ತಮಿಳ್ನಾಡಲ್ಲಿ ಆಪರೇಷನ್‌ ವಿಷಲ್‌!

Published : May 26, 2026, 12:43 PM IST
Vijay

ಸಾರಾಂಶ

ಅಲ್ಪಬಹುಮತದೊಂದಿಗೆ ಇತ್ತೀಚೆಗೆ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಿದ್ದ ಮುಖ್ಯಮಂತ್ರಿ ವಿಜಯ್‌ ನೇತೃತ್ವದ ಟಿವಿಕೆ ಸರ್ಕಾರ ಯಶಸ್ವಿ ‘ಆಪರೇಷನ್‌ ವಿಷಲ್‌’ ಕಾರ್ಯಾಚರಣೆ ನಡೆಸಿ, ವಿರೋಧಿ ಬಣದ ಮೂವರು ಶಾಸಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

 ಚೆನ್ನೈ: ಅಲ್ಪಬಹುಮತದೊಂದಿಗೆ ಇತ್ತೀಚೆಗೆ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಿದ್ದ ಮುಖ್ಯಮಂತ್ರಿ ವಿಜಯ್‌ ನೇತೃತ್ವದ ಟಿವಿಕೆ ಸರ್ಕಾರ ಯಶಸ್ವಿ ‘ಆಪರೇಷನ್‌ ವಿಷಲ್‌’ ಕಾರ್ಯಾಚರಣೆ ನಡೆಸಿ, ವಿರೋಧಿ ಬಣದ ಮೂವರು ಶಾಸಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. 

ಮೂವರು ಇದೀಗ ಶಾಸಕ ಸ್ಥಾನಕ್ಕೆ ರಾಜೀನಾಮೆ

ಸಿಎಂ ವಿಜಯ್‌ ಅವರ ಪಕ್ಷ ಬೆಂಬಲಿಸುವ ವಿಷಯದಲ್ಲಿ ಎಡಪ್ಪಾಡಿ ಪಳನಿಸ್ವಾಮಿ ಬಣದಿಂದ ದೂರವಾಗಿದ್ದ ಷಣ್ಮುಗಂ ಮತ್ತು ವೇಲುಮಣಿ ನೇತೃತ್ವದ ಬಂಡಾಯ ಬಣದ 25ಕ್ಕೂ ಹೆಚ್ಚು ಶಾಸಕರು ಪೈಕಿ ಮೂವರು ಇದೀಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಬಂಡಾಯ ಬಣದಲ್ಲಿದ್ದ 5 ಶಾಸಕರು ಮರಳಿ, ಎಡಪ್ಪಾಡಿ ಬಣ ಸೇರಿಕೊಂಡಿದ್ದಾರೆ.

ರಾಜೀನಾಮೆ ನೀಡಿದ ಬೆನ್ನಲ್ಲೇ ಟಿವಿಕೆ ಪಕ್ಷದ ಹಿರಿಯ ನಾಯಕ ಅಧವ್‌ ಅರ್ಜುನ್‌ ಅವರನ್ನು ಭೇಟಿಯಾಗಿದ್ದಾರೆ. ಮರಗಥಂ ಕುಮಾರವೇಲ್‌, ಸತ್ಯಭಾಮಾ ಮತ್ತು ಜಯಕುಮಾರ್‌ ರಾಜೀನಾಮೆ ನೀಡಿದ ಶಾಸಕರಾಗಿದ್ದು, ಇವರೆಲ್ಲರೂ ಟಿವಿಕೆ ಪಕ್ಷ ಸೇರ್ಪಡೆಯಾಗಿ ಮರಳಿ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಇದರೊಂದಿಗೆ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಎರಡು ಹೋಳಾಗಿದ್ದ ಅಣ್ಣಾಡಿಎಂಕೆ ಬಣ ಮತ್ತೆ ಹೋಳಾಗಿದೆ.

ಇತ್ತೀಚೆಗೆ ವಿಧಾನಸಭೆಯಲ್ಲಿ ಸಿಎಂ ವಿಜಯ್‌ ಅವರು ವಿಶ್ವಾಸಮತ ಯಾಚಿಸಿದ ವೇಳೆ ಇದೀಗ ರಾಜೀನಾಮೆ ನೀಡಿದ ಮೂವರು ಸೇರಿ 25ಕ್ಕೂ ಹೆಚ್ಚು ಅಣ್ಣಾಡಿಎಂಕೆ ಶಾಸಕರು ಸರ್ಕಾರದ ಪರವಾಗಿ ಮತ ಚಲಾಯಿಸಿದ್ದರು. ಇದೀಗ 8 ಜನರು ಹೊರಬಿದ್ದ ಪರಿಣಾಮ ಷಣ್ಮುಗಂ ಬಣದ ಸಂಖ್ಯಾಬಲ 25ರಿಂದ 17ಕ್ಕೆ ಕುಸಿದಿದೆ. ಮತ್ತೊಂದೆಡೆ ಪಳನಿ ಬೆಂಬಲಿಸುವ ಶಾಸಕರ ಬಣದ ಸಂಖ್ಯೆ 25ಕ್ಕೆ ಏರಿದೆ.

ಸದ್ಯ ವಿಧಾನಸಭೆಯಲ್ಲಿ 107 ಶಾಸಕರ ಬಲ ಹೊಂದಿರುವ ವಿಜಯ್‌ ಪಕ್ಷಕ್ಕೆ ಕಾಂಗ್ರೆಸ್‌ ಮತ್ತು ಇತರೆ ಸಣ್ಣಪುಟ್ಟ ಪಕ್ಷಗಳ ಬೆಂಬಲ ಸೇರಿ ಒಟ್ಟು 120 ಶಾಸಕರ ಬೆಂಬಲ ಇದೆ. ಮುಂದಿನ ದಿನಗಳಲ್ಲಿ ಇಷ್ಟೇ ಬಹುಮತ ನಂಬಿಕೊಂಡು ಸರ್ಕಾರ ಮುಂದುವರೆಸುವುದು ಕಷ್ಟ ಎನ್ನುವ ಕಾರಣಕ್ಕೆ ಟಿವಿಕೆ ಸರ್ಕಾರ ಮಿನಿ ಆಪರೇಷನ್‌ ವಿಷಲ್‌ ನಡೆಸಿದೆ ಎನ್ನಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೇಕೆದಾಟು ಡ್ಯಾಮ್‌ ವಿರುದ್ಧ ತ.ನಾಡು ಸಿಎಂ ವಿಜಯ್‌ ಸೀಟಿ
ಮತ್ತೆ ಪೆಟ್ರೋಲ್‌, ಡೀಸೆಲ್‌ ಶಾಕ್‌ - ಬೆಲೆ ಮತ್ತಷ್ಟು ಹೆಚ್ಚಳ