ಸಿಇಸಿಗೆ ವಿಪಕ್ಷಗಳ ವಾಗ್ದಂಡನೆ - ಖರ್ಗೆ ದಿಲ್ಲಿ ನಿವಾಸದಲ್ಲಿ ಅಣಕು ಕಾರ್ಯಕ್ರಮ

Published : Nov 01, 2026, 07:32 AM IST
india block

ಸಾರಾಂಶ

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ವಿರುದ್ಧ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟ ಶನಿವಾರ ಸಾಂಕೇತಿಕವಾಗಿ ಸಾರ್ವಜನಿಕ ಅಣಕು ವಾಗ್ದಂಡನೆ ಪ್ರಕ್ರಿಯೆ ನಡೆಸಿತು.

ನವದೆಹಲಿ: ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ವಿರುದ್ಧ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟ ಶನಿವಾರ ಸಾಂಕೇತಿಕವಾಗಿ ಸಾರ್ವಜನಿಕ ಅಣಕು ವಾಗ್ದಂಡನೆ ಪ್ರಕ್ರಿಯೆ ನಡೆಸಿತು.

ರಾಮಲೀಲಾ ಮೈದಾನದಲ್ಲಿ ಭಾನುವಾರ ಆಯೋಜಿಸಿರುವ ಪ್ರತಿಪಕ್ಷಗಳ ‘ಚಲೋ ದಿಲ್ಲಿ’ಗೆ ಒಂದು ದಿನ ಮುನ್ನ ನಡೆದ ಈ ಅಣಕು ವಾಗ್ದಂಡನೆಯಲ್ಲಿ ಜ್ಞಾನೇಶ್‌ ಕುಮಾರ್ ಅವರು ಸಾಂವಿಧಾನಿಕ ಸಂಸ್ಥೆಯನ್ನು ಆಡಳಿತಾರೂಢ ಪಕ್ಷಕ್ಕೆ ಅಡವಿಟ್ಟಿದ್ದಾರೆ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರ ಆದೇಶದಂತೆ ಚುನಾವಣಾ ಆಕ್ರಮ, ಮತಗಳವಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಯಿತು.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿ ನಿವಾಸದಲ್ಲಿ ನಡೆದ ಈ ಪ್ರಕ್ರಿಯೆಯ ಅಧ್ಯಕ್ಷತೆಯನ್ನು ಲೋಕಸಭೆ ಮಾಜಿ ಸ್ಪೀಕರ್‌ ಮೀರಾ ಕುಮಾರ್‌ ವಹಿಸಿದ್ದರು. ಖರ್ಗೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಇಂಡಿಯಾ ಒಕ್ಕೂಟದ ನಾಯಕರು, ಸಂಸದರು, ನಾಗರಿಕ ಸಮಾಜದ ಪ್ರತಿನಿಧಿಗಳು ಮತ್ತು ಮತದಾರರ ಪಟ್ಟಿಯಿಂದ ಹೊರಗುಳಿಯಲ್ಪಟ್ಟ ಕೆಲವರು ಉಪಸ್ಥಿತರಿದ್ದರು.

ಬಹುತೇಕ ಲೋಕಸಭೆ ಮಾದರಿಯಲ್ಲೇ ರಚಿಸಲಾದ ರಚಿಸಲಾದ ವ್ಯವಸ್ಥೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಜ್ಞಾನೇಶ್‌ ಕುಮಾರ್‌ ವಿರುದ್ಧ ವಾಗ್ದಂಡನೆಯ ನಿರ್ಣಯ ಮಂಡಿಸಿದರು.

ಜ್ಞಾನೇಶ್‌ ಕುಮಾರ್‌ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿದ ಅವರು, ಅ‍ವರನ್ನು ವಜಾ ಮಾಡುವಂತೆ ಆಗ್ರಹಿಸಿದರು. ಇದೇ ವೇಳೆ ಮುಖ್ಯ ಚುನಾವಣಾ ಆಯುಕ್ತರ ನೇಮಕ ಕುರಿತ 2023ರ ಕಾನೂನು ಹಿಂಪಡೆಯುವುದು ಹಾಗೂ ಎಸ್‌ಐಆರ್‌ ಅನ್ನು ರದ್ದು ಮಾಡುವಂತೆಯೂ ಒತ್ತಾಯಿಸಿದರು.

6 ನಿರ್ಣಯ ಮಂಡನೆ

- ಆಡಳಿತಾರೂಢ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮಕ್ಕೆ ಅ‍ವಕಾಶ ಮಾಡಿಕೊಟ್ಟಿದ್ದಾರೆ

- ದೇಶದಲ್ಲಿ 13.2 ಕೋಟಿಯಷ್ಟು ಬೃಹತ್‌ ಪ್ರಮಾಣದ ಮತದಾರರ ಹೆಸರು ಮತಪಟ್ಟಿಯಿಂದ ಹೊರಗುಳಿಯಲು ಜ್ಞಾನೇಶ್‌ ಕುಮಾರ್‌ ಕಾರಣ. ಪಕ್ಷಪಾತಿ ಕ್ರಮ ಹಾಗೂ ಎಸ್‌ಐಆರ್‌ ಮೂಲಕ ಅವರು ಈ ಕೆಲಸ ಮಾಡಿದ್ದಾರೆ.

- ಸಂಸತ್ತಿನ ಅನುಮತಿ ಇಲ್ಲದೆ ಫಾರಂ 6 ಅನ್ನು ಬದಲಾಯಿಸಿದ್ದಾರೆ.

- ಇಸಿಐಎನ್‌ಇಟಿ ಮೂಲಕ ಮತದಾರರ ಪಟ್ಟಿ ಡೇಟಾ ಮೇಲೆ ಕೇಂದ್ರೀಕೃತ ನಿಯಂತ್ರಣ ಸಾಧಿಸಿದ್ದಾರೆ. ಈ ಮೂಲಕ ಅನಧಿಕೃತವಾಗಿ ಮತದಾರರ ಹೆಸರು ತೆಗೆದುಹಾಕುವಂತೆ ನೋಡಿಕೊಂಡಿದ್ದಾರೆ.

- ಚುನಾವಣಾ ಆಯೋಗದ ಮತ್ತಿಬ್ಬರು ಆಯುಕ್ತರ ಅಭಿಪ್ರಾಯವನ್ನು ಕಡೆಗಣಿಸಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

- ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಅಡವಿಟ್ಟಿದ್ದಾರೆ. ಅವರ ನಿರ್ದೇಶನದಂತೆ ಕೆಲಸ ಮಾಡಿದ್ದಾರೆ.

ಸಂಸತ್ತಿನ ಪ್ರತಿರೂಪ

ಅಣಕು ಸಾರ್ವಜನಿಕ ವಾಗ್ದಂಡನೆಗಾಗಿ ಖರ್ಗೆ ಅವರ ನಿವಾಸದಲ್ಲಿ ಇಡೀ ವೇದಿಕೆಯನ್ನು ಲೋಕಸಭೆಯ ಪ್ರತಿರೂಪದಂತೆ ರೂಪಿಸಲಾಗಿತ್ತು. ಸಂಸತ್ತಿನಲ್ಲಿ ಸಂಸದರಿಗೆ ಕೂರಲು ಇರುವ ವ್ಯವಸ್ಥೆಯಂತೆಯೇ ಇಲ್ಲೂ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಪಕ್ಷಗಳ ಸಂಸದರಿಗೆ ಮಾತನಾಡಲು ಅನುವಾಗುವಂತೆ ಮೊದಲ ಮೂರು ಸರದಿಗೆ ಮೈಕ್ರೋಫೋನ್‌ಗಳನ್ನೂ ಅಳವಡಿಸಲಾಗಿತ್ತು. ಖರ್ಗೆ, ಮಾತ್ರವಲ್ಲದೆ ಇಂಡಿಯಾ ಬ್ಲಾಕ್‌ನ ಹಲವು ಸಂಸದರು ಮಾತನಾಡಿ ಜ್ಞಾನೇಶ್‌ ಕುಮಾರ್‌ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜಗನ್‌ ಹಟಕ್ಕೆ ಮಣಿದ ಶರ್ಮಿಳಾ - ಯಲಹಂಕ ಪ್ಯಾಲೇಸ್‌ನಲ್ಲಿ ಇಲ್ಲ ವೈಎಸ್ಸಾರ್‌ ಮೊಮ್ಮಗಳ ಮದುವೆ
ಭಾರತದಲ್ಲಿ ಬಡತನ ಇಳಿಕೆ ವಿಶ್ವದಲ್ಲೇ ಅತ್ಯಂತ ವೇಗದ್ದು