ಉ.ಪ್ರ. ಸರ್ಕಾರಿ ಶಾಲೆಗಳಲ್ಲಿ ದಿನಪತ್ರಿಕೆ ಓದು ಕಡ್ಡಾಯ

Published : Dec 27, 2025, 05:30 AM IST
news papers

ಸಾರಾಂಶ

ಮಕ್ಕಳಲ್ಲಿ ಓದಿನ ಹವ್ಯಾಸ ಕ್ಷೀಣಿಸುತ್ತಿರುವುದಲ್ಲದೆ, ಮೊಬೈಲ್‌, ಟಿವಿ ಗೀಳು ಅತಿರೇಕಕ್ಕೆ ತಲುಪುತ್ತಿರುವ ದಿನಗಳಲ್ಲಿ, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ದಿನಪತ್ರಿಕೆಗಳ ಓದನ್ನು ಕಡ್ಡಾಯಗೊಳಿಸಿ ಉತ್ತರ ಪ್ರದೇಶ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

 ಲಖನೌ: ಮಕ್ಕಳಲ್ಲಿ ಓದಿನ ಹವ್ಯಾಸ ಕ್ಷೀಣಿಸುತ್ತಿರುವುದಲ್ಲದೆ, ಮೊಬೈಲ್‌, ಟಿವಿ ಗೀಳು ಅತಿರೇಕಕ್ಕೆ ತಲುಪುತ್ತಿರುವ ದಿನಗಳಲ್ಲಿ, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ದಿನಪತ್ರಿಕೆಗಳ ಓದನ್ನು ಕಡ್ಡಾಯಗೊಳಿಸಿ ಉತ್ತರ ಪ್ರದೇಶ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಾರ್ಥಸಾರಥಿ ಸೇನ್‌ ಶರ್ಮಾ ಡಿ.23ರಂದು ಹೊರಡಿಸಿದ ಆದೇಶದನ್ವಯ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರತಿ ಮುಂಜಾನೆ 10 ನಿಮಿಷ ದಿನಪತ್ರಿಕೆಗಳ ಓದು ಕಡ್ಡಾಯವಾಗಿದೆ.

ಆದೇಶದಲ್ಲೇನಿದೆ?:

ಶಾಲಾ ಗ್ರಂಥಾಲಯದಲ್ಲಿ ಹಿಂದಿ ಮತ್ತು ಇಂಗ್ಲಿಷ್‌ ಪತ್ರಿಕೆಗಳ ಲಭ್ಯತೆ ಕಡ್ಡಾಯ. ವಿದ್ಯಾರ್ಥಿಗಳು ಮುಂಜಾನೆ ಪ್ರಾರ್ಥನೆಗಾಗಿ ಒಟ್ಟುಗೂಡುವ ಸಮಯದಲ್ಲಿ ಕನಿಷ್ಠ 10 ನಿಮಿಷ ದಿನಪತ್ರಿಕೆಗಳನ್ನು ಓದಬೇಕು. ಪಾಳಿ ಪ್ರಕಾರ ದಿನಕ್ಕೊಬ್ಬ ವಿದ್ಯಾರ್ಥಿ ಅಂದಿನ ಮುಖ್ಯ ಸಮಾಚಾರ, ಸಂಪಾದಕೀಯ ಲೇಖನಗಳನ್ನು ವಾಚಿಸಬೇಕು. ‘ದಿನದ ಪದ’ ಎಂದು ಚಟುವಟಿಕೆ ಮೂಲಕ ಪ್ರತಿದಿನ ಪತ್ರಿಕೆಯಿಂದ 5 ಕ್ಲಿಷ್ಟಕರ ಪದಗಳನ್ನು ಆಯ್ದು, ಅವುಗಳ ಅರ್ಥ ವಿವರಿಸಿ, ನೋಟಿಸ್‌ ಫಲಕದಲ್ಲಿ ಬರೆಯಬೇಕು. ಇದರಿಂದ ಮಕ್ಕಳ ಶಬ್ದಕೋಶ ವೃದ್ಧಿಯಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಪತ್ರಿಕೆಗಳ ಓದಿನ ಜೊತೆಗೆ, 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವತಃ ದಿನಪತ್ರಿಕೆ ಅಥವಾ ನಿಯತಕಾಲಿಕೆಗಳನ್ನು ಹೊರತರಲು ಶಾಲೆಗಳು ಪ್ರೋತ್ಸಾಹಿಸಬೇಕು. ಸುಡೋಕು ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಬೇಕು. ವಿದ್ಯಾರ್ಥಿಗಳು ಸುದ್ದಿಯ ತುಣುಕುಗಳನ್ನು ಸಂಗ್ರಹಿಸಿ, ಪುಸ್ತಕಗಳನ್ನು ಸಿದ್ಧಪಡಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಹಿಂದೆ ನ.2ರಂದು ಸರ್ಕಾರ ಆದೇಶವೊಂದನ್ನು ಹೊರಡಿಸಿತ್ತು. ಅದರ ಪ್ರಕಾರ, ಸರ್ಕಾರಿ ಜಿಲ್ಲಾ ಗ್ರಂಥಾಲಯಗಳು ವಿದ್ಯಾರ್ಥಿಗಳಿಗೆ ಪ್ರತಿವಾರ ಕನಿಷ್ಠ ಒಂದು ಪಠ್ಯೇತರ ಪುಸ್ತಕವನ್ನು ಒದಗಿಸಬೇಕು. ಹೆಚ್ಚು ಓದುವ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ನೀಡಬೇಕು. ಶಾಲಾ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಟ್ರೋಫಿಗಳ ಬದಲು ಪುಸ್ತಕಗಳನ್ನು ನೀಡಬೇಕು ಎಂದು ತಿಳಿಸಲಾಗಿತ್ತು.

ಪತ್ರಿಕಾ ಓದು ಕಡ್ಡಾಯವೇಕೆ?:

ದಿನಪತ್ರಿಕೆಗಳನ್ನು ಓದುವುದರಿಂದ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ. ಪ್ರಚಲಿತ ವಿದ್ಯಮಾನಗಳ ಕುರಿತು ತಿಳಿವಳಿಕೆ ಹೆಚ್ಚುತ್ತದೆ. ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಇದು ಸಹಕಾರಿ. ಮಕ್ಕಳ ಶಬ್ದಕೋಶ ಸಮೃದ್ಧವಾಗುವುದಲ್ಲದೆ, ಭಾಷೆಯೂ ಉತ್ತಮವಾಗುತ್ತದೆ. ಸುಳ್ಳುಸುದ್ದಿಗಳೇ ಹೆಚ್ಚುತ್ತಿರುವ ದಿನಗಳಲ್ಲಿ, ಮಕ್ಕಳಿಗೆ ಯಾವುದು ಸತ್ಯ, ಯಾವುದು ಸುಳ್ಳು ಎಂದು ಅರ್ಥೈಸಿಕೊಳ್ಳುವ ಪ್ರಜ್ಞೆ ಬೆಳೆಯುತ್ತದೆ. ಸ್ಥಳೀಯ ಕಾರ್ಯಕ್ರಮಗಳ ಕುರಿತಾಗಿಯೂ ಮಾಹಿತಿ ದೊರೆಯುತ್ತದೆ.

ಪತ್ರಿಕೆಗಳಲ್ಲಿ ಪ್ರಕಟವಾಗುವ ಮಾನವ ಹಿತಾಸಕ್ತಿ ಕಥೆಗಳು ಮತ್ತು ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ಸುದ್ದಿಗಳು ವಿದ್ಯಾರ್ಥಿಗಳಿಗೆ ಇತರರ ಅನುಭವಗಳು ಮತ್ತು ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಅವರಲ್ಲಿ ಸಹಾನುಭೂತಿ ಬೆಳೆಸಿ, ಜವಾಬ್ದಾರಿಯುತ ನಾಗರಿಕರಾಗಲು ನೆರವಾಗುತ್ತದೆ. ಪತ್ರಿಕೆಗಳಲ್ಲಿ ಲಭ್ಯವಿರುವ ಸುಡೋಕು, ಕ್ರಾಸ್‌ವರ್ಡ್‌ಗಳು ಮತ್ತು ಒಗಟುಗಳು ಮನರಂಜನೆ ಮಾತ್ರವಲ್ಲ; ವಿದ್ಯಾರ್ಥಿಗಳ ಮೆದುಳಿಗೂ ತರಬೇತಿ ನೀಡುತ್ತವೆ ಎಂದು ಆದೇಶದಲ್ಲಿ ಹೇಳಲಾಗಿದೆ.

-ಸಾಮಾನ್ಯ ಜ್ಞಾನ ವೃದ್ಧಿ, ಪ್ರಚಲಿತ ವಿದ್ಯಮಾನಗಳ ತಿಳಿವಳಿಕೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲ.

-ಭಾಷೆ ಮತ್ತು ಶಬ್ದಕೋಶ ಉತ್ತಮಗೊಳಿಸುವುದು. ತಾರ್ಕಿಕ ಮತ್ತು ವಿಮರ್ಶಾತ್ಮಕ ಚಿಂತನೆ ಬೆಳೆಸುವುದು.

-ಓದಿನ ಮೂಲಕ ಮಕ್ಕಳ ಗಮನ ಮತ್ತು ತಾಳ್ಮೆ ಹೆಚ್ಚಿಸುವುದು.

-ಸ್ಥಳೀಯ ಮತ್ತು ಜಾಗತಿಕ ಸುದ್ದಿ ಮೂಲಕ ಸಾಮಾಜಿಕ ಸಂಪರ್ಕ ವರ್ಧಿಸುವುದು.

-ಮಾನವ ಹಿತಾಸಕ್ತಿ ಸುದ್ದಿಗಳ ಮೂಲಕ ಸಹಾನುಭೂತಿ ಹೆಚ್ಚಿಸುವುದು. ಆ ಮೂಲಕ ಉತ್ತಮ ಪ್ರಜೆಗಳಾಗಿ ರೂಪಿಸುವುದು.

-ಒಗಟು, ಸುಡೋಕು ಮೂಲಕ ಮನರಂಜನೆ ಜೊತೆಗೆ ಮೆದುಳಿಗೂ ಕೆಲಸ ಕೊಡುವುದು.

ಜಾರಿಗೊಳಿಸುವುದು ಹೇಗೆ?:

-ಶಾಳಾ ಗ್ರಂಥಾಲಯಗಳಲ್ಲಿ ಕಡ್ಡಾಯವಾಗಿ ಉತ್ತಮ ಇಂಗ್ಲಿಷ್, ಹಿಂದಿ ದಿನಪತ್ರಿಕೆಗಳನ್ನು ಇರಿಸಬೇಕು.

-ಮುಂಜಾನೆ ಮಕ್ಕಳು ಒಟ್ಟುಸೇರುವ ವೇಳೆ ಪತ್ರಿಕೆ ಓದಿಗೆ 10 ನಿಮಿಷ ನಿಗದಿಪಡಿಸಬೇಕು.

-ಪತ್ರಿಕೆಯಿಂದ 5 ಕ್ಲಿಷ್ಟಕರ ಪದಗಳನ್ನು ಆಯ್ದು, ಅವುಗಳ ಅರ್ಥ ವಿವರಿಸಬೇಕು.

-ಈ ಪದಗಳನ್ನು ಕಡ್ಡಾಯವಾಗಿ ನೋಟಿಸ್‌ ಫಲಕದ ಮೇಲೆ ಬರೆಯಬೇಕು.

-ವಿದ್ಯಾರ್ಥಿಗಳೇ ಸ್ವತಃ ಮಾಸಿಕ ಅಥವಾ ತ್ರೈಮಾಸಿಕ ಪತ್ರಿಕೆಗಳನ್ನು ಹೊರತರಬೇಕು.

-9-12ನೇ ತರಗತಿ ವಿದ್ಯಾರ್ಥಿಗಳು ಯಾವುದಾದರೂ ಸಂಪಾದಕೀಯದ ಕುರಿತು ತಮ್ಮ ಸ್ವಂತ ವಿಚಾರಗಳನ್ನು ಬರೆಯಬೇಕು ಮತ್ತು ಗುಂಪು ಚರ್ಚೆಗಳಲ್ಲಿ ಭಾಗವಹಿಸಬೇಕು.

-ಶಾಲೆಗಳು ಸುಡೋಕು, ಒಗಟು, ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಬೇಕು.

-ವಿದ್ಯಾರ್ಥಿಗಳು ವಿಜ್ಞಾನ, ಪರಿಸರ, ಕ್ರೀಡಾ ಸುದ್ದಿಗಳ ತುಣಕುಗಳನ್ನು ಕತ್ತರಿಸಿ, ಪುಸ್ತಕ ರಚಿಸಬೇಕು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಆಪರೇಷನ್‌ ಸಿಂದೂರ ವೇಳೆ ಸೈನಿಕರಿಗೆ ಚಹಾ ಕೊಟ್ಟಿದ್ದ ಬಾಲಕಗೆ ಬಾಲ ಪುರಸ್ಕಾರ
ದಿಲ್ಲಿ ಬದಲು ಬೆಂಗಳೂರು ರಾಜಧಾನಿ ಮಾಡಿ : ದಿಲ್ಲಿ ಯುವತಿ ಆಗ್ರಹ