗಿರುವ 4 ಸಾವಿರ ಅಭ್ಯರ್ಥಿಗಳಿಗೆ ಭಗವದ್ಗೀತೆ ಕಲಿಸಬೇಕು’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ( ತರಬೇತಿ) ರಾಜಾ ಬಾಬು ಸಿಂಗ್ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಈ ಹಿಂದೆ ತರಬೇತಿ ವೇಳೆ ರಾಮಚರಿತಮಾನಸ ಕಲಿಸಲು ಸೂಚಿಸಲಾಗಿತ್ತು.
ರಷ್ಯಾದಲ್ಲಿ ಕಾಣೆಯಾಗಿದ್ದ ಭಾರತೀಯ ವಿದ್ಯಾರ್ಥಿ ಡ್ಯಾಂನಲ್ಲಿ ಶವವಾಗಿ ಪತ್ತೆ
ಮಾಸ್ಕೋ: ರಷ್ಯಾದ ಉಫಾ ನಗರದಲ್ಲಿ ಕಳೆದ 19 ದಿನಗಳಿಂದ ಕಾಣೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿಯೋರ್ವ ಅಣೆಕಟ್ಟು ಬಳಿ ಶವವಾಗಿ ಪತ್ತೆಯಾಗಿದ್ದಾನೆ.22 ವರ್ಷದ ಅಜಿತ್ ಸಿಂಗ್ ಚೌಧರಿ, ರಾಜಸ್ಥಾನದ ಅಳ್ವರ್ ಮೂಲದವನಾಗಿದ್ದು, 2023ರಿಂದ ರಷ್ಯಾದ ಬಾಶ್ಕಿರ್ ಸ್ಟೇಟ್ ವೈದ್ಯಕೀಯ ವಿವಿಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ. ಅ.19ರಂದು ಬೆಳಗ್ಗೆ 11 ಗಂಟೆಗೆ ಹಾಲು ತರಲು ಹೋದವ ಮತ್ತೆ ರೂಂಗೆ ಬಂದಿರಲಿಲ್ಲ. ಈಗ ಅಜಿತ್ ದೇಹವು ವೈಟ್ ನದಿಯ ಅಣೆಕಟ್ಟು ಬಳಿ ಲಭಿಸಿದೆ.
ಮಾಜಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅಳ್ವರ್ ಅವರು ದುಷ್ಕೃತ್ಯ ನಡೆದಿದೆ ಎಂದು ಶಂಕಿಸಿದ್ದಾರೆ.