ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬಡತನ ಕಡಿಮೆಯಾಗುತ್ತಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂದು ವಿಶ್ವಬ್ಯಾಂಕ್‌ನ ‘ಇಂಡಿಯಾ ಪಾವರ್ಟಿ ಆ್ಯಂಡ್‌ ಇಕ್ವಿಟಿ ಬ್ರೀಫ್‌: ಅಕ್ಟೋಬರ್‌ 2026’ ವರದಿ ತಿಳಿಸಿದೆ. 2011ರಿಂದ 2023ರ (12 ವರ್ಷದ) ಅವಧಿಯಲ್ಲಿ ದೇಶದ 49.6 ಕೋಟಿ ಜನ ಬಡತನದಿಂದ ಹೊರಬಂದಿದ್ದಾರೆ

ನವದೆಹಲಿ: ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬಡತನ ಕಡಿಮೆಯಾಗುತ್ತಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂದು ವಿಶ್ವಬ್ಯಾಂಕ್‌ನ ‘ಇಂಡಿಯಾ ಪಾವರ್ಟಿ ಆ್ಯಂಡ್‌ ಇಕ್ವಿಟಿ ಬ್ರೀಫ್‌: ಅಕ್ಟೋಬರ್‌ 2026’ ವರದಿ ತಿಳಿಸಿದೆ. 2011ರಿಂದ 2023ರ (12 ವರ್ಷದ) ಅವಧಿಯಲ್ಲಿ ದೇಶದ 49.6 ಕೋಟಿ ಜನ ಬಡತನದಿಂದ ಹೊರಬಂದಿದ್ದಾರೆ ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ.

374 ರು.ಗಿಂತ ಕಡಿಮೆ ಆದಾಯ ಹೊಂದಿರುವವರ ಪ್ರಮಾಣ 2011ರಲ್ಲಿ ಶೇ.57.7

ದಿನಕ್ಕೆ ಸುಮಾರು 374 ರು.ಗಿಂತ ಕಡಿಮೆ ಆದಾಯ ಹೊಂದಿರುವವರ ಪ್ರಮಾಣ 2011ರಲ್ಲಿ ಶೇ.57.7ರಷ್ಟಿತ್ತು. 2023ರಲ್ಲಿ ಇದು ಶೇ.16.1ಕ್ಕೆ ಇಳಿಕೆಯಾಗಿದೆ. ತೀವ್ರ ಬಡತನದ ಪ್ರಮಾಣವೂ ಇದೇ ಅವಧಿಯಲ್ಲಿ ಶೇ.27.1ರಿಂದ ಶೇ.2.6ಕ್ಕೆ ಕುಸಿದಿದೆ. ದಿನಕ್ಕೆ 3 ಡಾಲರ್‌ಗಿಂತ (284.74 ರು.) ಕಡಿಮೆ ಆದಾಯ ಹೊಂದಿರುವವರನ್ನು ತೀವ್ರ ಬಡವರು ಎಂದು ಪರಿಗಣಿಸಲಾಗಿದೆ.

ಖರೀದಿ ಪ್ರಮಾಣದಲ್ಲಿನ ಹೆಚ್ಚಳ

ಖರೀದಿ ಪ್ರಮಾಣದಲ್ಲಿನ ಹೆಚ್ಚಳ, ಮಹಿಳೆಯರ ಉದ್ಯೋಗಾವಕಾಶಗಳ ವೃದ್ಧಿ ಹಾಗೂ ಆಹಾರ ಸಬ್ಸಿಡಿ ಸೇರಿದಂತೆ ಸಾಮಾಜಿಕ ಕಲ್ಯಾಣ ಯೋಜನೆಗಳು ಬಡತನ ಇಳಿಕೆಗೆ ಪ್ರಮುಖ ಕಾರಣಗಳಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

2028ರ ವೇಳೆಗೆ ಬಡತನದ ಪ್ರಮಾಣ ಶೇ.12.1ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ. ಆದರೆ, ಶ್ರೀಮಂತ ಮತ್ತು ಬಡ ಕಾರ್ಮಿಕರ ನಡುವಿನ ಆದಾಯದ ಅಂತರ ಮುಂದುವರಿದಿದ್ದು, ಉತ್ತಮ ಗಳಿಕೆಯಿರುವ ಶೇ.10ರಷ್ಟು ಕಾರ್ಮಿಕರ ಸರಾಸರಿ ಗಳಿಕೆಯು (ಮೀಡಿಯನ್‌ ಅರ್ನಿಂಗ್‌), ಕಡಿಮೆ ವೇತನದ ಶೇ.10ರಷ್ಟು ಕಾರ್ಮಿಕರ ಗಳಿಕೆಗಿಂತ 2023ರಲ್ಲಿ 13 ಪಟ್ಟು ಹೆಚ್ಚಿತ್ತು ಎಂದೂ ಇದರಲ್ಲಿ ತಿಳಿಸಲಾಗಿದೆ.