ಏ.26ರ ನಂತರ ರಾಹುಲ್‌ರಿಂದ ಸುರಕ್ಷಿತ ಜಾಗಕ್ಕೆ ಹುಡುಕಾಟ ನಡೆಯಲಿದ್ದು, ಧೈರ್ಯವಿಲ್ಲದೆ ಕೆಲವು ಗಾಂಧಿಗಳಿಂದ ಸ್ಪರ್ಧೆಯೇ ಇಲ್ಲದೆ ರಾಜ್ಯಸಭೆಗೆ ತೆರಳಿದ್ದಾರೆ.
ನಾಂದೇಡ್ (ಮಹಾರಾಷ್ಟ್ರ) : ‘ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಕೇರಳದ ವಯನಾಡ್ ಕ್ಷೇತ್ರದಲ್ಲೂ ಕಾಂಗ್ರೆಸ್‌ನ ಶೆಹಜಾದೆ (ರಾಹುಲ್ ಗಾಂಧಿ) ಸೋಲಲಿದ್ದು, ಆ ನಂತರ ಸುರಕ್ಷಿತ ಸ್ಥಾನವನ್ನು ಹುಡುಕಬೇಕಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.
ನಾಂದೇಡ್ ಮತ್ತು ಹಿಂಗೋಲಿ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ಮೊದಲ ಹಂತದ ಲೋಕಸಭಾ ಚುನಾವಣೆಗೆ ಲಭ್ಯವಿರುವ ಮಾಹಿತಿಯು ಎನ್‌ಡಿಎ ಪರವಾಗಿ ಏಕಪಕ್ಷೀಯ ಮತದಾನವಾಗಿದೆ ಎಂದು ಸೂಚಿಸುತ್ತದೆ ಎಂದರು.
ರಾಹುಲ್ ಗಾಂಧಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ‘ಅಮೇಠಿ ಸೋತ ನಂತರ ಕಾಂಗ್ರೆಸ್‌ನ ಶೆಹಜಾದಾ ವಯನಾಡನ್ನೂ ಕಳೆದುಕೊಳ್ಳುತ್ತಾರೆ. ಆದ್ದರಿಂದ ಅವರು ಏಪ್ರಿಲ್ 26 ರ ನಂತರ ಸುರಕ್ಷಿತ ಸ್ಥಾನವನ್ನು ಹುಡುಕಬೇಕಾಗಿದೆ’ ಎಂದು ಹೇಳಿದರು.
ಸೋನಿಯಾ ಗಾಂಧಿ ಅವರನ್ನು ಉಲ್ಲೇಖಿಸಿ, ಕೆಲವು ಇಂಡಿಯಾ ಬ್ಲಾಕ್ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಲು ಧೈರ್ಯವಿಲ್ಲದ ಕಾರಣ ಲೋಕಸಭೆಯನ್ನು ತೊರೆದು ರಾಜ್ಯಸಭೆಗೆ ತೆರಳಿದ್ದಾರೆ ಎಂದು ಲೇವಡಿ ಮಾಡಿದ ಅವರು, ‘ಇದೇ ಮೊದಲ ಬಾರಿಗೆ ಕುಟುಂಬಸ್ಥರು (ಗಾಂಧಿ ಕುಟುಂಬ) ತಾವು ವಾಸಿಸುವ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವುದಿಲ್ಲ, ಏಕೆಂದರೆ ಅಲ್ಲಿ ಪಕ್ಷದ ಅಭ್ಯರ್ಥಿಯೇ ಇಲ್ಲ’ ಎಂದು ಮೊನಚು ವಾಗ್ದಾಳಿ ನಡೆಸಿದರು.
‘ಕಾಂಗ್ರೆಸ್ ಆಡಳಿತದ ಕೆಟ್ಟ ಆಡಳಿತವನ್ನು ಸರಿಪಡಿಸಲು ನಾನು 10 ವರ್ಷಗಳನ್ನು ಕಳೆದಿದ್ದೇನೆ. ಇನ್ನೂ ಸಾಕಷ್ಟು ಕೆಲಸ ಮಾಡಬೇಕಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.‘ಅವರು ಏನು ಬೇಕಾದರೂ ಹೇಳಿಕೊಳ್ಳಬಹುದು, ಆದರೆ ವಾಸ್ತವವೆಂದರೆ ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ನಾಯಕರು ಸೋಲನ್ನು ಒಪ್ಪಿಕೊಂಡಿದ್ದಾರೆ. ಇಂಡಿಯಾ ಕೂಟವು ತಮ್ಮ ಭ್ರಷ್ಟಾಚಾರ ಕೃತ್ಯಗಳನ್ನು ರಕ್ಷಿಸಿಕೊಳ್ಳಲು ಒಗ್ಗೂಡಿರುವ ಸ್ವಾರ್ಥಿಗಳ ಗುಂಪು. ಜೂನ್ 4ರ (ಚುನಾವಣೆ ಫಲಿತಾಂಶ ದಿನ) ನಂತರ, ಅವರು ಪರಸ್ಪರ ಹೆಚ್ಚು ಜಗಳವಾಡುತ್ತಾರೆ’ ಎಂದು ಅವರು ಹೇಳಿದರು.