;Resize=(412,232))
ನವದೆಹಲಿ: ವಿಪಕ್ಷಗಳ ತೀವ್ರ ಗದ್ದಲ, ಪ್ರತಿಭಟನೆ ಹಾಗೂ ಧರಣಿಗಳ ನಡುವೆಯೇ ಸಂಸತ್ತಿನ ಮುಂಗಾರು ಅಧಿವೇಶನವು ಗುರುವಾರ ಮುಕ್ತಾಯಗೊಂಡಿದೆ. ಲೋಕಸಭೆ ಮತ್ತು ರಾಜ್ಯಸಭೆ ಎರಡನ್ನೂ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಜು.20ರಿಂದ ಆರಂಭವಾಗಿದ್ದ ಅಧಿವೇಶನವು ಅತ್ಯಂತ ಕಳಪೆ ಉತ್ಪಾದಕತೆಗೆ ಸಾಕ್ಷಿಯಾಗಿದೆ.
ಅಧಿವೇಶನದ ಉದ್ದಕ್ಕೂ ಪ್ರತಿಪಕ್ಷಗಳು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಹಾಗೂ ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು ಪ್ರಕರಣಗಳನ್ನು ಮುನ್ನೆಲೆಗೆ ತಂದು ನಿರಂತರ ಪ್ರತಿಭಟನೆ ನಡೆಸಿದವು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಉತ್ತರಕ್ಕೆ ಪಟ್ಟು ಹಿಡಿದವು. ಹೀಗಾಗಿ ಅಧಿವೇಶನದ ಬಹುತೇಕ ಸಮಯ ಗದ್ದಲದಲ್ಲೇ ವ್ಯರ್ಥವಾಯಿತು.
ವಿಪಕ್ಷಗಳ ತೀವ್ರ ಕೋಲಾಹಲದ ನಡುವೆಯೂ, ಈ ಬಾರಿ 12 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಈ ಪೈಕಿ ಕೇವಲ ಒಂದು ಮಸೂದೆ ಬಗ್ಗೆ ಚರ್ಚೆ ನಡೆಸಿ ಅಂಗೀಕಾರ ಪಡೆಯಲಾಗಿದೆ. ಉಳಿದ ಮಸೂದೆಗಳನ್ನು ಯಾವುದೇ ಚರ್ಚೆಯಿಲ್ಲದೆ ಧ್ವನಿಮತದ ಮೂಲಕ ಪಾಸು ಮಾಡಲಾಗಿದೆ. ಲೋಕಸಭೆ ಶೇ.19 ಹಾಗೂ ರಾಜ್ಯಸಭೆ ಶೇ.39ರಷ್ಟು ಉತ್ಪಾದಕತೆಯನ್ನು ಸಾಧಿಸಿವೆ.
ಆರೋಪ-ಪ್ರತ್ಯಾರೋಪ: ಪ್ರತಿಪಕ್ಷಗಳು ಚರ್ಚೆಯಿಂದ ಓಡಿಹೋಗುತ್ತಿವೆ ಮತ್ತು ಕಲಾಪವನ್ನು ಉದ್ದೇಶಪೂರ್ವಕವಾಗಿ ಹಾಳುಮಾಡುತ್ತಿವೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ನಾಯಕರಾದ ಜೈರಾಂ ರಮೇಶ್ ಮತ್ತು ಗೌರವ್ ಗೊಗೋಯ್, ‘ಸರ್ಕಾರವೇ ಚರ್ಚೆಗೆ ಹೆದರಿ ಓಡಿಹೋಗುತ್ತಿದೆ. ದೇಶದ ಪ್ರಮುಖ ಸಮಸ್ಯೆಗಳ ಬಗ್ಗೆ ಮಾತನಾಡಲು ಸರ್ಕಾರಕ್ಕೆ ಆಸಕ್ತಿಯಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.