ತೆರಿಗೆ ಬಾಕಿ ಉಳಿಸಿಕೊಂಡಿದ್ದವರಿಗೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಸಂತಸದ ಸುದ್ದಿ ಲಭಿಸಿದೆ. ನೇರ ತೆರಿಗೆಗಳಿಗೆ ಸಂಬಂಧಿಸಿದ 1962ರಿಂದಲೂ ಬಾಕಿ ಇರುವ ಸಣ್ಣಪುಟ್ಟ ತೆರಿಗೆ ವಿವಾದಗಳನ್ನು ಒಂದೇ ಸಲ ಬಗೆಹರಿಸಲು ಕ್ರಮ ಕೈಗೊಂಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 2010ರವರೆಗೆ ಗರಿಷ್ಠ 25,000 ರು. ತೆರಿಗೆ ಬಾಕಿ ಉಳಿಸಿಕೊಂಡಿದ್ದವರ ವಿರುದ್ಧದ ನೋಟಿಸ್‌ಗಳನ್ನು ರದ್ದುಪಡಿಸುವುದಾಗಿ ಪ್ರಕಟಿಸಿದ್ದಾರೆ.
ಹಾಗೆಯೇ, 2010ರಿಂದ 2015ವರೆಗೆ ಗರಿಷ್ಠ 10,000 ರು.ನಷ್ಟು ತೆರಿಗೆ ಬಾಕಿ ಉಳಿಸಿಕೊಂಡಿದ್ದವರ ವಿರುದ್ಧದ ನೋಟಿಸ್‌ಗಳನ್ನು ರದ್ದುಪಡಿಸಲಾಗುವುದು ಎಂದೂ ಹೇಳಿದ್ದಾರೆ. ಈ ಕ್ರಮದಿಂದ ಒಂದು ಕೋಟಿ ತೆರಿಗೆದಾರರ ಬಾಕಿ ಮನ್ನಾ ಆಗಲಿದೆ.
ತೆರಿಗೆದಾರರಿಗೆ ಉತ್ತಮ ಸೇವೆಗಳನ್ನು ನೀಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಹೀಗಾಗಿ ತೆರಿಗೆ ಬಾಕಿಗೆ ಸಂಬಂಧಿಸಿದ ಸಣ್ಣಪುಟ್ಟ ವಿವಾದಗಳನ್ನೆಲ್ಲ ಒಂದೇ ಸಲ ಬಗೆಹರಿಸಲು ನಿರ್ಧರಿಸಲಾಗಿದೆ.
ಅದಕ್ಕಾಗಿ 25,000 ರು. ಹಾಗೂ 10,000 ವರೆಗೆ ತೆರಿಗೆ ಬಾಕಿ ಉಳಿಸಿಕೊಂಡಿದ್ದವರಿಗೆ ನಿರ್ದಿಷ್ಟ ಕಾಲಮಿತಿಯ ಪ್ರಕರಣಗಳನ್ನು ರದ್ದುಪಡಿಸಲಾಗುತ್ತದೆ ಎಂದು ನಿರ್ಮಲಾ ಹೇಳಿದ್ದಾರೆ.ದೇಶದ ಜನಸಂಖ್ಯೆ ಏರಿಕೆಯಾಗುತ್ತಿದೆ.
ಅದರಿಂದಾಗಿ ತೆರಿಗೆಗೆ ಸಂಬಂಧಿಸಿದಂತೆ ಹೊಸ ಹೊಸ ಸವಾಲುಗಳು ಎದುರಾಗುತ್ತಿವೆ. ಆ ಸವಾಲುಗಳನ್ನು ಪರಿಗಣಿಸಿ ತೆರಿಗೆ ಸಂಬಂಧಿ ಸೇವೆಗಳನ್ನು ಸುಧಾರಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗುವುದು ಎಂದೂ ನಿರ್ಮಲಾ ಪ್ರಕಟಿಸಿದ್ದಾರೆ.