ಜೆನ್‌ಝೀ ವಿರುದ್ಧ ಹಿಂಸೆ: ರಾಹುಲ್‌ ವರ್ಸಸ್ ಅಮಿತ್‌ ಶಾ

Published : Aug 13, 2026, 12:18 PM IST
Amit Shah vs Rahul Gandhi

ಸಾರಾಂಶ

ದೆಹಲಿಯಲ್ಲಿ ವಿದ್ಯಾರ್ಥಿಗಳ (ಜೆನ್‌ ಝೀ) ಪ್ರತಿಭಟನೆ ವೇಳೆ ನಡೆದ ಪೊಲೀಸ್ ಬಲಪ್ರಯೋಗದ ಕುರಿತು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.

ನವದೆಹಲಿ : ದೆಹಲಿಯಲ್ಲಿ ವಿದ್ಯಾರ್ಥಿಗಳ (ಜೆನ್‌ಝೀ) ಪ್ರತಿಭಟನೆ ವೇಳೆ ನಡೆದ ಪೊಲೀಸ್ ಬಲಪ್ರಯೋಗದ ಕುರಿತು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಬುಧವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ತಾವು ಈ ಬಗ್ಗೆ ಚರ್ಚೆಗೆ ಸಿದ್ಧ ಎಂದು ಸವಾಲು ಎಸೆದರೆ, ‘ನಿಮ್ಮ ಉಪದೇಶ ಬೇಡ. ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ್ದು ಯಾರೆಂದು ಹೇಳಿ’ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಪ್ರತಿಸವಾಲು ಹಾಕಿದ್ದಾರೆ. ಇದೇ ವಿಚಾರ ಲೋಕಸಭೆ ಕಲಾಪದಲ್ಲೂ ಪ್ರಸ್ತಾಪವಾಗಿ ಕೋಲಾಹಲ ಸೃಷ್ಟಿ ಆಗಿದ್ದು, ಯಾವುದೇ ಚರ್ಚೆ ನಡೆಯದೇ ಕಲಾಪ ಗುರುವಾರಕ್ಕೆ ಮುಂದೂಡಿಕೆ ಆಗಿದೆ.

ಇದರ ನಡುವೆ, ಪ್ರತಿಪಕ್ಷಗಳ ಧೋರಣೆಗೆ ಕಿಡಿಕಾರಿರುವ ಕೇಂದ್ರ ಸಂಸದೀಯ ಸಚಿವ ಕಿರಣ್‌ ರಿಜಿಜು ‘ನಾನು ಸಂಪೂರ್ಣವಾಗಿ ನಿರಾಶೆಗೊಂಡಿದ್ದೇನೆ. ಸರ್ಕಾರವು ಸಂಸತ್ತಿನಲ್ಲಿ ಚರ್ಚೆಯನ್ನು ಬಯಸುತ್ತಿದ್ದರೆ ಆದರೆ ವಿಪಕ್ಷಗಳು ಚರ್ಚೆಗೆ ಒಪ್ಪದೇ ಓಡಿಹೋಗುತ್ತಿವೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ಇಂಥ ಸನ್ನಿವೇಶ ನೋಡುತ್ತಿದ್ದೇನೆ. ವಿಪಕ್ಷಗಳಿಗೆ ಧೈರ್ಯವಿಲ್ಲ’ ಎಂದಿದ್ದಾರೆ.

ಚರ್ಚೆಗೆ ಸಿದ್ಧ- ಅಮಿತ್ ಶಾ ಸವಾಲು:

‘ಈ ಬಗ್ಗೆ ಖುದ್ದು ಸದನಕ್ಕೆ ಗೃಹ ಸಚಿವರು ಉತ್ತರ ನೀಡಬೇಕು’ ಎಂಬ ವಿಪಕ್ಷಗಳ ಪಟ್ಟಿಗೆ ಮಣಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬುಧವಾರ ಬೆಳಗ್ಗೆ ಸಂಸತ್ತಿನ ಹೊರಗೆ ಸುದ್ದಿಗಾರರ ಜತೆ ಮಾತನಾಡಿ, ‘ವಿದ್ಯಾರ್ಥಿಗಳ ಪ್ರತಿಭಟನೆ ಸೇರಿದಂತೆ ಸಂಸತ್ತಿನಲ್ಲಿ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ. ಸದನ ನಡೆಯಲು ಅವಕಾಶ ಪ್ರತಿಪಕ್ಷಗಳು ಅವಕಾಶ ನೀಡಬೇಕು. ಬುಧವಾರ ಮಧ್ಯಾಹ್ನ 2 ಗಂಟೆಯೊಳಗೆ ಈ ವಿಷಯದ ಕುರಿತು ಚರ್ಚೆಗಾಗಿ ಲೋಕಸಭೆ ಸ್ಪೀಕರ್‌ಗೆ ಪ್ರತಿಪಕ್ಷಗಳು ಲಿಖಿತ ನೋಟಿಸ್ ನೀಡಬೇಕು. ನಾವು ಇಂದು (ಬುಧವಾರ) ಮಧ್ಯಾಹ್ನ 3 ಗಂಟೆಯಿಂದ ನಾಳೆ (ಗುರುವಾರ) ಮಧ್ಯಾಹ್ನ 3 ಗಂಟೆಯವರೆಗೆ ಚರ್ಚೆ ನಡೆಸಬಹುದು. ನಾನು ಸದಸ್ಯರ ಎಲ್ಲ ಪ್ರಶ್ನೆಗಳಿಗೂ ಖುದ್ದು ಹಾಜರಿದ್ದು ಉತ್ತರ ನೀಡುತ್ತೇನೆ’ ಎಂದರು.

ಇದಾದ ಬಳಿಕ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯದ ಕುರಿತು ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಚರ್ಚೆಗೆ ವಿರೋಧ ಪಕ್ಷದ ಜೊತೆ ಸಮಾಲೋಚಿಸುವಂತೆ ಒತ್ತಾಯಿಸಿದರು.

ಉಪದೇಶ ಬೇಡ- ರಾಹುಲ್‌ ತಿರುಗೇಟು:

ಅಮಿತ್‌ ಶಾ ಸವಾಲಿಗೆ ಪ್ರತಿಕ್ರಿಯಿಸಿದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ‘ಅಮಿತ್ ಶಾ ಅವರ ಉಪದೇಶ ಭಾಷಣ ಕೇಳಲು ನಮಗೆ ಆಸಕ್ತಿ ಇಲ್ಲ. ತಮ್ಮ ಮೇಲೆ ಪೆಲೆಟ್‌ ಗನ್‌ನಿಂದ ಗುಂಡು ಹಾರಿಸಲು ಆದೇಶಿಸಿದವರು ಯಾರು ಎಂದು ವಿದ್ಯಾರ್ಥಿಗಳು ಕೇಳುತ್ತಿದ್ದಾರೆ. ಅದನ್ನು ಹೇಳಿದರೆ ಸಾಕು’ ಎಂದು ಪ್ರತಿ ಸವಾಲು ಹಾಕಿದರು.

‘ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲು ಶಾ ಆದೇಶಿಸಿದರೆ, ಅವರು ತಪ್ಪಿತಸ್ಥರಾಗುತ್ತಾರೆ. ಅವರು ಹಾಗೆ ಮಾಡದಿದ್ದರೆ, ಅವರು ಅಸಮರ್ಥರು ಎಂದು ಸಾಬೀತಾಗುತ್ತದೆ. ಎರಡೂ ಪ್ರಕರಣಗಳಲ್ಲಿ ಅವರು ರಾಜೀನಾಮೆ ನೀಡಬೇಕು’ ಎಂದ ರಾಹುಲ್‌, ‘ಷಾ ಅವರ ಇಮೇಜ್‌ ಎಂಬ ಬಲೂನ್‌ನ ಗಾಳಿ ಹೋಗಿದೆ. ಅದರಲ್ಲಿ ಗಾಳಿ ತುಂಬಲು ಕೊನೆಯ ಪ್ರಯತ್ನ ಮಾಡಲಾಯಿತು. ಆದರೆ ಬಲೂನ್ ಒಡೆದಿದು ಹೋಗಿದೆ’ ಎಂದು ವ್ಯಂಗ್ಯವಾಡಿದರು.

‘ಅಮಿತ್ ಶಾ ಅವರಿಗೆ ಧೈರ್ಯವಿಲ್ಲ, ಅವರು ಸದನಕ್ಕೆ ಬರಲು ಸಾಧ್ಯವಿಲ್ಲ’ ಎಂದೂ ರಾಗಾ ಚಾಟಿ ಬೀಸಿದರು.

ಸದನದಲ್ಲಿ ಕೋಲಾಹಲ- ಮುಂದೂಡಿಕೆ:

ಈ ನಡುವೆ, ಮಧ್ಯಾಹ್ನ 3ಕ್ಕೆ ಲೋಕಸಭೆ ಸಮಾವೇಶಗೊಂಡಾಗ, ‘ವಿದ್ಯಾರ್ಥಿಗಳ ಪ್ರತಿಭಟನೆಯ ಕುರಿತು ತಕ್ಷಣ ಚರ್ಚೆ ಪ್ರಾರಂಭಿಸಲು ಸರ್ಕಾರ ಸಿದ್ಧ. ಗೃಹ ಸಚಿವರು ಪ್ರತಿಪಕ್ಷಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗಿರುವಾಗ ವಿಪಕ್ಷಗಳು ಚರ್ಚೆಯಿಂದ ಓಡಿಹೋಗಬಾರದು’ ಎಂದು ಸಂಸದೀಯ ಸಚಿವ ಕಿರಣ್‌ ರಿಜಿಜು ಹೇಳಿದರು.

ಆಗ ಪ್ರತಿಪಕ್ಷಗಳ ಸಂಸದರು ಮತ್ತೆ ಗಲಾಟೆ ಆರಂಭಿಸಿದರು. ಈ ವೇಳೆ ಬಿಜೆಪಿ ಸಂಸದರು, ಕಾಂಗ್ರೆಸ್-ಜೆಎಂಎಂ ಆಡಳಿತದ ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ಮೇಲೆ ಪೊಲೀಸರ ಬಲಪ್ರಯೋಗ ನಡೆದಿದೆ’ ಎಂದು ತಿರುಗೇಟು ನೀಡಿದರು.ಹೀಗಾಗಿ ಗದ್ದಲ ಮುಂದುವರಿದು, ಸಭಾಧ್ಯಕ್ಷರು ಸದನವನ್ನು ಗುರುವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಿದರು.

ಇಂದು ಕಡೇ ದಿನ:

ಗುರುವಾರ ಕಲಾಪದ ಕೊನೆಯ ದಿನವಾಗಿದ್ದು, ಈ ವೇಳೆಯಾದರೂ ಜೆನ್‌ಝೀ ಹಿಂಸೆ ಬಗ್ಗೆ ಚರ್ಚೆ ಏರ್ಪಟ್ಟು ಗೃಹ ಸಚಿವ ಅಮಿತ್‌ ಶಾ ಉತ್ತರ ನೀಡುವರೇ ಕಾದು ನೋಡಬೇಕಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕಾವಡ ಯಾತ್ರೆ : ಹರಿದ್ವಾರದಲ್ಲಿ ಮೂತ್ರ ಬಾಟಲಿ, 7000 ಟನ್‌ ಕಸದ ರಾಶಿ!
ಜೈಲಲ್ಲೇ ಇಮ್ರಾನ್‌ ಸಾವು ಎಂದ ಪತ್ರಕರ್ತ: ಪಾಕ್‌ನಲ್ಲಿ ಸಂಚಲನ