ಯಾವ ಭ್ರಷ್ಟರನ್ನೂ ಸುಮ್ಮನೆ ಬಿಡಲ್ಲ: ಮೋದಿ

KannadaprabhaNewsNetwork | Updated : Mar 17 2024, 07:44 AM IST

ಸಾರಾಂಶ

ದೆಹಲಿ ಮದ್ಯ ಲೈಸೆನ್ಸ್‌ ಹಂಚಿಕೆ ಹಗರಣದಲ್ಲಿ ತೆಲಂಗಾಣದ ಬಿಆರ್‌ಎಸ್‌ ಪಕ್ಷದ ನಾಯಕಿ ಕೆ. ಕವಿತಾ ಬಂಧನ ಬೆನ್ನಲ್ಲೇ, ಯಾವ ಭ್ರಷ್ಟರನ್ನೂ ಸುಮ್ಮನೆ ಬಿಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.

ಹೈದರಾಬಾದ್‌: ದೆಹಲಿ ಮದ್ಯ ಲೈಸೆನ್ಸ್‌ ಹಂಚಿಕೆ ಹಗರಣದಲ್ಲಿ ತೆಲಂಗಾಣದ ಬಿಆರ್‌ಎಸ್‌ ಪಕ್ಷದ ನಾಯಕಿ ಕೆ. ಕವಿತಾ ಬಂಧನ ಬೆನ್ನಲ್ಲೇ, ಯಾವ ಭ್ರಷ್ಟರನ್ನೂ ಸುಮ್ಮನೆ ಬಿಡಲ್ಲ ಎಂದು ಗುಡುಗಿರುವ ಪ್ರಧಾನಿ ನರೇಂದ್ರ ಮೋದಿ, ‘ಬಿಆರ್‌ಎಸ್‌ ನಾಯಕರು, ಭ್ರಷ್ಟಾಚಾರದಲ್ಲಿ ನಿರ್ಲಜ್ಜರಾಗಿರುವ ಇತರೆ ಪಕ್ಷಗಳ ಕೈಜೋಡಿಸಿ ಅಭಿವೃದ್ಧಿ ವಿಷಯದಲ್ಲಿ ತೆಲಂಗಾಣದ ಜನತೆ ಕನಸುಗಳನ್ನು ನುಚ್ಚು ನೂರು ಮಾಡಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ನಗರ್‌ಕರ್ನೂಲ್‌ನಲ್ಲಿ ಶನಿವಾರ ಬಿಜೆಪಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಬಿಆರ್‌ಎಸ್‌ ಮತ್ತು ಕಾಂಗ್ರೆಸ್‌ ನಾಯಕರು ಭ್ರಷ್ಟಾಚಾರದ ವಿಷಯದಲ್ಲಿ ಒಂದಾಗಿ ರಾಜ್ಯದ ಜನತೆಯ ಎಲ್ಲಾ ಕನಸುಗಳನ್ನೂ ನುಚ್ಚು ನೂರು ಮಾಡಿದ್ದಾರೆ. 

ಬಿಆರ್‌ಎಸ್‌ ನಾಯಕರು ರಾಜ್ಯದ ಹೊರಗೆ ಹೋಗಿ ಕೆಲ ನಿರ್ಲಜ್ಜ ಭ್ರಷ್ಟರ ಜೊತೆ ಕೈಜೋಡಿಸಿದ್ದಾರೆ. ಅದರ ಸತ್ಯ ಇದೀಗ ನಿತ್ಯವೂ ಹೊರಗೆ ಬರುತ್ತಿದೆ’ ಎಂದು ದೆಹಲಿಯ ಆಪ್‌ ಸರ್ಕಾರದ ಕೆಲ ಸಚಿವರು ಮತ್ತು ಬಿಆರ್‌ಎಸ್‌ ನಾಯಕಿ ಕವಿತಾ ಆರೋಪಿಯಾಗಿರುವ ದೆಹಲಿ ಲಿಕ್ಕರ್‌ ಹಗರಣದ ಹೆಸರು ಹೇಳದೆಯೇ ಟೀಕಿಸಿದರು.

ಆದರೆ ತೆಲಂಗಾಣದ ಜನತೆಗೆ ನಾನು ಇಂದು ಭರವಸೆ ನೀಡ ಬಯಸುತ್ತೇನೆ. ಯಾವುದೇ ಭ್ರಷ್ಟ ನಾಯಕರನ್ನೂ ನಾವು ಸುಮ್ಮನೆ ಬಿಡುವುದಿಲ್ಲ. ಭ್ರಷ್ಟಾಚಾರ ನಿಗ್ರಹ ವಿಷಯದಲ್ಲಿ ನನಗೆ ತೆಲಂಗಾಣ ಜನತೆಯ ಬೆಂಬಲ ಬೇಕು ಎಂದು ಮನವಿ ಮಾಡಿದರು.

‘ಕಾಂಗ್ರೆಸ್ ನಾಯಕರು 2ಜಿ ಹಗರಣದ ನಡೆಸಿದರೆ, ಬಿಆರ್‌ಎಸ್‌ ನಾಯಕರು ನೀರಾವರಿ ಹಗರಣ ನಡೆಸಿದರು. ಎರಡೂ ಪಕ್ಷಗಳು ಭೂಮಾಫಿಯಾಕ್ಕೆ ಬೆಂಬಲವಾಗಿವೆ. ದೇಶದಲ್ಲಿ 25 ಕೋಟಿ ಜನರನ್ನು ನಾವು ಬಡತನದಿಂದ ದೂರ ಮಾಡಿದ್ದೇವೆ. 

ಇದೇ ಬದಲಾವಣೆಯನ್ನು ನಾವು ತೆಲಂಗಾಣದಲ್ಲೂ ತರಬೇಕಿದೆ. ಈ ಬದಲಾವಣೆಯನ್ನು ರಾಜ್ಯದ ಜನತೆ ಬಯಸಿದ್ಧಾರೆ ಎಂಬುದು ಇಲ್ಲಿ ಸೇರಿರುವ ಜನಸಮೂಹ ನೋಡಿದರೆ ಖಚಿತವಾಗುತ್ತದೆ. 

ಚುನಾವಣೆ ಘೋಷಣೆಗೆ ಮುನ್ನವೇ ಜನತೆ ಎನ್‌ಡಿಎಗೆ 400ಕ್ಕಿಂತ ಅಧಿಕ ಸ್ಥಾನದ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಹೇಳಿದರು.

Share this article