ಜಾತಿ ಆಧರಿತ ಮೀಸಲು ಬೇಡ, ನಾನೂ ಮೀಸಲು ಕೇಳಲ್ಲ: ಸುಪ್ರಿಯಾ

KannadaprabhaNewsNetwork |  
Published : Sep 23, 2025, 01:03 AM IST
ಸುಪ್ರಿಯಾ ಸುಳೆ | Kannada Prabha

ಸಾರಾಂಶ

‘ಜಾತಿ ಜಾತಿಗೆ, ಸಮುದಾಯಕ್ಕೆ ಮೀಸಲಾತಿ ಕೊಡುವುದು ಬೇಡ. ಯಾರು ಆರ್ಥಿಕವಾಗಿ ದುರ್ಬಲ ಆಗಿರುತ್ತಾರೋ ಅವರಿಗೆ ಮೀಸಲು ಅಗತ್ಯ’ ಎಂದು ಎನ್‌ಸಿಪಿ ಸಂಸದೆ, ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಹೇಳಿದ್ದಾರೆ.

ನವದೆಹಲಿ: ‘ಜಾತಿ ಜಾತಿಗೆ, ಸಮುದಾಯಕ್ಕೆ ಮೀಸಲಾತಿ ಕೊಡುವುದು ಬೇಡ. ಯಾರು ಆರ್ಥಿಕವಾಗಿ ದುರ್ಬಲ ಆಗಿರುತ್ತಾರೋ ಅವರಿಗೆ ಮೀಸಲು ಅಗತ್ಯ’ ಎಂದು ಎನ್‌ಸಿಪಿ ಸಂಸದೆ, ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಹೇಳಿದ್ದಾರೆ.

ಸಂವಾದವೊಂದರಲ್ಲಿ ಮಾತಾನಾಡಿದ ಅವರು, ‘ನಾನು ಮೀಸಲಾತಿ ಕೇಳುವುದಿಲ್ಲ. ಏಕೆಂದರೆ ನನ್ನ ಪೋಷಕರು ಶಿಕ್ಷಿತರಾಗಿದ್ದರು. ನನ್ನ ಮಕ್ಕಳೂ ಮೀಸಲಾತಿ ಕೇಳುವಂತಿಲ್ಲ. ಏಕೆಂದರೆ ನಾನು ಶಿಕ್ಷಿತೆ, ನನ್ನ ಮಕ್ಕಳು ಉತ್ತಮ ಶಾಲೆಗೆ ಹೋಗುತ್ತಿದ್ದಾರೆ. ಆದರೆ ಅದೇ ದೂರದ ಹಳ್ಳಿಯಲ್ಲಿರುವ ಆರ್ಥಿಕವಾಗಿ ದುರ್ಬಲ ಮಗು ನನ್ನ ಮಗುವಿಗಿಂತ ಪ್ರತಿಭಾನ್ವಿತವಾಗಿದ್ದರೂ ಅಲ್ಲಿ ಮುಂಬೈ ರೀತಿಯ ಶಿಕ್ಷಣ ಸಿಕ್ಕಿರುವುದಿಲ್ಲ. ಆ ಮಗುವಿಗೆ ಮೀಸಲು ಅವಶ್ಯಕತೆ ಇದೆ. ಮೀಸಲಾತಿ ಆರ್ಥಿಕ ಶಕ್ತಿಯ ಆಧಾರದ ಮೇಲೆ ನೀಡಬೇಕು’ ಎಂದರು.

==

ಮಾನಹಾನಿ ಕೇಸು ‘ಕ್ರಿಮಿನಲ್‌’ ಅಲ್ಲ: ಸುಪ್ರೀಂ ಇಂಗಿತ

ಮಾನಹಾನಿಯನ್ನು ಡೀಕ್ರಿಮಿನಲೈಸ್‌ ಮಾಡುವ ಸಮಯ ಬಂದಂತಿದೆ: ಪೀಠ

ನವದೆಹಲಿ: ಮಾನಹಾನಿ ಪ್ರಕರಣಗಳನ್ನು ಅಪರಾಧದಿಂದ ಪ್ರಕರಣಗಳಿಂದ (ಕ್ರಿಮಿನಲ್‌ ಕೇಸು) ಹೊರಗಿಡುವ ಕಾಲ ಇದೀಗ ಬಂದಂತಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಈ

ಅಭಿಪ್ರಾಯ ಸುಪ್ರೀಂ ಕೋರ್ಟ್‌ನ ಈ ಹಿಂದಿನ ತೀರ್ಪಿಗೆ ಸಂಪೂರ್ಣ ತದ್ವಿರುದ್ಧವಾಗಿದೆ. ಕೇಸ್‌ವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ಎಂ.ಸುಂದರೇಶ್‌ ಅವರು, ಮಾನಹಾನಿಯನ್ನು ಡೀಕ್ರಿಮಿನಲೈಸ್‌(ಅಪರಾಧಮುಕ್ತ) ಮಾಡುವ ಸಮಯ ಬಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.2016ರಲ್ಲಿ ಸುಬ್ರಹ್ಮಣ್ಯ ಸ್ವಾಮಿ ಪ್ರಕರಣದಲ್ಲಿ ಮಾನಹಾನಿಯನ್ನು ಅಪರಾಧವೆಂದು ಪರಿಗಣಿಸುವ ಕಾನೂನುಗಳ ಸಾಂವಿಧಾನಿಕ ಮಾನ್ಯತೆಯನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು. ರೈಟ್‌ ಟು ರೆಪ್ಯುಟೇಷನ್‌(ಗೌರವದ ಹಕ್ಕು) ಕೂಡ ಸಂವಿಧಾನದ ಪರಿಚ್ಛೇದ 21ನೇ ವಿಧಿಯಡಿ ನೀಡಲಾಗಿರುವ ಘನತೆಯಿಂದ ಬದುಕುವ ಹಕ್ಕಿನಡಿ ಬರುತ್ತದೆ ಎಂದು ಹೇಳಿತ್ತು. ಈ ಮೂಲಕ ಐಪಿಸಿಯ 499ನೇ ಸೆಕ್ಷನ್‌(ಈಗ ಭಾರತೀಯ ನ್ಯಾಯ ಸಂಹಿತೆಯ 356ನೇ ಸೆಕ್ಷನ್‌) ಅನ್ನು ಎತ್ತಿಹಿಡಿದಿತ್ತು. ಅದರಂತೆ ಗೌರವಕ್ಕೆ ಚ್ಯುತಿತರುವ ಪದ, ಚಿಹ್ನೆ ಅಥವಾ ಹೇಳಿಕೆಗೆ 2 ವರ್ಷ ವರೆಗೆ ಜೈಲು, ದಂಡ ಅಥವಾ ಎರಡನ್ನೂ ನೀಡಬಹುದಾಗಿದೆ.

ಜೆಎನ್‌ಯು ಪ್ರೊಫೆಸರ್‌ ಹಾಕಿದ್ದ ಮಾನಹಾನಿ ಕೇಸ್‌ ಸಂಬಂಧ ನ್ಯೂಸ್‌ ವೆಬ್‌ಸೈಟ್‌ ಹಾಗೂ ವರದಿಗಾರನ ವಿರುದ್ಧ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಹೊರಡಿಸಿದ್ದ ಸಮನ್ಸ್‌, ಅದನ್ನು ನಂತರ ಎತ್ತಿಹಿಡಿದಿದ್ದ ದೆಹಲಿ ಕೋರ್ಟ್‌ ತೀರ್ಪು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಅಭಿಪ್ರಾಯ ನೀಡಿದ್ದಾರೆ.

==

ರ್‍ಯಾಲಿಗೆ ಬಂದೋರೆಲ್ಲ ಮತ ಹಾಕಲ್ಲ: ವಿಜಯ್‌ಗೆ ಕಮಲ್‌ ಟಾಂಗ್

ಚೆನ್ನೈ: ‘ರ್‍ಯಾಲಿಗೆ ಬರುವ ಜನರೆಲ್ಲ ಮತ ಚಲಾಯಿಸುತ್ತಾರೆ ಎಂದು ಹೇಳಲಾಗದು. ಈ ನಿಯಮ ನಟ , ತಮಿಳಿಗ ವೆಟ್ರಿ ಕಳಗಳ ನೇತಾರ ವಿಜಯ್‌ ಸೇರಿದಂತೆ ಎಲ್ಲರಿಗೂ ಅನ್ವಯಿಸುತ್ತದೆ’ ಎಂದು ರಾಜ್ಯಸಭಾ ಸದಸ್ಯ ಕಮಲ್ ಹಾಸನ್‌ ಹೇಳಿದ್ದಾರೆ.ವಿಜಯ್‌ ಅವರ ರ್‍ಯಾಲಿಗೆ ಜನಸ್ತೋಮ ನೆರೆದಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಕ್ಕಳ್‌ ನಿಧಿ ಮೈಯಂ ಪಕ್ಷದ ಸ್ಥಾಪಕರೂ ಆದ ಕಮಲ್‌, ‘ರ್‍ಯಾಲಿಗೆ ಬಂದಿರುವ ಜನರೆಲ್ಲಾ ಮತಗಳಾಗಿ ಪರಿವರ್ತನೆಯಾಗುವುದಿಲ್ಲ ಎನ್ನುವುದು ಖಚಿತ. ಇದು ಎಲ್ಲಾ ನಾಯಕರಿಗೆ ಅನ್ವಯಿಸುತ್ತದೆ. ಹಾಗಿದ್ದಾಗ ವಿಜಯ್‌ ಕೂಡ ಇದರಿಂದ ಹೇಗೆ ಹೊರಗುಳಿಯುತ್ತಾರೆ?’ ಎಂದರು.

==

₹5 ಕೋಟಿ ಜೀವನಾಂಶ ನೀಡುವಂತೆ ಪತ್ನಿ ಬೇಡಿಕೆ: ಸುಪ್ರೀಂ ಗರಂ

ನವದೆಹಲಿ: ಮದುವೆಯಾಗಿ ಕೇವಲ 1 ವರ್ಷಕ್ಕೆ ಮಹಿಳೆಯೊಬ್ಬರು ಪತಿಯಿಂದ ವಿಚ್ಛೇದನ ಪಡೆದು 5 ಕೋಟಿ ರು. ಜೀವನಾಂಶ ಕೊಡುವಂತೆ ಬೇಡಿಕೆ ಇಟ್ಟ ಪ್ರಸಂಗ ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ. ಇದಕ್ಕೆ ಮಹಿಳೆಗೆ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.ಮಹಿಳೆಯ ಪತಿಯು 35-40 ಲಕ್ಷ ರು. ಪರಿಹಾರ ಕೊಡುವುದಾಗಿ ಒಪ್ಪಿಕೊಂಡಿದ್ದರು. ಆದರೆ ಇದಕ್ಕೆ ಒಪ್ಪದ ಮಹಿಳೆ 5 ಕೋಟಿ ರು. ಪರಿಹಾರಕ್ಕೆ ಮನವಿ ಮಾಡಿದರು. ಇದಕ್ಕೆ ಅಸಮಾಧಾನ ಹೊರಹಾಕಿದ ಪೀಠ, ’ಈ ರೀತಿಯ ಬೇಡಿಕೆ ಇಟ್ಟರೆ ಮುಂದಿನ ಪರಿಣಾಮ ಎದುರಿಸಬೇಕಾದೀತು. ಮುಂದಿನ ಮಾತುಕತೆಯಲ್ಲಿ ಇಬ್ಬರೂ ಪರಿಹಾರವನ್ನು ಬಗೆಹರಿಸಿಕೊಳ್ಳಿ’ ಎಂದು ಎಚ್ಚರಿಸಿತು.

==

ಟ್ರಂಪ್ ಎಚ್‌1ಬಿ ವೀಸಾ ಬಿಸಿ: 466 ಅಂಕ ಕುಸಿದ ಸೆನ್ಸೆಕ್ಸ್‌

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್‌1ಬಿ ವೀಸಾ ದರ ಹೆಚ್ಚಿಸಿರುವ ಪರಿಣಾಮ ಭಾರತದ ಷೇರುಪೇಟೆಗಳಾದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಕುಸಿತ ಕಂಡಿವೆ. ವಿಶೇಷವಾಗಿ ಐಟಿ ಷೇರುಗಳು ಕುಸಿದಿವೆ.ಸೋಮವಾರದ ಅಂತ್ಯಕ್ಕೆ ಸೆನ್ಸೆಕ್ಸ್‌ 466 ಅಂಕ ಇಳಿಕೆಯೊಂದಿಗೆ 82,159.97ರಲ್ಲಿ ಮುಕ್ತಾಯಗೊಂಡಿದ್ದರೆ, ನಿಫ್ಟಿ 124 ಅಂಕ ಕುಸಿದು 25202.35ರಲ್ಲಿ ಅಂತ್ಯವಾಯಿತು. ಮತ್ತೊಂದೆಡೆ ಐಟಿ ವಲಯದ ಷೇರುಗಳು ಕೂಡ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಟೆಕ್‌ ಮಹೀಂದ್ರಾದ ಷೇರು ಶೇ.6ರಷ್ಟು ಕುಸಿತ ಕಂಡರೆ, ಇನ್ಫೋಸಿಸ್‌, ಟಿಸಿಎಸ್‌ ಷೇರುಗಳೂ ಮಂಕಾದವು.ಕಳೆದ ಶುಕ್ರವಾರ ಸೆನೆಕ್ಸ್‌ 387.73 ಅಂಕ ಕುಸಿದು 82,626.23ಕ್ಕೆ ಇಳಿದಿತ್ತು. ನಿಫ್ಟಿ 96.55 ಅಂಕ ಇಳಿಕೆ ಕಂಡು 25,327.05ರಲ್ಲಿ ಅಂತ್ಯವಾಗಿತ್ತು.

PREV

Recommended Stories

ನಿರ್ಬಂಧ ಬಿಸಿ : ಜೈಷ್‌-ಎ-ಮೊಹಮ್ಮದ್‌ ಹೆಸರು ಬದಲಾವಣೆ!
ಅಮೆರಿಕ 88 ಲಕ್ಷ ರು. ಶುಲ್ಕ : ಹಳೆಯ ಎಚ್‌ 1ಬಿ ವೀಸಾದಾರರು ನಿರಾಳ